More

    ರಕ್ಷಣೆ ನೀಡಿ ಎಂದ ವೈದ್ಯನಿಗೆ ಅಮಾನತು ಶಿಕ್ಷೆ; ಪರಿಣಾಮ ಇಬ್ಬರು ಡಾಕ್ಟರ್ಸ್​ಗೆ, ಇಬ್ಬರು ನರ್ಸ್​ಗೆ ಕರೊನಾ ಕಾಯಿಲೆ

    ಅನಂತಪುರ (ಆಂಧ್ರ ಪ್ರದೇಶ): ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತನೊಬ್ಬನ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ವೈದ್ಯರು ಹಾಗೂ ಇಬ್ಬರು ನರ್ಸ‌ಗಳಿಗೆ ಸೋಂಕು ದೃಢಪಟ್ಟಿದೆ.

    ಇವರು ಚಿಕಿತ್ಸೆ ಮಾಡುವ ಪೂರ್ವದಲ್ಲಿ ಸೂಕ್ತ ಮುಂಜಾಗರೂಕತೆಯನ್ನು ವಹಿಸಲಿಲ್ಲ. ಇದೇ ಕಾರಣಕ್ಕೆ ರೋಗಿಯ ಸೋಂಕು ಇವರಿಗೆ ಬಾಧಿಸಿದೆ ಎಂದು ಜಿಲ್ಲಾಡಳಿತ ಹೇಳಿಕೆ ನೀಡಿದೆ. ಆದರೆ ವೈದ್ಯರಿಗೆ ಸೂಕ್ತ ರಕ್ಷಣಾ ಸಾಧನ ನೀಡುತ್ತಿಲ್ಲ ಎಂದು ಈಚೆಗಷ್ಟೇ ಡಾ. ಸುಧಾಕರ್‌ ರಾವ್‌ ಎನ್ನುವವರು ದನಿ ಎತ್ತಿದ್ದರು. ‘ವೈದ್ಯರಿಗೆ ಅಗತ್ಯ ಇರುವ ಎನ್‌-95 ಮಾಸ್ಕ್‌ ನಮಗೆ ನೀಡುತ್ತಿಲ್ಲ. ಹಾಗೆಯೇ ಕರ್ತವ್ಯ ನಿರ್ವಹಿಸಿ ಎನ್ನುತ್ತಿದ್ದಾರೆ ಎಂದಿದ್ದ ಡಾ. ಸುಧಾಕರ್‌, ತೆಲಂಗಾಣ ಮುಖ್ಯಮಂತ್ರಿ ಅವರನ್ನು ಹೊಗಳಿದ್ದರು.

    ಅವರು ಈ ಹೇಳಿಕೆ ನೀಡಿ ಮಾಡಿದ್ದ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಇದರ ಬೆನ್ನಲ್ಲೇ ಈಗ ನಾಲ್ವರು ಸಿಬ್ಬಂದಿಗೆ ಸೋಂಕು ತಗುಲಿರುವುದು ಬಹು ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷಗಳು ಡಾ. ಸುಧಾಕರ್‌ ರಾವ್‌ ಅವರಿಂದ ಈ ರೀತಿ ಹೇಳಿಕೆ ನೀಡಿಸಿವೆ ಎಂದು ಆರೋಪ ಮಾಡಲಾಗಿತ್ತು.

    ‘ಈ ನಾಲ್ವರು ಚಿಕಿತ್ಸೆ ನೀಡುತ್ತಿದ್ದ ಸೋಂಕಿತ ವ್ಯಕ್ತಿ ಇದೇ 4ರಂದು ಮೃತಪಟ್ಟಿದ್ದ. ಆ ನಂತರ ಈ ಸಿಬ್ಬಂದಿಯಲ್ಲಿ ಸೋಂಕು ತಗುಲಿರುವ ಲಕ್ಷಣ ಗೋಚರಿಸಿದವು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್‌ ಬಂದಿದೆ. ವೈದ್ಯರು ಮತ್ತು ನರ್ಸ್‌ ಸೂಕ್ತ ರಕ್ಷಣಾ ಕವಚ ಹಾಕಿಕೊಂಡು, ಎಲ್ಲಾ ಮುಂಜಾಗರೂಕತೆಯನ್ನು ತೆಗೆದುಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ’ ಎಂದು ಜಿಲ್ಲಾಧಿಕಾರಿ ಗಂಧಮ್‌ ಚಂದ್ರುಡು ಕೂಡಲೇ ಹೇಳಿಕೆ ನೀಡಿದ್ದಾರೆ.

    ಈ ನಾಲ್ವರು ಸೋಂಕಿತ ವೈದ್ಯಕೀಯ ಸಿಬ್ಬಂದಿಯ ಜತೆ ಸಂಪರ್ಕಕ್ಕೆ ಬಂದಿರುವ 20 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬರನ್ನೂ ಶಂಕಿತ ಸೋಂಕಿತರು ಎಂದೇ ಪರಿಗಣಿಸಬೇಕು, ಯಾರೇ ಬಂದರೂ ಅವರಿಗೆ ಚಿಕಿತ್ಸೆ ನೀಡುವಾಗ ವೈದ್ಯರು ಮುಂಜಾಗರೂಕತೆಯನ್ನು ತೆಗೆದುಕೊಳ್ಳಲೇಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ಇದು ತುಂಬಾ ನೋವಿನ ಸಂಗತಿ’ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ವಿ.ರಮೇಶ್‌ ಹೇಳಿದ್ದಾರೆ.

    ನಿನ್ನೆ ಒಂದೇ ದಿನ ಅನಂತಪುರ ಜಿಲ್ಲೆಯಲ್ಲಿ ಈ ನಾಲ್ವರು ಸೇರಿದಂತೆ ಏಳು ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts