More

    ಪೊಲೀಸ್‌ ಆಗಬೇಕಿದ್ದ ಇಬ್ಬರು ಜೈಲು ಸೇರಿದರು; ಅಂದು ಫಿಟ್‌ ಅನಿಸಿಕೊಂಡಿದ್ದವರು ಇಂದು ಅನ್‌ಫಿಟ್‌; ಅವರು ಮಾಡಿದ್ದಾದರೂ ಏನು?

    ಬೆಂಗಳೂರು: ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಗೆ ಬೇರೆಯವರು ಹಾಜರಾಗಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನೆಲ್ಲೇ ಸಿವಿಲ್ ಪೇದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಖಾಕಿ ಧರಿಸಲು ಬಂದ ಇಬ್ಬರು ಅಭ್ಯರ್ಥಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್‌ನ ಬಾಡಿಗವಾಡ ಗ್ರಾಮದ ಬಸವರಾಜ ಹೊನಕುಪ್ಪಿ (22) ಹಾಗೂ ಬಾಗಲಕೋಟೆ ಜಿಲ್ಲೆ ಜಮಖಂಡಿಯ ಕಾಸಪ್ಪ ಮಾಳಪ್ಪ ಎಮ್ಮಿನವರ್ (25) ಬಂಧಿತರು. ಈ ಅಭ್ಯರ್ಥಿಗಳ ಪರವಾಗಿ ದೈಹಿಕ ಮತ್ತು ಲಿಖಿತ ಪರೀಕ್ಷೆ ಎದುರಿಸಿದ ಕಾಶಿನಾಥ್ ತೆಲಸಿಂಗ್ ಮತ್ತು ಸೌರಭ್ ಎಂಬುವರು ತಲೆಮರೆಸಿಕೊಂಡಿದ್ದು, ಹಲಸೂರು ಗೇಟ್ ಪೊಲೀಸರು ಬಂಧನಕ್ಕೆ ಬಲೆಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯ ಪೊಲೀಸ್ ಇಲಾಖೆಯಿಂದ ಪೊಲೀಸ್ ಕಾನ್‌ಸ್ಟೇಬಲ್ (ನಾಗರಿಕ ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿಗೆ 2020-21ರಲ್ಲಿ ಅರ್ಜಿ ಆಹ್ವಾನ ಮಾಡಲಾಗಿತ್ತು. ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಲಿಖಿತ ಮತ್ತು ದೈಹಿಕ ಪರೀಕ್ಷೆ ಮತ್ತು ನಡೆಸಲಾಗಿತ್ತು. ಕೇಂದ್ರ ವಿಭಾಗ ಡಿಸಿಪಿ ಮತ್ತು ಸಿಎಆರ್ ಕೇಂದ್ರ ಎಸಿಪಿ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತರ ವಿಭಾಗಕ್ಕೆ ಆಯ್ಕೆಯಾದ 76 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿತ್ತು. ಮಾರ್ಚ್ 20ರಂದು 25 ಅಭ್ಯರ್ಥಿಗಳ ಮತ್ತು 22ರಂದು 49 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಬಸವರಾಜ ಮತ್ತು ಕಾಸಪ್ಪ ದಾಖಲೆ ಪರಿಶೀಲನೆಗೆ ಗೈರು ಹಾಜರಾಗಿದ್ದರು. ಈ ವೇಳೆ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ ಕರೆಸಿಕೊಳ್ಳಲಾಯಿತು. ಅಭ್ಯರ್ಥಿಗಳು ಬಂದ ಮೇಲೆ ದೈಹಿಕ ಪರೀಕ್ಷೆಗಳ ವಿಡಿಯೋ ತುಣುಕು ಪರಿಶೀಲನೆ ನಡೆಸುತ್ತಿದ್ದಾಗ ಬಸವರಾಜ ಪರವಾಗಿ ಬೇರೊಬ್ಬ ಅಭ್ಯರ್ಥಿ ಇರುವುದು ಕಂಡು ಬಂದಿದೆ. ಈ ಬಗ್ಗೆ ಬಸವರಾಜನನ್ನು ವಿಚಾರಣೆ ನಡೆಸಿದಾಗ 2020ರ ನ.20ರ ಬೆಳಗ್ಗೆ ನಡೆದ ದೈಹಿಕ ಪರೀಕ್ಷೆಗೆ ತನ್ನ ಬದಲಿಗೆ ಸೌರಭ್ ಎಂಬಾತ ಹಾಜರಾಗಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವ ಭಯದಿಂದ ಸೌರಭ್‌ನನ್ನು ಕಳುಹಿಸಿದ್ದಾಗಿ ಹೇಳಿದ್ದಾನೆ.

    ಇದೇ ರೀತಿ ಕಾಸಪ್ಪ ಮಾಳಪ್ಪ ದಾಖಲೆ ಪರಿಶೀಲನೆಗೆ ಗೈರು ಆಗಿದ್ದ. ದೂರವಾಣಿ ಕರೆ ಮಾಡಿ ವಿಚಾರಣೆ ನಡೆಸಿದಾಗ ಅರ್ಜಿಯಲ್ಲಿ ಸಲ್ಲಿಸಿರುವ ಫೋಟೋ ಮತ್ತು ಆತನ ಮುಖ ಚಹರೆಗೂ 2020ರ ಅಕ್ಟೋಬರ್ 20ರ ನಡೆದ ಲಿಖಿತ ಪರೀಕ್ಷೆಯಲ್ಲಿ ಸೆರೆ ಆಗಿರುವ ವಿಡಿಯೋದಲ್ಲಿ ಇರುವ ಅಭ್ಯರ್ಥಿಗೂ ವ್ಯತ್ಯಾಸವಿತ್ತು. ಈ ಕುರಿತು ಕಾಸಪ್ಪ ಮಾಳಪ್ಪನನ್ನು ಪ್ರಶ್ನೆಸಿದಾಗ ದೈಹಿಕ ಪರೀಕ್ಷೆಗೆ ತಾನು ಹಾಜರಾಗಿ ಲಿಖಿತ ಪರೀಕ್ಷೆಗೆ ತನ್ನ ಮಾವನ ಮಗ ಕಾಶಿನಾಥ್ ತೆಲಸಿಂಗ್‌ನನ್ನು ಕಳುಹಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರತ್ಯೇಕ ಪ್ರಕರಣ ದಾಖಲು: ದೈಹಿಕ ಮತ್ತು ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಇಬ್ಬರು ಅಭ್ಯರ್ಥಿಗಳು ಮತ್ತು ಅವರಿಗೆ ಸಹಾಯ ಮಾಡಿದ ಮತ್ತಿಬ್ಬರ ವಿರುದ್ಧ ಸಿಎಆರ್ ಕೇಂದ್ರ ಎಸಿಪಿ ಎಚ್.ಎಂ.ಹರೀಶ್, ಹಲಸೂರು ಗೇಟ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ. ಇದರ ಅನ್ವಯ ಎರಡು ಎಫ್‌ಐಆರ್ ದಾಖಲಾಗಿವೆ. ತಲೆಮರೆಸಿಕೊಂಡಿರುವ ಮತ್ತಿಬ್ಬರ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಬ್ಬಗಳಿಗೆ ಬಿತ್ತು ಕರೊನಾ ಚಾಟಿ ಏಟು; ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿಷೇಧ

    ಚಿನ್ನದ ಹುಡುಕಾಟದಲ್ಲಿ ವಜ್ರ ಕಳೆದುಕೊಂಡವರೆಷ್ಟೋ?; ಇಲ್ಲಿವೆ ಆ ಚಿನ್ನ-ವಜ್ರಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts