More

    ತುಂಗಭದ್ರಾ ಒಳಹರಿವು ಹೆಚ್ಚಳ

    ವಿಜಯವಾಣಿ ವಿಶೇಷ ಕೊಪ್ಪಳ
    ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕಳೆದೆರೆಡು ದಿನದಿಂದ ಒಳಹರಿವು ಹೆಚ್ಚಳವಾಗಿದ್ದು, ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಹರ್ಷ ತಂದಿದೆ. ಈಗಿರವ ಒಳಹರಿವು ಮುಂದುವರಿದಲ್ಲಿ ಒಂದು ಬೆಳೆಗೆ ಸಾಕಾಗುವಷ್ಟು ನೀರು ಸಂಗ್ರಹವಾಗುವ ವಿಶ್ವಾಸ ಮೂಡಿದೆ.

    ಮಲೆನಾಡು ಪ್ರದೇಶವಾದ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಜು.9 ಮತ್ತು 10ರಂದು ಉತ್ತಮ ಮಳೆಯಾದ ಕಾರಣ ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಜು.9ರಂದು 274 ಕ್ಯೂಸೆಕ್, 10ರಂದು 9293 ಕ್ಯೂಸೆಕ್ ಹಾಗೂ ಮಂಗಳವಾರ 18,030 ಕ್ಯೂಸೆಕ್ ಒಳಹರಿವು ದಾಖಲಾಯಿತು.

    ಸೋಮವಾರದಿಂದ ಮಳೆ ಪ್ರಮಾಣ ಕಡಿಮೆಯಾದ ಕಾರಣ ಒಳ ಹರಿವಿನಲ್ಲೂ ಕಡಿತವಾಗಿದೆ. ಮಂಗಳವಾರ ಸಂಜೆ 4 ಗಂಟೆ ವೇಳೆಗೆ 13 ಸಾವಿರ ಕ್ಯೂಸೆಕ್‌ಗೆ ಒಳಹರಿವು ಕುಸಿದಿದೆ. 5.419 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಸದ್ಯಕ್ಕೆ ಕುಡಿವ ನೀರಿನ ಆತಂಕ ನಿವಾರಣೆಯಾಗಿದೆ. ಸತತ 24 ಗಂಟೆ ಕಾಲ 11 ಸಾವಿರ ಕ್ಯೂಸೆಕ್ ನೀರು ಹರಿದು ಬಂದಲ್ಲಿ ಜಲಾಶಯದಲ್ಲಿ ಒಂದು ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ.

    ಈಗಿರುವ ಒಳ ಹರಿವು ಮುಂದುವರಿದಲ್ಲಿ ಜು.12ರ ವೇಳೆಗೆ ಹೆಚ್ಚುವರಿ 1.5 ಟಿಎಂಸಿ ನೀರು ಬರಲಿದೆ. ಆಗಸ್ಟ್ ಮಾಸಾಂತ್ಯದವರೆಗೆ ಮಳೆಗಾಲ ಮುಂದುವರಿಯಲಿದ್ದು, ಮಳೆಯಾಗುವ ನಿರೀಕ್ಷೆ ಇದೆ. ಅಷ್ಟರಲ್ಲಿ ಜಲಾಶಯದ ನೀರಿನ ಮಟ್ಟ ಸುಧಾರಣೆಯಾಗುವ ಭರವಸೆಯಲ್ಲಿ ರೈತಾಪಿವರ್ಗವಿದೆ.
    ಪ್ರಸಕ್ತ ವರ್ಷ ಮಳೆಗಾಲ ಆರಂಭದಿಂದಲೂ ಜಲಾಶಯದ ಒಳ ಹರಿವಿನಲ್ಲಿ ಏರಿಳಿತ ಕಂಡುಬರುತ್ತಿದೆ. ಮೇ ತಿಂಗಳ ಅಂತ್ಯಕ್ಕೆ ಒಳಹರಿವಿನಲ್ಲಿ ಏರಿಕೆಯಾದ ಕಾರಣ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗುವ ಮುನ್ಸೂಚನೆ ದೊರೆತಿತ್ತು. ಆದರೆ, ಜೂನ್‌ನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಸಂಗ್ರಹಗೊಂಡ ನೀರು ಖಾಲಿಯಾಗಿ ಡೆಡ್ ಸ್ಟೋರೇಜ್ ತಲುಪಿದೆ. ಸದ್ಯ ಚೇತರಿಕೆ ಹಾದಿಯಲ್ಲಿರುವುದು ಕೊಂಚ ನೆಮ್ಮದಿ ವಿಷಯ. ಕೊಪ್ಪಳ ಸೇರಿ ಇತರ ನಗರ, ಗ್ರಾಮಗಳು ಕುಡಿವ ನೀರಿಗೆ ಜಲಾಶಯ ಅವಲಂಬಿಸಿದ್ದು, ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಎದುರಾಗಬಹುದಾಗಿದ್ದ ಸಂಕಷ್ಟದಿಂದ ಪಾರಾದಂತಾಗಿದೆ.

    ಜಲಾಶಯದ ಇತಿಹಾಸ ಗಮನಿಸಿದಾಗ 2016-17ನೇ ಜಲ ವರ್ಷದಲ್ಲಿ ಕೇವಲ 88 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಅತಿ ಕಡಿಮೆ ಸಂಗ್ರಹವಾಗಿದೆ. ಒಂದು ಜಲ ವರ್ಷದಲ್ಲಿ ಜಲಾಶಯದಿಂದ 212 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶವಿದ್ದು, ಜಲಾಶಯ ನಿರ್ಮಾಣದ ಬಳಿಕ ಕೇವಲ ಒಮ್ಮೆ ಮಾತ್ರ ಬಳಸಲು ಅವಕಾಶ ಸಿಕ್ಕಿದೆ. ಉಳಿದಂತೆ ಅಪಾರ ನೀರು ನದಿ ಪಾಲಾಗುತ್ತಿದೆ.

    ವರ್ಷಗಳು ಕಳೆದಂತೆ ಹೂಳಿನ ಮಟ್ಟವೂ ಹೆಚ್ಚುತ್ತಿದ್ದು, ನೀರು ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದೆ. ಸಮಸ್ಯೆಗೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಿಸುವುದಾಗಿ ಸರ್ಕಾರ ಕಳೆದೊಂದು ದಶಕದಿಂದ ಹೇಳುತ್ತಿದ್ದು, ಯೋಜನೆ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಈ ವರ್ಷ ಬಜೆಟ್‌ನಲ್ಲೂ ಯೋಜನೆ ಅನುಷ್ಠಾನ ಸಂಬಂಧ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳೊಡನೆ ಚರ್ಚಿಸುವುದಾಗಿ ತಿಳಿಸಿದ್ದು ಬಿಟ್ಟರೆ, ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಕಳೆದ ಬಿಜೆಪಿ ಸರ್ಕಾರ ಘೋಷಿಸಿದ್ದ ಒಂದು ಸಾವಿರ ಕೋಟಿ ರೂ. ಅನುದಾನದ ಪ್ರಸ್ತಾಪವೂ ಇಲ್ಲ.

    ಕಳೆದ ವರ್ಷ 90 ಟಿಎಂಸಿ ಸಂಗ್ರಹ
    ಕಳೆದ ವರ್ಷ ಈ ವೇಳೆಗೆ ಜಲಾಶಯದಲ್ಲಿ 90 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿತ್ತು. ಒಳಹರಿವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೂ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿತ್ತು. ನದಿಗೆ ನೀರು ಹರಿಸುವ ಬದಲು ಕಾಲುವೆ ಮೂಲಕ ರೈತರಿಗೆ ನೀರು ಬಿಡುಗಡೆ ಮಾಡಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ, ಈ ವರ್ಷ 5 ಟಿಎಂಸಿ ಸಂಗ್ರಹವಾಗಿದೆ. ಆದರೆ, ಒಳಹರಿವು ಹೆಚ್ಚಾಗಿದ್ದು, ದಿನೇದಿನೆ ನೀರು ಸಂಗ್ರಹ ಹೆಚ್ಚಳವಾಗುತ್ತಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಅಣಿಯಾಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts