More

    ಗ್ರಾಪಂ ಚುನಾವಣೆಯಿಂದ 2 ಗ್ರಾಮಗಳು ದೂರ

    ಹರಿಹರ: ಪ್ರತ್ಯೇಕ ಗ್ರಾಮ ಪಂಚಾಯಿತಿ ರಚನೆಗೆ ಪಟ್ಟು ಹಿಡಿದಿರುವ ಹರಿಹರ ತಾಲೂಕಿನ ಗಂಗನರಸಿ ಹಾಗೂ ಮಳಲಹಳ್ಳಿ ಗ್ರಾಮಗಳು ಚುನಾವಣೆಗೆ ನಾಮಪತ್ರ ಸಲ್ಲಿಸದೆ ದೂರ ಉಳಿದಿವೆ.

    ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನರಸಿಯ 6 ಎಳೆಹೊಳೆ ಗ್ರಾಪಂನ ಮಳಲಹಳ್ಳಿಯ 1, ಸಾರಥಿ ಗ್ರಾಪಂನ ದೀಟೂರಿನ 6 ಕ್ಷೇತ್ರಗಳಿಗೆ ಜುಲೈ 23ರಂದು ಚುನಾವಣೆ ನಿಗದಿಪಡಿಸಿ ಜು.6ರಿಂದ ಜು.12ರವರೆಗೆ ನಾಮಪತ್ರ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿತ್ತು.

    ದೀಟೂರು ಗ್ರಾಮದ ಆರು ಸ್ಥಾನಗಳಿಗೆ ಒಟ್ಟು 13 ನಾಮಪತ್ರ ಸಲ್ಲಿಕೆಯಾ ಗಿದ್ದು ಬಿಟ್ಟರೆ, ಉಳಿದ ಎರಡು ಗ್ರಾಮಗಳಿಂದ ಯಾವುದೇ ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ. ಪ್ರತ್ಯೇಕ ಗ್ರಾಪಂ ರಚನೆಗೆ ಪಟ್ಟು ಹಿಡಿದ ಗ್ರಾಮಸ್ಥರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಚುನಾವಣೆ ಪ್ರಕ್ರಿಯೆಯಿಂದಲೇ ದೂರ ಉಳಿದಿದ್ದಾರೆ.

    ಗಂಗನರಸಿ ಗ್ರಾಮಸ್ಥರ ಬೇಡಿಕೆಗಳೇನು?: ಗಂಗನರಸಿ 2013ರಲ್ಲಿ ಹರ್ಲಾಪುರ ಗ್ರಾಪಂನಿಂದ ಬೇರ್ಪಟ್ಟು ಗುತ್ತೂರು ಗ್ರಾಪಂಗೆ ಸೇರ್ಪಡೆಯಾಗಿತ್ತು. ಆ ಬಳಿಕ ಗುತ್ತೂರು ಗ್ರಾಮವು ಹರಿಹರ ನಗರಸಭೆಗೆ ಸೇರ್ಪಡೆಯಾಗಿತ್ತು. ಈ ಹಿನ್ನೆಲೆಯಲ್ಲಿ 2019ರಲ್ಲಿ ದೀಟೂರು ಗ್ರಾಮವನ್ನು ಸಾರಥಿ ಹಾಗೂ ಗಂಗನರಸಿ ಗ್ರಾಮವನ್ನು ಕೊಂಡಜ್ಜಿ ಗ್ರಾಪಂ ವ್ಯಾಪ್ತಿಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿತ್ತು.

    ಇದಕ್ಕೊಪ್ಪದ ಗಂಗನರಸಿ ಗ್ರಾಮಸ್ಥರು ನಮ್ಮೂರಿನೊಂದಿಗೆ ದೀಟೂರನ್ನು ಸೇರಿಸಿ ಪ್ರತ್ಯೇಕ ಗ್ರಾಪಂ ಮಾಡಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದರು. ಮನವಿಗೆ ಒಪ್ಪದ ಸರ್ಕಾರ, ಕೊಂಡಜ್ಜಿ ಗ್ರಾಪಂ ವ್ಯಾಪ್ತಿಗೆ ಗಂಗನರಸಿ ಸೇರಿಸಿದ್ದ ಆದೇಶವನ್ನು ಯಥಾವತ್ತಾಗಿ ಜಾರಿ ಮಾಡಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರದ ಆದೇಶ ಒಪ್ಪದ ಗ್ರಾಮಸ್ಥರು ಸಭೆ ನಡೆಸಿ ಚುನಾವಣೆಯಲ್ಲಿ ತಟಸ್ಥ ನಿಲುವು ತಾಳುವ ನಿರ್ಧಾರ ಕೈಗೊಂಡಿದ್ದಾರೆ.

    ಮಳಲಹಳ್ಳಿ ಬೇಡಿಕೆ: ಗ್ರಾಮಸ್ಥರು ಮನೆಗಳ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಕಳೆದ ಬಾರಿ ನಡೆದ ಗ್ರಾಪಂ ಚುನಾವಣೆ ಬಹಿಷ್ಕರಿಸಿದ್ದರು. ಆದೇ ರೀತಿ ಈ ಬಾರಿಯೂ ಯಾವುದೇ ನಾಮಪತ್ರ ಸಲ್ಲಿಸದೇ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ.

    ಗಂಗನರಸಿ ಹಾಗೂ ಮಳಲಹಳ್ಳಿ ಗ್ರಾಮಸ್ಥರಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿತ್ತು. ಚುನಾವಣೆ ನಡೆಯದಿದ್ದರೆ ನಿಮ್ಮ ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತದೆ ಎಂದು ತಿಳಿವಳಿಕೆ ಹೇಳಿ ಮನವೊಲಿಕೆ ಮಾಡಿ ಬಂದಿದ್ದೆವು. ಆದರೆ ಅವರು ತಮ್ಮ ನಡೆಯಿಂದ ಹಿಂದೆ ಸರಿದಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
    ಪೃಥ್ವಿ ಸಾನಿಕಂ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts