More

    ವನ್ಯಪ್ರಾಣಿಗಳನ್ನು ಬೇಟೆಯಾಡಿದ್ದ ಇಬ್ಬರ ಸೆರೆ

    ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಬೇಟೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

    ತಾಲೂಕಿನ ದಿನ್ನಳ್ಳಿ ಗ್ರಾಮದ ಸಯ್ಯದ್ ಮುಜೀರ್ ಹಾಗೂ ಕಾಂಚಳ್ಳಿ ಗ್ರಾಮದ ಸತೀಶ್‌ಕುಮಾರ್ ಬಂಧಿತರು. ಹನೂರು ಬಫರ್ ವಲಯದ ಪಚ್ಚೆದೊಡ್ಡಿ ಶಾಖೆಯ ದೊಡ್ಡಕಾಡು ಅರಣ್ಯ ಪ್ರದೇಶದಲ್ಲಿ ಸಯ್ಯದ್ ಮುಜೀರ್ ಕಾಡಮ್ಮೆಯನ್ನು ಬೇಟೆಯಾಡಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿಸಿಎಫ್ ಡಾ.ಸಂತೋಷ್‌ಕುಮಾರ್ ಹಾಗೂ ಎಸಿಎಫ್ ಚಂದ್ರಶೇಖರಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಪಿ.ಈ. ಪ್ರವೀಣ್ ಹಾಗೂ ಸಿಬ್ಬಂದಿ ದಿನ್ನಳ್ಳಿ ಗ್ರಾಮದಲ್ಲಿ ಆರೋಪಿ ಮನೆಗೆ ದಾಳಿ ನಡೆಸಿದಾಗ ಬೇಯಿಸಿದ ಕಾಡೆಮ್ಮೆ ಮಾಂಸ ಮತ್ತು ಹಸಿ ಮಾಂಸದ ತುಂಡುಗಳು ಪತ್ತೆಯಾದವು.

    ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಡಿ.3ರಂದು ರಾತ್ರಿ ನನ್ನ 9 ಜನ ಸ್ನೇಹಿತರೊಂದಿಗೆ ದೊಡ್ಡಕಾಡು ಅರಣ್ಯ ಪ್ರದೇಶದಲ್ಲಿ ನಾಡ ಬಂದೂಕಿನಿಂದ ಕಾಡೆಮ್ಮೆಯನ್ನು ಬೇಟೆಯಾಡಿದ್ದೆ. ಬಳಿಕ ಮಾಂಸವನ್ನು ಎಲ್ಲರೂ ಭಾಗ ಮಾಡಿ ಹಂಚಿಕೊಂಡೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
    ಮತ್ತೊಂದು ಪ್ರಕರಣ: ಪಚ್ಚೆದೊಡ್ಡಿ ಶಾಖೆಯ ಕೊತ್ತಗುಳಿ ಗಸ್ತಿನ ಯಡಿಯಾರಹಳ್ಳ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಡುಪ್ರಾಣಿ ಬೇಟೆಯಾಡಲು ಪ್ರಯತ್ನಿಸುತ್ತಿದ್ದ ಸತೀಶ್‌ಕುಮಾರ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

    ಆರ್‌ಎಫ್‌ಒ ಪ್ರವೀಣ್ ಹಾಗೂ ಸಿಬ್ಬಂದಿ ಮಂಗಳವಾರ ಪಚ್ಚೆದೊಡ್ಡಿ ಶಾಖೆಯ ಕೊತ್ತಗುಳಿ ಗಸ್ತಿನ ಯಡಿಯಾರಹಳ್ಳ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಗಸ್ತು ನಡೆಸುತ್ತಿದ್ದರು. ಈ ವೇಳೆ ಹೊಸೂರುದೊಡ್ಡಿ ಚೈನ್ ಗೇಟ್ ಮೂಲಕ ವರ್ತಿಕೆರೆಗೆ ತೆರಳುವ ಅರಣ್ಯ ಪ್ರದೇಶದ ಗೇಮ್ ರಸ್ತೆಯಲ್ಲಿ ಕಾರೊಂದು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ವಿಚಾರಣೆ ನಡೆಸಿದಾಗ ಸತೀಶ್‌ಕುಮಾರ್ ನಾಡ ಬಂದೂಕಿನೊಂದಿಗೆ ವನ್ಯಪ್ರಾಣಿಯನ್ನು ಬೇಟೆಯಾಡಲು ಯತ್ನಿಸುತ್ತಿರುವುದು ಗೊತ್ತಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
    ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಪಿ.ಈ. ಪ್ರವೀಣ್, ಡಿಆರ್‌ಎಫ್‌ಒ ಕೆ.ಪ್ರಸಾದ್, ಗಸ್ತು ಅರಣ್ಯ ಪಾಲಕರಾದ ಪರಶುರಾಮ ಭಜಂತ್ರಿ, ವಿ. ನಂದೀಶ್, ಪಿ. ಸುರೇಶ್, ಕೆ.ಎನ್.ಗಣೇಶ್, ಅರಣ್ಯ ವೀಕ್ಷಕ ವಿ.ಪ್ರಭು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts