More

    ತುಂಗಾ ಜಲಾಶಯ ಬಹುತೇಕ ಭರ್ತಿ

    ಶಿವಮೊಗ್ಗ: ಜೂನ್ ಅಂತ್ಯದವರೆಗೂ ಮುಂಗಾರು ಸುಳಿಯದೇ ಕೃಷಿಕರು ಕಂಗಾಲಾಗಿದ್ದರು. ಜಲಾಶಯಗಳು ಕುಸಿತ ಕಾಣುವ ಮೂಲಕ ಕುಡಿಯುವ ನೀರಿಗೂ ಅಭಾವ ಉಂಟಾಗಿ ಆತಂಕ ಸೃಷ್ಟಿಸಿತ್ತು. ಆದರೆ ಜುಲೈ ಮೊದಲ ವಾರದಲ್ಲೇ ವರುಣನ ಆಗಮನವಾಗಿದ್ದು ಜಲಾಶಯಗಳಲ್ಲಿನ ನೀರಿನಮಟ್ಟದಲ್ಲಿ ಕೊಂಚ ಏರಿಕೆ ಕಂಡುಬರುತ್ತಿದೆ. ಅದರಲ್ಲೂ ರಾಜ್ಯದಲ್ಲೇ ಅತಿ ಚಿಕ್ಕ ಜಲಾಶಯವೆಂಬ ಹೆಗ್ಗಳಿಕೆ ಪಡೆದಿರುವ ಗಾಜನೂರಿನ ತುಂಗಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚುತ್ತಿದೆ. ಹಾಗಾಗಿ ಯಾವುದೇ ಕ್ಷಣದಲ್ಲಿಯೂ ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಬಿಡುವ ಸಾಧ್ಯತೆಯೂ ದಟ್ಟವಾಗಿದೆ.

    588.24 ಮೀಟರ್ ಸಾಮರ್ಥ್ಯದ ತುಂಗಾ ಜಲಾಶಯವು ಪ್ರತಿ ವರ್ಷದಂತೆ ಈ ಬಾರಿಯೂ ಮೊದಲು ಭರ್ತಿಯಾಗುತ್ತಿದೆ. ಬುಧವಾರ ಮಧ್ಯಾಹ್ನದ ವೇಳೆಗೆ 587.54 ಮೀಟರ್‌ಗೆ ತಲುಪಿದ್ದು ಸಂಜೆ ನಾಲ್ಕರಿಂದಲೇ ವಿದ್ಯುತ್ ಉತ್ಪಾದನೆಗೆ ನೀರು ಹರಿಸಲಾಯಿತು. ಜಲಾಶಯದ ನೀರಿನ ಸಂಗ್ರಹ ಗರಿಷ್ಠಮಟ್ಟಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಯಾವ ಸಮಯದಲ್ಲಿ ಬೇಕಾದರೂ ನೀರು ಹೊರಹರಿಸುವ ಸಾಧ್ಯತೆ ಇದ್ದು ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಕರ್ನಾಟಕ ನೀರಾವರಿ ನಿಗಮವು ಮುನ್ಸೂಚನೆಯನ್ನೂ ನೀಡಿದೆ.
    ಕಳೆದೆರಡು ದಿನಗಳಿಂದ ಸುರಿಯುತ್ತಿರವ ಮಳೆಗೆ ಬಹುತೇಕ ಭರ್ತಿಯಾಗಿದೆ. ಕಳೆದ ವರ್ಷ ಈ ದಿನಕ್ಕೆ ಜಲಾಶಯ ಭರ್ತಿಯಾಗಿತ್ತು. ಹಾಲಿ 4,830 ಕ್ಯೂಸೆಕ್ ನೀರಿನ ಒಳಹರಿವಿದ್ದು 50 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ನೀರಿನ ಒಳಹರಿವು 5 ಸಾವಿರ ಕ್ಯೂಸೆಕ್ ದಾಟಿದರೆ ತುಂಗಾನದಿಗೆ ಹರಿಸಲು ನಿಗಮದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
    ಜಲಾಶಯದ ನೀರಿನ ಸಂಗ್ರಹಣ ಸಾಮರ್ಥ್ಯ 3.24 ಟಿಎಂಸಿ ಅಡಿ ಇದ್ದು ಪ್ರಸ್ತುತ ಮುಂಗಾರು ಮಳೆ ವಿಳಂಬದ ಕಾರಣದಿಂದ ಜಲಾಶಯದಲ್ಲಿ ನೀರಿನ ಸಂಗ್ರಹದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿತ್ತು. ಇದೀಗ ಶೃಂಗೇರಿ, ಕಿಗ್ಗ ಸೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಡ್ಯಾಂ ಗರಿಷ್ಠ ಮಟ್ಟಕ್ಕೆ ಬರಲಾರಂಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts