More

    ಟ್ವಿಟರ್ ಸಂಚಲನ: ಮುಂದಿನ ಪರಿಣಾಮಗಳ ಬಗ್ಗೆ ಗರಿಗೆದರಿದ ಚರ್ಚೆ

    ವಿಶ್ವದ ನಂಬರ್ 1 ಸಿರಿವಂತ, ಟೆಸ್ಲಾ ಮತ್ತು ಸ್ಪೇಸ್​ಎಕ್ಸ್ ಕಂಪನಿಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲನ್ ಮಸ್ಕ್ ಸಾಮಾಜಿಕ ಜಾಲತಾಣದ ಬೃಹತ್ ಕಂಪನಿ ಟ್ವಿಟರನ್ನು 44 ಶತಕೋಟಿ ಡಾಲರ್​ಗೆ ಖರೀದಿಸಲು ಸೋಮವಾರ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆ ಭಾರಿ ಸಂಚಲನ ಮೂಡಿಸುವ ಜತೆಗೆ ಟ್ವಿಟರ್​ನಲ್ಲಿ ಆಗಬಹುದಾದ ಬದಲಾವಣೆಗಳ ಕುರಿತು ಚರ್ಚೆ ಗರಿದೆದರಿದೆ. ಈ ಕುರಿತಾದ ವಿವರ ಇಲ್ಲಿದೆ.

    ಐ ಲವ್ ಟ್ವಿಟರ್!

    ಅಂದು 2017 ಡಿಸೆಂಬರ್ 21. ಸಮಯ ರಾತ್ರಿ 11.20. (ಭಾರತೀಯ ಕಾಲಮಾನ ಪ್ರಕಾರ). ಟೆಸ್ಲಾ ಕಂಪನಿಯ ಸಂಸ್ಥಾಪಕ ಎಲನ್ ಮಸ್ಕ್ ಟ್ವೀಟ್ ಮಾಡಿ, ‘ಐ ಲವ್ ಟ್ವಿಟರ್’ ಎಂದಿದ್ದರು. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಅಮೆರಿಕದ ಪತ್ರಕರ್ತ ಡೆವ್ ಸ್ಮಿತ್, ‘ಹಾಗಾದರೆ ಟ್ವಿಟರನ್ನು ಖರೀದಿಸಬಹುದಲ್ಲವೇ?’ ಎಂದು ಪ್ರಶ್ನಿಸಿದರು. ‘ಇದರ ಬೆಲೆ (ಟ್ವಿಟರ್) ಎಷ್ಟಾಗುತ್ತದೆ?’ ಎಂದು ಮರುಪ್ರಶ್ನಿಸಿದ್ದರು ಎಲನ್! ಇದಾಗಿ 52 ತಿಂಗಳು ಕಳೆದಿವೆ.

    ಸಾಮಾಜಿಕ ಮಾಧ್ಯಮ ವೇದಿಕೆಗಳ ಸುಧಾರಣೆ ಕುರಿತಂತೆ ಆಗಾಗ ಟ್ವೀಟ್ ಮಾಡುತ್ತಿದ್ದ ಎಲನ್ ಮಸ್ಕ್ ಈಗ ಟ್ವಿಟರ್ ಕಂಪನಿಯನ್ನೇ 44 ಶತಕೋಟಿ ಡಾಲರ್​ಗೆ ಅಂದರೆ 3.36 ಲಕ್ಷ ಕೋಟಿ ರೂಪಾಯಿಗೆ (ಪ್ರತಿ ಷೇರಿಗೆ 54.20 ಡಾಲರ್ ಅಂದರೆ 4,148 ರೂಪಾಯಿ) ಖರೀದಿಸಿದ್ದಾರೆ. ಮೊದಲು ಟ್ವಿಟರ್ ನಿರ್ದೇಶಕ ಮಂಡಳಿಯ ಭಾಗವಾಗಲು ಒಪ್ಪಿದ ಮಸ್ಕ್, ಆ ಬಳಿಕ ಅದನ್ನು ತಿರಸ್ಕರಿಸಿದರು. ಕೆಲ ದಿನಗಳಲ್ಲೇ ಹೊಸ ಪ್ರಸ್ತಾವನೆ ಇರಿಸುವ ಮೂಲಕ, ಉದ್ಯಮ ವಲಯ ಆಶ್ಚರ್ಯ ಪಡುವಂತೆ ಮಾಡಿದರು. ಟ್ವಿಟರ್​ನ ಎಲ್ಲ ಷೇರುಗಳನ್ನು ಖರೀಸುವುದೇ ಆ ಹೊಸ ಪ್ರಸ್ತಾವವಾಗಿತ್ತು. ಕಂಪನಿಯ ಅಧಿಕಾರ ಹಸ್ತಾಂತರದ ಕುರಿತಂತೆ ಏಪ್ರಿಲ್ 25ರಂದು ಟ್ವಿಟರ್ ಮತ್ತು ಎಲನ್ ಮಸ್ಕ್ ನಡುವೆ ಒಪ್ಪಂದ ಏರ್ಪಟ್ಟಿದ್ದು, ವರ್ಷಾಂತ್ಯದ ಹೊತ್ತಿಗೆ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಬ್ಲೂಮ್​ಗ್ ವರದಿ ಮಾಡಿದೆ. ಮಸ್ಕ್ ಟ್ವಿಟರ್​ನಲ್ಲಿ ಶೇಕಡ 9.2ರಷ್ಟು ಪಾಲು ಹೊಂದಿದ್ದರು. ಮೊದಲ ಬದಲಾವಣೆಯಾಗಿ, ಟ್ವಿಟರ್​ನಲ್ಲಿ ‘ಎಡಿಟ್’ ಬಟನ್ ಆಯ್ಕೆ ಸಿಗುವ ಸಾಧ್ಯತೆ ಇದೆ.

    ಕಾಡುತ್ತಿರುವ ಪ್ರಶ್ನೆಗಳು

    • ಕಂಪನಿಯ ಸಿಬ್ಬಂದಿಯನ್ನು ವಜಾಗೊಳಿಸಬಹುದೆ? ಸಿಬ್ಬಂದಿಯ ಸಂಖ್ಯೆ ಕಡಿತಗೊಳಿಸಬಹುದೆ?
    • ಸಾರ್ವಜನಿಕ ಕಂಪನಿಯಾಗಿದ್ದ ಟ್ವಿಟರ್ ಈಗ ಏಕವ್ಯಕ್ತಿಯ ಮಾಲೀಕತ್ವ ಹೊಂದುವುದರಿಂದ ನೀತಿ-ನಿರ್ಧಾರಗಳನ್ನು ಮಸ್ಕ್ ಒಬ್ಬರೇ ತೆಗೆದುಕೊಳ್ಳುವರೇ?
    • ಹೊಸ ಬದಲಾವಣೆಗೆ ತೆರೆದುಕೊಳ್ಳುವ ಅನಿವಾರ್ಯತೆಯಲ್ಲಿ ಟ್ವಿಟರ್ ತನ್ನ ಜನಪ್ರಿಯತೆ ಕಳೆದುಕೊಳ್ಳುವುದೆ ಅಥವಾ ಹೆಚ್ಚಿಸಿಕೊಳ್ಳುವುದೆ?
    • ಹಾಲಿ ಸಿಇಒ ಪರಾಗ್ ಅಗರ್​ವಾಲ್ ಮುಂದುವರಿಯುವರೋ ಅಥವಾ ಪದಚ್ಯುತಗೊಳ್ಳುವರೋ?
    • ಆರೋಗ್ಯಕರ ಆನ್​ಲೈನ್ ಚರ್ಚೆಯ ಬದಲು ಈಗ ಬರೀ ಆದಾಯ ಗಳಿಕೆ ಕಡೆಗೆ ಟ್ವಿಟರ್ ಮಂಡಳಿ ಗಮನ ನೀಡುವುದೆ?

    ಭಾರಿ ಮೊತ್ತದ ಪರಿಹಾರ: ಟ್ವಿಟರ್ ಮಾಲೀಕತ್ವ ಬದಲಾವಣೆಗೊಂಡ 12 ತಿಂಗಳೊಳಗೆ ಸಿಇಒ ಪರಾಗ್ ಅಗರ್​ವಾಲ್ ಅವರನ್ನು ವಜಾಗೊಳಿಸಿದರೆ, ಅದಕ್ಕೆ ಪ್ರತಿಯಾಗಿ ಕಂಪನಿಯು 42 ದಶಲಕ್ಷ ಡಾಲರ್ ಅಂದರೆ 321 ಕೋಟಿ ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆ ಈಕ್ವಿಲರ್ ತಿಳಿಸಿದೆ.

    ವಾಕ್ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿ. ಟ್ವಿಟರ್ ಡಿಜಿಟಲ್ ವೇದಿಕೆಯಾಗಿದ್ದು, ಮಾನವೀಯ ಭವಿಷ್ಯಕ್ಕೆ ಅಗತ್ಯವಾದ ಪ್ರಮುಖ ಸಂಗತಿಗಳು ಇಲ್ಲಿ ಚರ್ಚೆಯಾಗಲಿವೆ. ಹೊಸ ಫೀಚರ್​ಗಳನ್ನು ಸೇರ್ಪಡೆಗೊಳಿಸಿ, ಸ್ಪ್ಯಾಮ್ ವ್ಯವಸ್ಥೆ ಕೊನೆಗೊಳಿಸಲಾಗುವುದು.

    | ಎಲನ್ ಮಸ್ಕ್

    ಏನೇನಾಯಿತು?

    • 2022 ಜನವರಿ 31: ಟ್ವಿಟರ್ ಷೇರುಗಳ ಖರೀದಿ ಆರಂಭಿಸಿದ ಎಲನ್ ಮಸ್ಕ್.
    • ಮಾರ್ಚ್ 24: ಟ್ವಿಟರ್ ಕಾರ್ಯನಿರ್ವಹಣೆಯನ್ನು ಟೀಕಿಸಿ ಟ್ವೀಟ್ ಮಾಡಿದರು.
    • ಮಾರ್ಚ್ 25: ಒಂದು ಪೋಲ್ ನಡೆಸಿದ ಮಸ್ಕ್, ‘ಸಾಮಾಜಿಕ ಮಾಧ್ಯಮದ ಹೊಸ ವೇದಿಕೆಯ ಅವಶ್ಯಕತೆ ಇದೆಯೇ?’ ಎಂದು ತಮ್ಮ ಟ್ವಿಟರ್ ಫಾಲೋವರ್ಸ್​ನ್ನು ಪ್ರಶ್ನಿಸಿದರು.
    • ಮಾರ್ಚ್ 26: ‘ಟ್ವಿಟರನ್ನೇ ಖರೀದಿಸಿಬಿಡಿ’ ಎಂಬ ಸಲಹೆ ಅನೇಕ ಬಳಕೆದಾರರಿಂದ ಬಂತು. ‘ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದ ಎಲನ್.
    • ಏಪ್ರಿಲ್ 04: ಟ್ವಿಟರ್ ಆಡಳಿತ ಮಂಡಳಿಯ ಭಾಗವಾಗಲು ಎಲನ್​ಗೆ ಆಹ್ವಾನ. ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಸುಳಿವು ಕೊಟ್ಟ ಮಸ್ಕ್. ಈ ಮೂಲಕ ಎಲನ್ ಟ್ವಿಟರ್ ಷೇರುಗಳನ್ನು ಖರೀದಿಸಿರುವ ಮಾಹಿತಿ ಮೊದಲ ಬಾರಿಗೆ ಬಹಿರಂಗ.
    • ಏಪ್ರಿಲ್ 04: ‘ಟ್ವೀಟ್ ಅನ್ನು ಎಡಿಟ್ ಮಾಡುವ ಹೊಸ ಆಯ್ಕೆಯನ್ನು ಜೋಡಿಸಬೇಕೆ?’ ಈ ಮೂಲಕ ಮತದಾನದ ಮೂಲಕ ತಿಳಿಸಿ ಎಂದು ಕೋರಿದ ಮಸ್ಕ್. ‘ಸಾವಧಾನದಿಂದ ಯೋಚಿಸಿ, ಮತ ಚಲಾಯಿಸಿ’ ಎಂದು ಟ್ವಿಟರ್ ಬಳಕೆದಾರರನ್ನು ಕೋರಿದ ಕಂಪನಿ ಸಿಇಒ ಪರಾಗ್ ಅಗರ್​ವಾಲ್.
    • ಏಪ್ರಿಲ್ 05: ನಿರ್ದೇಶಕ ಮಂಡಳಿ ಭಾಗವಾಗಲು ಸಮ್ಮತಿಸಿದ್ದಕ್ಕೆ ಎಲನ್​ಗೆ ಟ್ವಿಟರ್ ಹಿರಿಯ ಅಧಿಕಾರಿಗಳಿಂದ ಅಭಿನಂದನೆ. ‘ಎಲನ್ ಮಸ್ಕ್ ಅವರೊಡನೆ ಹಲವು ವಾರಗಳಿಂದ ಮಾತುಕತೆ ನಡೆಯುತ್ತಿತ್ತು’ ಎಂದು ತಿಳಿಸಿದ ಪರಾಗ್ ಅಗರ್​ವಾಲ್.
    • ಏಪ್ರಿಲ್ 09: ದಿಢೀರ್ ಬೆಳವಣಿಗೆಯಲ್ಲಿ ಟ್ವಿಟರ್ ಮಂಡಳಿಯ ಭಾಗವಾಗುವುದಿಲ್ಲ ಎಂದು ಘೋಷಿಸಿದ ಮಸ್ಕ್. ಆ ಬಳಿಕ ಕೆಲ ಟ್ವೀಟ್​ಗಳನ್ನೂ ಮಾಡಿದರು.
    • ಏಪ್ರಿಲ್ 10: ನಿರ್ದೇಶಕ ಮಂಡಳಿಯ ಭಾಗವಾಗಲು ಎಲನ್ ನಿರಾಕರಿಸಿದ್ದಾರೆ ಎಂದು ಘೋಷಿಸಿದ ಟ್ವಿಟರ್.
    • ಏಪ್ರಿಲ್ 14: ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಕಂಪನಿಯನ್ನೇ ಖರೀದಿಸುವ ಪ್ರಸ್ತಾವನೆ ಮುಂದಿಟ್ಟ ಎಲಾನ್. ತಲಾ ಷೇರಿಗೆ 54.20 ಡಾಲರ್ ಪಾವತಿಸಲು ಸಿದ್ಧ ಎಂದು ಹೇಳಿಕೆ.
    • ಏಪ್ರಿಲ್ 24: ಮಸ್ಕ್​ರೊಂದಿಗೆ ಚರ್ಚೆ ಆರಂಭಿಸಿದ ಟ್ವಿಟರ್ ಕಂಪನಿ.
    • ಏಪ್ರಿಲ್ 25: ಚರ್ಚೆ ಅಂತಿಮಗೊಂಡು, ಒಪ್ಪಂದಕ್ಕೆ ಬರಲಾಯಿತು.

    ಟ್ವಿಟರ್ ಸಂಚಲನ: ಮುಂದಿನ ಪರಿಣಾಮಗಳ ಬಗ್ಗೆ ಗರಿಗೆದರಿದ ಚರ್ಚೆಸಾಗಿಬಂದ ಹಾದಿ

    • 2006ರಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜಾಕ್ ಡೊರ್ಸಿ, ಇವಾನ್ ವಿಲಿಯಮ್್ಸ, ಬಿಜ್ ಸ್ಟೋನ್ ಮತ್ತು ನೋಹ್ ಗ್ಲಾಸ್ ಸೇರಿ ಟ್ವಿಟರ್ ಕಂಪನಿಯನ್ನು ಆರಂಭಿಸಿದರು.
    • ಟ್ವಿಟರ್​ನ ಪ್ರತಿನಿತ್ಯ ಬಳಕೆದಾರರ ಸರಾಸರಿ ಸಂಖ್ಯೆ 1.45 ಕೋಟಿ. ಸುಮಾರು 3.30 ಕೋಟಿ ಜನರು ಪ್ರತಿ ತಿಂಗಳು ಟ್ವಿಟರ್​ಗೆ ತಪ್ಪದೇ ಲಾಗಿನ್ ಆಗುತ್ತಾರೆ.
    • ಟ್ವಿಟರ್​ನ ಒಟ್ಟು ಖಾತೆಗಳ ಸಂಖ್ಯೆ 130 ಕೋಟಿ. ಆದರೆ, ಈ ಪೈಕಿ ಶೇಕಡ 44 ಜನರು ಬರೀ ಖಾತೆ ತೆರೆದಿದ್ದಾರೆ ಹೊರತು ಟ್ವೀಟ್ ಮಾಡಿಲ್ಲ. ಟ್ವಿಟರ್​ನ ಒಟ್ಟು ಬಳಕೆದಾರರಲ್ಲಿ ಶೇಕಡ 70.4 ಪುರುಷರು ಮತ್ತು ಶೇ.29.6 ಮಹಿಳೆಯರಿದ್ದಾರೆ.
    • ಟ್ವೀಟ್​ಗಳನ್ನು ನೋಡುವ, ಓದುವವರ ಪೈಕಿ 25ರಿಂದ 35 ವರ್ಷದವರೇ ಹೆಚ್ಚು. ಶೇಕಡ 27 ಬಳಕೆದಾರರು ನಗರಪ್ರದೇಶದವರಾದರೆ, ಶೇ.18 ಜನರು ಮಾತ್ರ ಗ್ರಾಮೀಣ ಪ್ರದೇಶದವರು.
    • ಟ್ವಿಟರ್ ಬಳಕೆದಾರರನ್ನು ಹೆಚ್ಚು ಹೊಂದಿರುವ ದೇಶಗಳಲ್ಲಿ ಮೊದಲನೆಯ ಸ್ಥಾನ ಅಮೆರಿಕದ್ದು. ಇಲ್ಲಿ 77.75 ಮಿಲಿಯನ್ ಬಳಕೆದಾರರಿದ್ದಾರೆ. ಯುಎಸ್​ನ ಶೇ.25 ಪುರುಷರು ಹಾಗೂ ಶೇ.22 ಮಹಿಳೆಯರು ಟ್ವಿಟರ್ ಬಳಸುತ್ತಿದ್ದಾರೆ. ಎರಡನೆಯ ಸ್ಥಾನದಲ್ಲಿ ಜಪಾನ್ (58.2 ಮಿಲಿಯನ್), ಮೂರನೆಯ ಸ್ಥಾನದಲ್ಲಿ ಭಾರತವಿದೆ (24.45).
    • 391 ಮಿಲಿಯನ್ ಖಾತೆಗಳು ಯಾವುದೇ ಫಾಲೋವರ್​ಗಳನ್ನು ಹೊಂದಿಲ್ಲ.
    • ಪ್ರತಿನಿತ್ಯ ಸರಾಸರಿ 50 ಕೋಟಿ ಮಿಲಿಯನ್ ಟ್ವೀಟ್ ಮಾಡಲಾಗುತ್ತಿದೆ. ಜಪಾನಿನ ಒಂದು ಕ್ಯಾಶ್ ಪ್ರೖೆಜ್ ಟ್ವಿಟ್​ಗೆ ಅತಿಹೆಚ್ಚು ಬಾರಿ ಅಂದರೆ 55 ಲಕ್ಷ ಬಾರಿ ರಿಟ್ವೀಟ್ ಮಾಡಲಾಗಿದೆ.
    • ಭಯೋತ್ಪಾದನೆಗೆ ಪ್ರಚೋದನೆ ನೀಡುವಂಥ 44 ಸಾವಿರ ಖಾತೆಗಳನ್ನು 2021ರಲ್ಲಿ ಅಮಾನತುಗೊಳಿಸಲಾಗಿದೆ.
    • ಟ್ವಿಟರ್​ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ. ಇವರು 130 ಮಿಲಿಯನ್ ಫಾಲೋವರ್​ಗಳನ್ನು ಹೊಂದಿದ್ದಾರೆ.
    • ಪ್ರತಿ ನಿತ್ಯ ಸಾಮಾನ್ಯ ಖಾತೆಯಿಂದ 400 ಮತ್ತು ವೆರಿಫೈಡ್ ಖಾತೆಯಿಂದ 1000 ಖಾತೆಗಳನ್ನು ಫಾಲೋ ಮಾಡಬಹುದು.
    • ಟ್ವಿಟರ್ ಆರಂಭದ ದಿನಗಳಲ್ಲಿ 140 ಶಬ್ದಮಿತಿಯಲ್ಲಿ ಸಂದೇಶ ಕಳಿಸಬೇಕಿತ್ತು. 2017 ನವೆಂಬರ್​ನಲ್ಲಿ ಈ ಮಿತಿಯನ್ನು 280 ಶಬ್ದಗಳಿಗೆ ಹೆಚ್ಚಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts