More

    TV ಮನೆ ಕತೆ; ಧಾರಾವಾಹಿಯ ಫಸ್ಟ್ ಇಂಪ್ರೆಷನ್ ಅದರ ಪ್ರೋಮೋ

    ಇಂಗ್ಲಿಷಿನಲ್ಲಿ ಒಂದು ಮಾತಿದೆ. ಫಸ್ಟ್ ಇಂಪ್ರೆಷನ್ ಇಸ್ ದ ಬೆಸ್ಟ್ ಇಂಪ್ರೆಷನ್ ಎಂದು. ಯಾವುದೇ ವ್ಯಕ್ತಿ ಅಥವಾ ವಿಷಯ ಮೊದಲು ನಮ್ಮ ಕಣ್ಣಿಗೆ ಬಿದ್ದಾಗ ಮೂಡುವ ಅಭಿಪ್ರಾಯ ಇಲ್ಲವೇ ಶಾಶ್ವತ ಅಥವಾ ಬದಲಾಗಲು ಬಹಳವೇ ಸಮಯ ತೆಗೆದುಕೊಳ್ಳುವಂಥದ್ದು. ಈ ಮಾತು ಬೇರೆ ವಿಷಯಗಳಿಗೆ ಎಷ್ಟು ಅನ್ವಯವಾಗುತ್ತದೋ ಏನೋ ಗೊತ್ತಿಲ್ಲ.

    TV ಮನೆ ಕತೆ; ಧಾರಾವಾಹಿಯ ಫಸ್ಟ್ ಇಂಪ್ರೆಷನ್ ಅದರ ಪ್ರೋಮೋಆದರೆ ಧಾರಾವಾಹಿಗಳ ವಿಷಯದಲ್ಲಂತೂ ನಿಜ. ಹೊಸ ಧಾರಾವಾಹಿಯೊಂದರ ಕಥೆಯ ಬಗೆಗೆ ಒಂದು ಚಿಕ್ಕ ಅಂದಾಜು ಕೊಡುವ ತುಣುಕೇ ಅದರ ಪ್ರೋಮೋ. ಪ್ರೋಮೋ ಯಾವುದೇ ಧಾರಾವಾಹಿಗೆ ಬಹಳ ಮುಖ್ಯ. ಇಂದು ವೀಕ್ಷಕರಿಗೆ ಒಂದು ಟೈಮ್ ಸ್ಲಾಟಿನಲ್ಲಿ ಐದಾರು ಧಾರಾವಾಹಿಗಳು ಲಭ್ಯವಿರುತ್ತದೆ. ಈ ಧಾರಾವಾಹಿಯ ಪ್ರೋಮೋ ನೋಡಿದರೆ ಅದನ್ನು ನೋಡಬಹುದು ಎನಿಸುತ್ತದೆ. ಇದನ್ನೇನೂ ನೋಡಬೇಕಿಲ್ಲ, ಇದರ ಬದಲಿಗೆ ನಾನು ಮತ್ತೊಂದು ವಾಹಿನಿಯ ಬೇರೆ ಧಾರಾವಹಿಯನ್ನೇ ನೋಡುತ್ತೇನೆ ಮುಂತಾದ ವೀಕ್ಷಕರ ನಿರ್ಧಾರಗಳು ಇನ್ನೂ ಶುರುವಾಗಿಲ್ಲದ ಧಾರಾವಾಹಿಯ ಟಿಆರ್​ಪಿಯ ಮೇಲೆ ಬಹಳ ಪರಿಣಾಮ ಬೀರುತ್ತದೆ.

    ಸಿನೆಮಾದಲ್ಲಿ ಪೋಸ್ಟರ್ ಮಾಡುವ ಕೆಲಸವನ್ನು ಧಾರಾವಾಹಿಗಳಲ್ಲಿ ಪ್ರೋಮೋಗಳು ಮಾಡುತ್ತವೆ. ಈಗ್ಗೆ ಕೆಲ ದಿನಗಳ ಕೆಳಗೆ ಇನ್ನೂ ಪ್ರಸಾರ ಆರಂಭವಾಗಿಲ್ಲದ ಧಾರಾವಾಹಿಯೊಂದರ ಪ್ರೋಮೋ ನೋಡಿದೆ. ಅದರಲ್ಲಿ ನಾಯಕ ನಾಯಕಿಗೆ ಮುಚ್ಕೊಂಡು ಹೋಗೇ ಎನ್ನುತ್ತಾನೆ. ಅದೊಂದೇ ಮಾತಿನಿಂದ ಬಹಳಷ್ಟು ಕುಟುಂಬಗಳು ಈ ಧಾರಾವಾಹಿಯನ್ನು ನೋಡಬಾರದು, ಮಕ್ಕಳಿಗೆ ನೋಡಲು ಬಿಡಬಾರದು ಎಂದು ನಿರ್ಧರಿಸಿರಬಹುದು.

    ಅದೊಂದು ಮಾತಿನಿಂದ ಧಾರಾವಾಹಿ ತಂಡ ತಾನಾಗೇ ವೀಕ್ಷಕರಿಗೆ ತಾನು ಸುಸಂಸ್ಕೃತರು ನೋಡಬಹುದಾದ ಧಾರಾವಾಹಿ ಅಲ್ಲ ಎಂದು ತೋರಿಸಿಕೊಟ್ಟಿತು. ಮುಂದೆ ಕಥೆಯಲ್ಲಿ ಆ ಹುಡುಗಿ ತನಗೆ ಅಂಥಾ ಮಾತಂದ ಹುಡುಗನಿಗೆ ಪಾಠ ಕಲಿಸಿ ಅವನು ಒಳ್ಳೆಯವನಾಗುವಂತೆ ಮಾಡುತ್ತಾಳೆ ಎನ್ನುವುದು ಯಾರೂ ಊಹಿಸಬಹುದಾದ ಊಹೆಯೇ ಸರಿ. ಆದರೂ ಆ ಕ್ಷಣಕ್ಕೆ ಅದು ತನ್ನನ್ನು ಕುತೂಹಲದಿಂದ ನೋಡುತ್ತಿರುವ ವೀಕ್ಷಕರಿಗೆ ತನಗರಿಯದಂತೆ ತನ್ನ ಬಗ್ಗೆ ನೆಗೆಟಿವ್ ಆದ ಒಂದು ರಹಸ್ಯ ಸಂದೇಶವನ್ನು ಕೊಟ್ಟಿತು. ಇಂಥ ಕಳಪೆ ಭಾಷೆಯನ್ನು ಪ್ರೋಮೋದಲ್ಲೇ ಬಳಸುವವರು ಧಾರಾವಾಹಿಯಲ್ಲಿ ಇನ್ನೆಂಥ ಭಾಷೆ ಬಳಸಿರಬಹುದು? ಎಂಬ ಭಯವನ್ನು ಅದು ವೀಕ್ಷಕರಲ್ಲಿ ಬಿತ್ತಿತು. ಧಾರಾವಾಹಿಯ ಬಗೆಗೆ ಆದರ ಕಡಿಮೆಯಾಯಿತು.

    ಧಾರಾವಾಹಿ ತನ್ನ ಕಾಲಿಗೆ ತಾನೇ ಕೊಡಲಿ ಹಾಕಿಕೊಂಡಂತಾಯಿತು. ಅಥವಾ ತನ್ನ ಎದುರು ನಿಂತ ವ್ಯಕ್ತಿಗೆ ಆ ವ್ಯಕ್ತಿ ಹೆಣ್ಣೇ ಆಗಿರಬಹುದು ಅಥವಾ ಗಂಡಾಗಿರಬಹುದು ಮುಚ್ಕೊಂಡು ಹೋಗು ಎಂದು ಬಡವ-ಬಲ್ಲಿದ, ಅಕ್ಷರಸ್ಥ ಅನಕ್ಷರಸ್ಥ, ಪೇಟೆಯವ – ಹಳ್ಳಿಯವ ಎಂಬ ಬೇಧವಿಲ್ಲದೇ ಲಕ್ಷ ಲಕ್ಷ ಜನ ನೋಡುವ ಮಾಧ್ಯಮದಲ್ಲಿ ಹೇಳಿಸಿ ಅಂಥ ಸಾಧ್ಯತೆ ಯಾರೋ ಒಂದಿಷ್ಟು ಜನರಿಗೆ ಖುಷಿ ಕೊಟ್ಟು ಅದಕ್ಕಾಗಿಯೇ ಅವರು ಧಾರಾವಾಹಿ ನೋಡುವ ನಿರ್ಧಾರ ಮಾಡಿದರು ಎಂದಿಟ್ಟುಕೊಳ್ಳಿ (ಆ ಸಾಧ್ಯತೆ ಇಲ್ಲದಿಲ್ಲ!) ಆಗಲೂ ಅದು ತಪ್ಪಾಗುತ್ತದೆ.

    ಹೀನ ಸಂಸ್ಕಾರವೊಂದನ್ನು ಜನ ಆನಂದಿಸುವಂತೆ ಮಾಡಿದ ಅಥವಾ ಹೀನ ಸಂಸ್ಕಾರವೊಂದಕ್ಕೆ ಕುಮ್ಮಕ್ಕು ಕೊಟ್ಟ ಬೇಜವಾಬ್ದಾರಿತನದ ಹೊರೆಯನ್ನು ಧಾರಾವಾಹಿ ಹೊರಬೇಕಾಗುತ್ತದೆ. ಯಾರೋ ಒಂದಷ್ಟು ಜನರೊಳಗಿನ ನೀಚತನವನ್ನು ಬಂಡವಾಳವಾಗಿಟ್ಟುಕೊಂಡು ಟಿಆರ್​ಪಿ ಪಡೆಯುವ ಹುನ್ನಾರ ಕಡಿಮೆ ದರ್ಜೆಯದೇ ಅಲ್ಲವೇ?

    ಈ ಪ್ರೋಮೋದ ಹಿಂದೆ ಮುಂದೆಯೇ ಮತ್ತೆರೆಡು ಹೊಸ ಧಾರಾವಾಹಿಗಳ ಪ್ರೋಮೋಗಳೂ ಪ್ರಸಾರವಾಗುತ್ತಿವೆ. ಮೊದಲನೆಯದು ಹುಡುಗಿಯೊಬ್ಬಳು ಆಟೋದ ಹಿಂದೆ ಬರೆದ ಬರಹದಲ್ಲಿನ ತಪ್ಪನ್ನು ಆಟೋ ಡ್ರೈವರ್​ಗೆ ಅನುನಯದಿಂದ ತೋರಿಸಿಕೊಡುವ ದೃಶ್ಯ, ನಾಯಕಿ ಕಾಲೇಜಿನಲ್ಲಿ ಪಾಠ ಹೇಳುತ್ತಾ ಇಂಗ್ಲಿಷ್ ಕೂಡಾ ಬೇಕು, ಕನ್ನಡವೂ ಗೊತ್ತಿರಬೇಕು ಎಂದು ಸಂಪೂರ್ಣ ದೃಢತೆಯಿಂದ ಹೇಳುವ ದೃಶ್ಯ. ಮತ್ತೊಂದು ಪ್ರೋಮೋದಲ್ಲಿ ಮನೆಯೊಳಗಿನ, ಹೊರಗಿನ ಕೆಲಸಗಳಲ್ಲಿ ಚುರುಕಾದ ನಾಯಕಿ ಓದು ಬರಹದಲ್ಲಿ ಹಿಂದೆ ಬಿದ್ದಿರುವ, ಪಾಸಾಗಲು ಚಡಪಡಿಸುತ್ತಿರುವ ಆದರೆ ಪಾಸಾಗದ ನಗುಮೊಗದ ಹುಡುಗಿ. ಇವೆರೆಡೂ ಪ್ರೋಮೋಗಳು ಬಹಳಷ್ಟು ಮನೆಗಳ ಮನಸ್ಸನ್ನು ಗೆಲ್ಲುತ್ತವೆ.

    ಜನಗಳ ಮನಸ್ಸನ್ನು ಗೆಲ್ಲಬೇಕಾದ್ದು ಸಿನೆಮಾದ ಧ್ಯೇಯ. ಧಾರಾವಾಹಿಗಳಿಗೆ ಮನೆಗಳನ್ನು ಗೆಲ್ಲುವುದು ಧ್ಯೇಯವಾಗಿರಬೇಕು. ಏಕೆಂದರೆ ನಾನೊಬ್ಬಳೇ ಕೂತು ಧಾರಾವಾಹಿ ನೋಡುವುದಿಲ್ಲ. ನನ್ನೊಡನೆ ನನ್ನ ಅತ್ತೆ, ಮಾವ, ಅಮ್ಮ, ಅಪ್ಪ, ನನ್ನ ಮಕ್ಕಳು, ನನ್ನ ಗಂಡ ಎಲ್ಲರೂ ಕುಳಿತು ನೋಡುತ್ತಾರೆ. ಅಂದ ಮೇಲೆ ಧಾರಾವಾಹಿ ಒಟ್ಟಾರೆ ಎಲ್ಲರಿಗೂ ಹಿಡಿಸುವಂತಿರಬೇಕು. ಆದ್ದರಿಂದ ಧಾರಾವಾಹಿ ಮನೆಗಳನ್ನು ಗೆಲ್ಲಬೇಕು. ಮೊದಲು ಹೇಳಿದ ಪ್ರೋಮೋದಿಂದ ಉತ್ಪತ್ತಿಯಾಗುವ ಅಭಿಪ್ರಾಯಗಳೇನು? ಮೊದಲನೆಯದು ಹೆಣ್ಣು ಮಕ್ಕಳನ್ನು ಅಗೌರವದಿಂದ ನಡೆಸಿಕೊಳ್ಳುವುದನ್ನು ಇದರಲ್ಲಿ ತೋರಿಸುತ್ತಾರೆ.

    ಎರಡನೆಯದು ಇದರಲ್ಲಿ ಬಳಸಬಹುದಾದ ಪದಪುಂಜಗಳು ಸಭ್ಯವಾದದ್ದಲ್ಲ. ಒಂದು ಕುಟುಂಬ ಒಟ್ಟಾಗಿ ಕುಳಿತು ನೋಡಲು ಮುಜುಗರವಾಗಬಹುದು. ಆದ್ದರಿಂದ ನೋಡದಿರುವುದೇ ಮೇಲು. ಮೂರನೆಯದು ತನ್ನನ್ನು ತಾನು ಗೌರವಯುತವಾಗಿ ಪ್ರಸ್ತುತ ಪಡಿಸಿಕೊಳ್ಳುವುದು ಧಾರಾವಾಹಿಗೆ ಬರುವುದಿಲ್ಲ. ಆದ್ದರಿಂದ ಗೌರವ ಕೊಡಬೇಕಾಗಿಲ್ಲ ಎನ್ನುವುದು.

    ಎರಡನೆಯ ಪ್ರೋಮೋ ನೋಡಿದಾಗ ಮನಸ್ಸಿಗೆ ಮೂಡುವ ಭಾವಗಳೇನು? ಮೊದಲನೆಯದು ಅದರಲ್ಲಿ ನಾಯಕಿಯಾಗಲೀ, ನಾಯಕನಾಗಲೀ, ಉಳಿದ ಯಾವುದೇ ಪಾತ್ರಗಳಾಗಲೀ ಗೌರವಾನ್ವಿತವಾಗಿ ನಡೆದುಕೊಂಡಿದ್ದಾರೆ. ನಾಯಕಿ ಶಿಕ್ಷಕಿಯಂಥ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಾಳೆ. ಆ ಸ್ಥಾನಕ್ಕೆ ತಕ್ಕ ಮಾತುಗಳನ್ನೇ ಆಡಿದ್ದಾಳೆ.

    ಆದ್ದರಿಂದ ಕಥೆಯಲ್ಲಿ ಹೊಸತೇನಿರುತ್ತದೆಯೋ ಇಲ್ಲವೋ, ಮನೆ ಮಂದಿಗೆ ಮುಜುಗರವಾಗುವಂಥದ್ದಂತೂ ಇರಲಾರದು. ಎರಡನೆಯದು ಕನ್ನಡದ ಬಗೆಗೆ, ಕನ್ನಡದ ಇತಿಹಾಸದ ಬಗೆಗೆ ಪ್ರೋಮೋದಲ್ಲೇ ಇಷ್ಟು ವಿಷಯ ಹೇಳುವವರು ಬಹುಶಃ ಧಾರಾವಾಹಿಯಲ್ಲೂ ಒಳ್ಳೆಯ ಭಾಷೆಯನ್ನೇ ಬಳಸಿರಬಹುದು. ಮಕ್ಕಳು ನೋಡಿದರೆ ಅಪಾಯವಿಲ್ಲ.

    ಮೂರನೆಯ ಪ್ರೋಮೋ ನೋಡಿದಾಗ ಅನಿಸುವ ಅನಿಸಿಕೆಗಳೇನು? ಮೊದಲನೆಯದು ವಿದ್ಯೆ ತಲೆಗೆ ಹತ್ತದ ನೂರಾರು ಮಕ್ಕಳು ಅವರ ತಂದೆ ತಾಯಂದಿರು ಇನ್ನು ಬದುಕೇ ಮುಗಿದುಹೋಯಿತೆಂಬಂಥ ಹತಾಶೆ ಬೇಡವೇನೋ ಮತ್ತೊಂದು ದಾರಿ ಇರಬಹುದೇನೋ ಎಂಬ ಹೊಳಹು ಕಾಣುವುದು. ವಿದ್ಯೆಯ ಬಗ್ಗೆ ಉದಾಸೀನರಾಗಿರುವ ಮಕ್ಕಳಿಗೆ ಅದರ ಮೌಲ್ಯ ತಿಳಿಸಬಹುದೇನೋ ಎಂಬ ಆಸೆ ಮೂಡಿಸುವುದು. ಇವೆಲ್ಲಾ ಹೀಗೆಯೇ ಆಗುತ್ತದೆ ಎಂದು ಖಚಿತವಾಗಿ ನಾನು ಹೇಳುತ್ತಿಲ್ಲ.

    ಮುಂದೆ ಆಯಾ ಧಾರಾವಾಹಿಗಳು ಅದೇ ಜಾಡನ್ನು ಹಿಡಿದೇ ಮುಂದುವರೆಯುತ್ತವೆ ಎಂಬ ಗ್ಯಾರೆಂಟಿಯೂ ಇಲ್ಲ. ಆದರೆ ಧಾರಾವಾಹಿಗಳ ಮನರಂಜನೆ ಸ್ಯಾಚುರೇಟ್ ಆಗುತ್ತಿರುವ, ಕೈಯಲ್ಲಿನ ಮೊಬೈಲು ಟಿವಿಗಿಂತ ಹೆಚ್ಚು ಮನರಂಜಕವಾಗುತ್ತಿರುವ, ಧಾರಾವಾಹಿ ನೋಡದಿರುವ ಆಯ್ಕೆ ಸಾಧ್ಯವಿರುವ ಈ ಹೊತ್ತಿನಲ್ಲಿ ಬರಿಯ ಧಾರಾವಾಹಿಗಳನ್ನಷ್ಟೇ ಅಲ್ಲ, ಅವುಗಳ ಪ್ರೋಮೋಗಳನ್ನೂ ಜವಾಬ್ದಾರಿಯಿಂದ, ಜತನದಿಂದ ತಯಾರಿಸಬೇಕು. ವರ್ಷಾನುಗಟ್ಟಲೆ ಓಡಲೆಂದು ಆಶಿಸುವ ಧಾರಾವಾಹಿಗಳ ಬಂಡವಾಳ ಅದರ ಪ್ರೋಮೋ. ಅದನ್ನೂ ಸರಿಯಾಗಿ ಚಿತ್ರಿಸಲಾಗದಿದ್ದರೆ ಅದು ಬೇಜವಾಬ್ದಾರಿತನದ ಪರಮಾವಧಿಯಲ್ಲವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts