More

    ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ ಇಬ್ಬರು ನೌಕರರ ನಿಗೂಢ ಸಾವು!

    ಬೆಂಗಳೂರು: ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ)ದಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ನೌಕರರು ಮೃತಪಟ್ಟಿದ್ದು, ಸಾವು ಸಂಭವಿಸಿದ್ದು ಹೇಗೆ ಎಂಬುದು ನಿಗೂಢವಾಗಿ ಉಳಿದಿದೆ. ತುಮಕೂರಿನ ಕೊರಟಗೆರೆ ತಾಲ್ಲೂಕಿನ ಗೊಲ್ಲರಹಟ್ಟಿ ನಿವಾಸಿ ರವಿಕುಮಾರ್ (29) ಮತ್ತು ಒಡಿಶಾದ ದಿಲೀಪ್ ಕುಮಾರ್ ಜನಾ (25) ಸಾವಿಗೀಡಾದವರು.

    ಬಯೋಸೆಂಟರ್ ಇಂಡಿಯಾದ(ಐಎನ್‌ಎ) ನೌಕರರಾದ ರವಿಕುಮಾರ್ ಮತ್ತು ದಿಲೀಪ್‌ನನ್ನು ಕೋಣನಕುಂಟೆ ಕ್ರಾಸ್ ಬಳಿಯ ಪ್ರೆಸ್ಟಿಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ ನೇಮಿಸಿದ್ದರು. ಶನಿವಾರ ಮಧ್ಯಾಹ್ನ 2 ಗಂಟೆಗೆ ಬಂದಿದ್ದ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 5 ಗಂಟೆಯಲ್ಲಿ ಮೇಲ್ವಿಚಾರಕ ರಮೇಶ್ ಬಂದು ವಿಚಾರಿಸಿಕೊಂಡು ಹೋಗಿದ್ದ. ಮತ್ತೆ ರಾತ್ರಿ 7.30ರಲ್ಲಿ ಮೇಲ್ವಿಚಾರಕ ತನ್ನ ನೌಕರರಿಗೆ ಕರೆ ಮಾಡಿದಾಗ ಸ್ವೀಕರಿಸಿಲ್ಲ. ನಾಲ್ಕೈದು ಬಾರಿ ಮಾಡಿದರೂ ಯಾವುದೇ ಉತ್ತರ ಸಿಕ್ಕಿಲ್ಲ. ಅನುಮಾನ ಬಂದು ಕೂಡಲೇ ಸೆಕ್ಯೂರಿಟಿ ಗಾರ್ಡ್‌ಗೆ ವಿಷಯ ತಿಳಿಸಿ ಸ್ಥಳಕ್ಕೆ ಹೋಗಿ ನೋಡುವಂತೆ ತಿಳಿಸಿದ್ದಾನೆ.

    ಎಸ್‌ಟಿಪಿ ಬಳಿಗೆ ಹೋಗಿ ನೋಡಿದಾಗ ಇಬ್ಬರೂ ಪ್ರಜ್ಞೆ ತಪ್ಪಿ ಬಿಟ್ಟಿರುವುದು ಗೊತ್ತಾಗಿದೆ. ಕೂಡಲೇ ಸೆಕ್ಯೂರಿಟಿ ಗಾರ್ಡ್ ಮೇಲ್ವಿಚಾರಕ ರಮೇಶ್‌ಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ 2 ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ವಿಷ ಅನಿಲ ಸೇವನೆ ಅಥವಾ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರಾ ಎಂಬುದು ಗೊಂದಲ ಮೂಡಿದೆ. ದೇಹದ ಮೇಲೆ ಸುಟ್ಟ ಗಾಯವಾಗಿಲ್ಲ. ವಿಷ ಅನಿಲ ಸೇವನೆಗೂ ಸೂಕ್ತ ಕಾರಣ ಸಿಗುತ್ತಿಲ್ಲ. ಅದಕ್ಕಾಗಿ ಮರಣೋತ್ತರ ವರದಿ ಬಂದ ಮೇಲೆ ಖಚಿತ ಮಾಹಿತಿ ಲಭ್ಯವಾಗಲಿದೆ.

    ಪ್ರಸ್ತುತ ರವಿಕುಮಾರ್ ಪತ್ನಿ ಶಶಿಕಲಾ ನೀಡಿದ ದೂರಿನ ಮೇರೆಗೆ ಐಎನ್‌ಸಿ ಮಾಲೀಕ ಮುಕ್ತಿಯಾರ್ ಅಹಮದ್, ಎಲೆಕ್ಟ್ರಿಕಲ್ ಇನ್‌ಚಾರ್ಜ್ ಪ್ರಭು, ಮೇಲ್ವಿಚಾರಕ ರಮೇಶ್, ಪ್ರೆಸ್ಟಿಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ ವ್ಯವಸ್ಥಾಪಕ ಮತ್ತು ಮಾಲೀಕನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ನೌಕರರಿಗೆ ಸರಿಯಾದ ತರಬೇತಿ ನೀಡದೆ, ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ರಕ್ಷಣಾ ಸಾಮಾಗ್ರಿ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಿಯತಮನ ಮರೆಯಲು ಅರಿವಳಿಕೆಯ ಮೊರೆಹೋದ ನರ್ಸ್; ಆಮೇಲಾಗಿದ್ದೇನು?

    ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts