More

    ತ್ಯಾಗರಾಜ ಮಾರುಕಟ್ಟೆ ಹೈಟೆಕ್ ಆಗಲಿದೆ

    ಚಿತ್ರದುರ್ಗ: ನಗರದ ತ್ಯಾಗರಾಜ ಮಾರುಕಟ್ಟೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸುವುದರ ಜತೆಗೆ ಮಾರಾಟಗಾರರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

    ವಾಸವಿ ವಿದ್ಯಾಸಂಸ್ಥೆ ಮುಂಭಾಗದಲ್ಲಿ 2.72 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಾರುಕಟ್ಟೆಯ ಕಟ್ಟಡ ಕಾಮಗಾರಿಯ ಭೂಮಿಪೂಜೆಯನ್ನು ಶನಿವಾರ ನೇರವೇರಿಸಿ ಮಾತನಾಡಿದರು.

    ಇಲ್ಲಿ ಅನೇಕ ದಶಕಗಳಿಂದಲೂ ಮಾರುಕಟ್ಟೆ ಇದ್ದು, ಸಂಪೂರ್ಣ ಶೀತಲಗೊಂಡಿತ್ತು. ಅದಕ್ಕಾಗಿ ತೆರವುಗೊಳಿಸಿ ನಗರಸಭೆಯಿಂದ ನಿರ್ಮಿಸಲಾಗುತ್ತಿದೆ. 60 ಮಂದಿ ವ್ಯಾಪಾರಸ್ಥರು ಸದ್ಯ ರಸ್ತೆ ಬದಿಯಲ್ಲಿ ತರಕಾರಿ, ಸೊಪ್ಪು, ವಿವಿಧ ಹೂಗಳನ್ನು ಮಾರಾಟ ಮಾಡುತ್ತಿದ್ದು, ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಅಲ್ಲದೆ, ಬಿಸಿಲು, ಮಳೆ, ಗಾಳಿಯಿಂದ ರಕ್ಷಿಸಿಕೊಳ್ಳಲು ಮುಂಬರುವ ದಿನಗಳಲ್ಲಿ ಸುಸಜ್ಜಿತ ಕಟ್ಟಡದೊಳಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

    ವ್ಯಾಪಾರದ ಬಳಿಕ ಉಳಿದ ಸೊಪ್ಪು, ತರಕಾರಿಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕಿತ್ತು. ಹೆಚ್ಚು ಹೊರೆಯನ್ನು ತಡೆಯುವ ಉದ್ದೇಶಕ್ಕಾಗಿ ಪ್ರತ್ಯೇಕ ಮಳಿಗೆ ನಿರ್ಮಿಸಲಾಗುವುದು. ಇವುಗಳನ್ನು ವ್ಯಾಪಾರಸ್ಥರಿಗೆ ಲಾಟರಿ ಮೂಲಕ ಹಂಚಲಾಗುವುದು ಎಂದು ಹೇಳಿದರು.

    ವಾಹನಗಳ ನಿಲುಗಡೆಗಾಗಿ ನೆಲ ಮಾಳಿಗೆ ಸೇರಿ ಮೂರು ಅಂತಸ್ತಿನ ಕಟ್ಟಡ ಇಲ್ಲಿ ತಲೆ ಎತ್ತಲಿದೆ. ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಕೋಳಿಬುರುಜನ ಹಟ್ಟಿ, ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆಯ ಜನರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

    ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಹರೀಶ್, ಚಂದ್ರಶೇಖರ್, ಶ್ರೀನಿವಾಸ್, ಮಾಜಿ ಸದಸ್ಯ ಮಹೇಶ್, ಮುಖಂಡರಾದ ರಮೇಶಾಚಾರ್, ಕೃಷ್ಣ, ರಾಜು, ವಸಂತಕುಮಾರ್, ನರಸಿಂಹಮೂರ್ತಿ, ಅರುಣ್‌ಕುಮಾರ್, ಅಂಗಡಿ ಮಂಜುನಾಥ್, ರಾಘವೇಂದ್ರ, ರಮೇಶ್, ಇಂಜಿನಿಯರ್ ಕಿರಣ್, ಎಇಇ ಮಂಜುನಾಥ್, ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts