More

    ಗೂಗಲ್ ಮ್ಯಾಪ್ ನೋಡಿ ಮನೆಗಳ್ಳತನಕ್ಕೆ ಸ್ಕೆಚ್ ಹಾಕ್ತಿದ್ರಂತೆ ಇವರು!

    ಬೆಳಗಾವಿ: ಆನ್‌ಲೈನ್ ಮೂಲಕ ಮ್ಯಾಪ್ ಹಾಕಿಕೊಂಡು ಮನೆಗೆ ಕನ್ನ ಹಾಕುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಕ್ಯಾಂಪ್ ಠಾಣೆ ಪೊಲೀಸರು ವಾಹನ ಸೇರಿದಂತೆ ಒಟ್ಟು 40 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

    ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಇಸ್ತುರಲ ಗ್ರಾಮದ ಪ್ರಶಾಂತ ಕಾಶಿನಾಥ ಕರೋಶಿ (35) ಹಾಗೂ ಆಜರಾ ತಾಲೂಕಿನ ಧಾಮಣಿ ತಾಲೂಕಿನ ಅವಿನಾಶ ಶಿವಾಜಿ ಅಡಾವಕರ (28) ಬಂಧಿತ ಆರೋಪಿಗಳು. ಬಂಧಿತರಿಂದ 28.08 ಲಕ್ಷ ಮೌಲ್ಯದ ಅರ್ಧ ಕೆಜಿ ಬಂಗಾರದ ಆಭರಣ ಹಾಗೂ 11.50 ಲಕ್ಷ ಮೌಲ್ಯದ ಕಾರು ಸೇರಿ ಒಟ್ಟು 40 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

    ನಗರದ ಲಕ್ಷ್ಮಿಟೆಕ್, ನಕ್ಷತ್ರ ಕಾಲನಿ ಸೇರಿ ವಿವಿಧೆಡೆ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ಕ್ಯಾಂಪ್ ಠಾಣೆ ಪೊಲೀಸರ ತಂಡವು ಪ್ರಕರಣಗಳ ಸುಳಿವು ಹಿಡಿದು ಕೊಲ್ಲಾಪುರ ಜಿಲ್ಲೆಯಲ್ಲಿ ತನಿಖೆ ನಡೆಸಿದ್ದಾಗ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಕಾರು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಅಪರಾಧ ವಿಭಾಗದ ಡಿಸಿಪಿ ಚಂದ್ರಶೇಖರ ನೀಲಗಾರ ಮಾತನಾಡಿ, ಕಳ್ಳತನ ಮಾಡಲು ಮೊದಲಿಗೆ ವೈಜ್ಞಾನಿಕ ರೀತಿಯಲ್ಲಿ ಗೂಗಲ್ ಮ್ಯಾಪ್ ಮೂಲಕ ಹೊರವಲಯದ ಮನೆಗಳ ಮಾಹಿತಿ ಪಡೆದುಕೊಳ್ಳುತ್ತಿದ್ದರು. ನಂತರ ಆ ಪ್ರದೇಶಗಳಿಗೆ ತೆರಳಿ ಯಾವ ಮನೆ ಕೀಲಿ ಹಾಕಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು.

    ಇದಾದ ಬಳಿಕ ಹೊಂಚು ಹಾಕಿ ಮನೆಗೆ ನುಗ್ಗಿ ಮನೆಯಲ್ಲಿಯ ಬಂಗಾರದ ಆಭರಣ, ಹಣ ಹಾಗೂ ವಾಹನ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದರು. ಕಾರ್ಯಾಚರಣೆಯಲ್ಲಿ ಕ್ಯಾಂಪ್ ಪಿಐ ಡಿ. ಸಂತೋಷಕುಮಾರ್, ಎಎಸ್‌ಐ ಬಿ.ಆರ್.ಡೂಗ, ಬಿ.ಬಿ.ಗೌಡರ, ಎ.ಕೆ.ಶಿಂತ್ರೆ, ಎಂ.ಎ.ಪಾಟೀಲ, ಬಿ.ಎಂ.ನರಗುಂದ, ಎಸ್,ಎಚ್, ತಳವಾರ, ಯು,ಎಂ,ಥೈಕಾರ, ಎ.ಎಂ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts