More

    ಇದು ಕಾಶ್ಮೀರಿ ಬಾಲಕನ ವಿಚಿತ್ರ ಕಥೆ; ಯಾವ ಸಿನಿಮಾಕ್ಕೂ ಕಡಿಮೆಯಿಲ್ಲದ ಕಥೆಯಲ್ಲಿದೆ ಟ್ವಿಸ್ಟ್​ ಮೇಲೆ ಟ್ವಿಸ್ಟ್…

    ನವದೆಹಲಿ: ಆತನಿಗೆ ಇನ್ನೂ 17 ವರ್ಷ ವಯಸ್ಸು. ಹದಿಹರೆಯದ ಬಾಲಕರಂತೆ ಕ್ರಿಯಾಶೀಲವಾಗಿ ಓದು, ಬರಹ ಎಂದು ಕಾಲೇಜಿಗೆ ಹೋಗಿಬಂದುಕೊಂಡು ಇರಬೇಕು. ಆದರೆ, ಆತನ ದುರದೃಷ್ಟ. ಸಣ್ಣ ವಯಸ್ಸಿನ ಪತ್ನಿಯನ್ನು ಕೊಂದ ಆರೋಪದಲ್ಲಿ ಬಾಲಮಂದಿರ ಸೇರಿದ್ದಾನೆ. ಅಲ್ಲಿಯೂ ಆತ ತುಂಬಾ ಕೋಪತಾಪಗಳನ್ನು ಪ್ರದರ್ಶಿಸುತ್ತಿರುವುದರಿಂದ ತುಂಬಾ ಹಿಂದೆ ವಿಚ್ಛೇದನ ಪಡೆದು ಬೇರ್ಪಟ್ಟಿದ್ದು ಇದೀಗ ಬಲವಂತವಾಗಿ ಒಂದಾಗಿರುವ ಅಪ್ಪ-ಅಮ್ಮನ ಜತೆ ಬದುಕಲಾರಂಭಿಸಿದ್ದಾನೆ.

    ಇಷ್ಟು ಓದುವ ಹೊತ್ತಿಗೆ ಇದೊಂದು ವಿಚಿತ್ರ ಕಥೆ ಅನಿಸಿರಬೇಕು ಅಲ್ಲವೇ? ನಿಜಕ್ಕೂ ಇದೊಂದು ವಿಚಿತ್ರ ಕಥೆ. ಏಕೆಂದರೆ ಈ ಬಾಲಕ ದಕ್ಷಿಣ ಕಾಶ್ಮೀರದಲ್ಲಿ ಬಾಲ್ಯ ವಿವಾಹವಾಗಿದ್ದ ದಂಪತಿಯ ಪುತ್ರನಾಗಿ 2003ರಲ್ಲಿ ಜನಿಸಿದ್ದ. ಅದಾಗಲೇ ಈ ದಂಪತಿ ವಿಚ್ಛೇದನ ಪಡೆಯಲು ಯತ್ನಿಸುತ್ತಿದ್ದರು. ಹಾಗಾಗಿ, ತಾಯಿ ಈ ಬಾಲಕನನ್ನು ತಿರಸ್ಕರಿಸಿದಳು. ಕೊನೆಗೆ ಇಬ್ಬರೂ ಬೇರೆ ಮದುವೆ ಮಾಡಿಕೊಂಡು ಬದುಕು ಸೆವೆಸಲು ಮುಂದಾಗಿದ್ದರು.

    ಆದರೆ ಬಾಲಕನ ತಂದೆ ಮಾಜಿ ಪತ್ನಿಯ ಪಾಲಕರ ಕೈಕಾಲು ಹಿಡಿದು ಈ ಮಗುವನ್ನು ಸಾಕುವಂತೆ ಮಾಡಿದ್ದ. ಅವರು ಕೂಡ ಈತನನ್ನು ಸಾಕಿಕೊಂಡು 5ನೇ ತರಗತಿವರೆಗೆ ಶಾಲೆಗೆ ಕಳುಹಿಸಿದ್ದರು. ಆದರೆ, ಬಡತನದಿಂದಾಗಿ ಮನೆಗೆ ಒಂದಷ್ಟು ನೆರವಾಗಲಿ ಎಂದು ಓದು ಬಿಡಿಸಿ ಆತನನ್ನು ಕೆಲಸಕ್ಕೆ ಕಳುಹಿಸಲು ಆರಂಭಿಸಿದ್ದರು. ಕಥೆಗೆ ವಿಶಿಷ್ಟ ತಿರುವು ದೊರೆಯುವುದು ಇಲ್ಲಿಯೇ.

    ಇದನ್ನೂ ಓದಿ: ಚಹಾ ಪುಡಿ ಬೆಲೆ ಗಣನೀಯ ಏರಿಕೆ ಕಂಡರೆ ಅಚ್ಚರಿ ಇಲ್ಲ ಅಂತಿದ್ದಾರೆ ಪರಿಣತರು

    ಹಾಗೆ ಕೆಲಸಕ್ಕೆ ಹೋಗಲಾರಂಭಿಸಿದ ಬಾಲಕ ಬೇಜವಾಬ್ದಾರಿ ವರ್ತನೆ ತೋರಲಾರಂಭಿಸಿದ್ದ. ಇದರಿಂದ ಬೇಸತ್ತ ಅಜ್ಜ-ಅಜ್ಜಿ ಜವಾಬ್ದಾರಿ ಬರಲಿ ಎಂದು 13ನೇ ವಯಸ್ಸಿನಲ್ಲೇ ಬಾಲಕನಿಗೆ ವಿವಾಹ ಮಾಡಿದ್ದರು. 12 ವರ್ಷದ ಬಾಲಕಿಯೊಂದಿಗೆ ಈತನಿಗೆ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಹಾಗಾಗಿ ಆತ ಮೊದಲಿಗೆ ಉಸಿರುಗಟ್ಟಿಸಿ, ಬಳಿಕ ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಬಾಲಕಿಯನ್ನು ಸಾಯಿಸಿದ್ದ.

    ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದುಕೊಂಡರು. ಜತೆಗೆ ಸಹ ಆರೋಪಿಗಳು ಎಂದು ಹೇಳಿ ಅಜ್ಜ-ಅಜ್ಜಿಯನ್ನು ಜೈಲಿಗೆ ಕಳುಹಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​, ಬಾಲಕನನ್ನು ಶ್ರೀನಗರದಲ್ಲಿರುವ ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಿತು. ಎರಡು ವರ್ಷ ಬಾಲಮಂದಿರದಲ್ಲಿದ್ದ ಇದ್ದ ಈತನಿಗೆ ನ್ಯಾಯಾಲಯ ಕಳೆದ ವರ್ಷ ಜೂನ್​ನಲ್ಲಿ ಜಾಮೀನು ನೀಡಿತು.

    ಈ ಕತೆಗೆ ಎರಡನೇ ಟ್ವಿಸ್ಟ್​ ಸಿಗುವುದೇ ಇಲ್ಲಿ. ಈತನಿಗೆ ಜಾಮೀನು ನೀಡಿ, ಈತನನ್ನು ತನ್ನಲ್ಲಿ ಇರಿಸಿಕೊಳ್ಳುವಂತೆ ಬಾಲಕನ ನೈಜ ಅಪ್ಪನಿಗೆ ಕೋರ್ಟ್​ ಸೂಚಿಸಿತು. ಆದರೆ, ಆತನನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಅಲ್ಲ ಎಂದು ಹೇಳಿದ ಅಪ್ಪ ನುಣುಚಿಕೊಂಡ. ಸಹೋದರ ಮಾವ ಕೂಡ ಬಾಲಕನಿಗೆ ಜಾಮೀನು ಕೊಡಲು ನಿರಾಕರಿಸಿದ. ಹಾಗಾಗಿ ಆತನ ಜಾಮೀನು ನಿಯಮಗಳನ್ನು 2015ರ ಬಾಲಪರಾಧಿ ಕಾನೂನು ಕಾಯ್ದೆಯನ್ವಯ ಸಡಿಲಿಸಿ, ಶ್ರೀನಗರದಲ್ಲಿರುವ ಮಕ್ಕಳ ಕಲ್ಯಾಣ ಸಂಸ್ಥೆಗೆ ರವಾನಿಸಿತು. ಆದರೆ ಇಲ್ಲಿದ್ದ ಇತರ ಬಾಲಕರೊಂದಿಗೆ ಈತ ಸದಾ ಜಗಳ ಮಾಡಲಾರಂಭಿಸಿದ. ವಿನಾಕಾರಣ ಅವರ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದ.

    ಇದನ್ನೂ ಓದಿ: ಪುತ್ರಿಯ ಅಪಹರಣ ಯತ್ನ ವಿಫಲಗೊಳಿಸಿದ ದಿಟ್ಟ ಮಹಿಳೆ; ಕಿಡ್ನಾಪ್​ಗೆ ಸುಪಾರಿ ಕೊಟ್ಟಿದ್ದು ಯಾರು ಗೊತ್ತಾ…?

    ಈ ಹಂತದಲ್ಲಿ ಬಾಲಪರಾಧಿ ಆಗಿದ್ದ ಆತನಿಗೆ ಪ್ರೀತಿ-ಪ್ರೇಮದಿಂದ ನೋಡಿಕೊಳ್ಳುವವರ ಅವಶ್ಯಕತೆಯೂ ಇತ್ತು. ಈ ಹಿನ್ನೆಲೆಯಲ್ಲಿ ಆತನ ನೈಜ ಅಪ್ಪ ಹಾಗೂ ಸಹೋದರಮಾವನಿಗೆ ಸಾಮಾಜಿಕ, ನೈತಿಕ, ಧಾರ್ಮಿಕ ಮತ್ತು ಕೊನೆಗೆ ಕಾನೂನಿನ ಭೀತಿ ತೋರಿಸಿ ಈ ಬಾಲಕನನ್ನು ಕರೆದೊಯ್ಯುವಂತೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರು. ಆದರೆ ಅವರಿಗೆ ಅವರದ್ದೇ ಆದ ಅಡ್ಡಿಆತಂಕಗಳಿದ್ದವು. ಆದ್ದರಿಂದ, 2019ರ ಸೆಪ್ಟೆಂಬರ್​ನಲ್ಲಿ ಬಾಲಕನನ್ನು ಮತ್ತೆ ಬಾಲಮಂದಿರಕ್ಕೆ ಸ್ಥಳಾಂತರಿಸಿದರು.

    ಅಲ್ಲಿಯೂ ಕೂಡ ಈತನ ವರ್ತನೆಗಳು ಸಹಿಸಲಸಾಧ್ಯವಾಗಿತ್ತು. ಬಾಲಮಂದಿರದಲ್ಲಿದ್ದ ಇತರೆ ಹುಡುಗರೊಂದಿಗೆ ಹೊಡೆದಾಡಿ, ಅವರಿಗೆ ಗಂಭೀರ ಗಾಯಗಳನ್ನು ಉಂಟು ಮಾಡಿದ್ದ. ಇದು ತುಂಬಾ ಯೋಚನೆಗೀಡು ಮಾಡಿತು. ಆದ್ದರಿಂದ, ನ್ಯಾಯಾಲಯ ಸ್ಥಳೀಯ ನಿವಾಸಿಯೊಬ್ಬನನ್ನು ಗುರುತಿಸಿ, ನೈಜ ಅಪ್ಪ ಮತ್ತು ಅಮ್ಮನನ್ನು ಹುಡುಕಿ ತರುವಂತೆ ಸೂಚಿಸಿತು. ಅದರಂತೆ ಆತ ಸಾಕಷ್ಟು ಅಲೆದಾಡಿದ ಬಳಿಕ ಅರಣ್ಯ ಪ್ರದೇಶದ ಸನಿಹದಲ್ಲಿದ್ದ ಗ್ರಾಮವೊಂದರಲ್ಲಿ ಅವರಿಬ್ಬರೂ ಒಣಗಿದ ಕಟ್ಟಿಗೆಯನ್ನು ಅರಸುವ ಜತೆಗೆ ಪಶುಗಳನ್ನು ಮೇಯಿಸಿಕೊಂಡು ಇರುವುದು ಗೊತ್ತಾಯಿತು. ಅವರಿಬ್ಬರನ್ನೂ ಬಲವಂತವಾಗಿ ಒಂದೆಡೆ ಸೇರಿಸಿ, ಮಾನವೀಯತೆ ದೃಷ್ಟಿಯಿಂದ ಆ ಬಾಲಕನ ಜವಾಬ್ದಾರಿಯನ್ನು ಹೊತ್ತಿಕೊಳ್ಳುವಂತೆ ಪರಿಪರಿಯಾಗಿ ಮನವೊಲಿಸಲು ಸ್ಥಳೀಯ ನಿವಾಸಿ ಪ್ರಯತ್ನಿಸಿದರು. ಕೊನೆಗೆ ತನ್ನನ್ನು ತಾನು ಸುಧಾರಿಸಿಕೊಳ್ಳಲು ಆತನಿಗೆ ಒಂದು ಅವಕಾಶ ಕೊಡುವಂತೆ ಮನವಿ ಮಾಡಿಕೊಂಡರು.

    ಇಷ್ಟೆಲ್ಲ ಕೇಳಿಕೊಂಡ ಬಳಿಕ ಬಾಲಕನ ಅಪ್ಪನ ಹೃದಯ ಕರಗಿತು. ಈಗಾಗಲೆ ಬೇರೆ ಮದುವೆಯಾಗಿ ಮಕ್ಕಳಿದ್ದರೂ, ಜೂ.30ರಂದು ಕೋರ್ಟ್​ಗೆ ಬಂದು ಬಾಲಕನಿಗೆ ಜಾಮೀನು ಕೊಟ್ಟು, ಆತನ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ.

    ಮೂರು ವಾರಗಳ ಬಳಿಕ ಬಾಲಕ ಅಪ್ಪನೊಂದಿಗೆ ತಕ್ಕಮಟ್ಟಿಗೆ ಹೊಂದಿಕೊಂಡಿದ್ದಾನೆ. ಆತನ ಈಗಿನ ಮಕ್ಕಳೊಂದಿಗೆ ಬೆರೆಯಲು ಆರಂಭಿಸಿದ್ದಾನೆ. ಅಲ್ಲದೆ, ಉದ್ಯೋಗ ಹುಡುಕಿಕೊಳ್ಳಲು ಯತ್ನಿಸುತ್ತಿದ್ದಾನೆ. ಮಸೀದಿಗೆ ಹೋಗಿ ಪ್ರಾರ್ಥಿಸುವುದನ್ನು ರೂಢಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಈ ಕಥೆಗೆ ಸಿಕ್ಕಿರುವ ಸದ್ಯದ ಟ್ವಿಸ್ಟ್ ಇದು​. ಆದರೂ ಮುಂದಿನ ಟ್ವಿಸ್ಟ್​ ಏನಾಗಿರುತ್ತದೋ, ಹೇಗಿರುತ್ತದೋ ಎಂಬ ಆತಂಕ ಅಧಿಕಾರಿಗಳ ಮನದಿಂದ ದೂರಾಗಿಲ್ಲ.

    ಚಹಾ ಪುಡಿ ಬೆಲೆ ಗಣನೀಯ ಏರಿಕೆ ಕಂಡರೆ ಅಚ್ಚರಿ ಇಲ್ಲ ಅಂತಿದ್ದಾರೆ ಪರಿಣತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts