More

    ತುಮ್ಮನಹಳ್ಳಿ ಗ್ರಾಪಂ ತಿಪ್ಪೇನಹಳ್ಳಿ ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ: ವಿವಾದ ಸೃಷ್ಟಿಸಿದ ನಾಮಫಲಕ ಅಳವಡಿಕೆ, ತೆರವು

    ಶಿಡ್ಲಘಟ್ಟ: ಪ್ರಕೃತಿ ಮುಂದೆ ಯಾರೂ ದೊಡ್ಡವರಲ್ಲ. ಆದರೆ ಪ್ರಕೃತಿ ವಿಕೋಪ ಎದುರಿಸಲು ನಾವೆಲ್ಲರೂ ಜಾಗೃತರಾಗಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

    ತುಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ತಿಪ್ಪೇನಹಳ್ಳಿಯಲ್ಲಿ ಆಶ್ರಯ ನಿವೇಶನ ಯೋಜನೆಯಡಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 25 ವರ್ಷಗಳಿಂದ ಈ ಭಾಗದಲ್ಲಿ ಸರಿಯಾದ ಮಳೆ-ಬೆಳೆ ಇಲ್ಲದೆ ಜನರ ಬದುಕು ದುಸ್ತರವಾಗಿದೆ. ಎಷ್ಟೇ ಅಡಿ ಆಳದಲ್ಲಿ ಕೊಳವೆ ಬಾವಿ ಕೊರಿಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವಿದೆ ಎಂದು ತಿಳಿದರೆ ಕೆಲವು ಅಧಿಕಾರಿಗಳು ಅದನ್ನು ಕಬಳಿಸಲು ಮುಂದಾಗುವ ಸ್ಥಿತಿ ಇದೆ. ಆದರೆ ತುಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ತಿಪ್ಪೇನಹಳ್ಳಿಯಲ್ಲಿ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಲು ಸುಮಾರು 4.5 ಎಕರೆ ಸ್ಥಳ ಉಳಿಸಿಕೊಂಡಿರುವ ಪಂಚಾಯಿತಿ ಕಾರ್ಯ ಶ್ಲಾಘನೀಯ ಎಂದರು.

    ಜಿಪಂ ಸದಸ್ಯೆ ತನುಜಾ ರಘು ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆಗಳಾಗಿವೆ. ಶಿಡ್ಲಘಟ್ಟ ತಾಲೂಕನ್ನೂ ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಸರ್ಕಾರದ ಮೇಲೆ ಶಾಸಕರು ಒತ್ತಡ ಹೇರಬೇಕು ಎಂದು ಹೇಳಿದರು.

    ಈ ವೇಳೆ ತಿಪ್ಪೇನಹಳ್ಳಿಯ 30 ಮಂದಿಗೆ ನಿವೇಶನ ಹಕ್ಕುಪತ್ರ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಸುರೇಂದ್ರ, ಜಿಪಂ ಸಿಇಒ ಫೌಜಿಯಾ ತರನ್ನುಮ್, ತಾಪಂ ಇಒ ಬಿ.ಶಿವಕುಮಾರ್, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್ ಇತರರು ಉಪಸ್ಥಿತರಿದ್ದರು.

    ಆಶ್ರಯ ಬಡಾವಣೆ ನಾಮಫಲಕ ವಿವಾದ: ತಿಪ್ಪೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಆಶ್ರಯ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಸ್ವಾಗತ ಫಲಕದಲ್ಲಿ ಆಶ್ರಯ ಬಡಾವಣೆ ಎಂದು ನಮೂದಿಸುವ ಬದಲು ಬಿ.ರಾಮಯ್ಯ ಆಶ್ರಯ ಬಡಾವಣೆ ಎಂದು ಬರೆಸಲಾಗಿತ್ತು. ಗ್ರಾಪಂ ಉಪಾಧ್ಯಕ್ಷರು, ಸದಸ್ಯರು ತಕರಾರು ತೆಗೆದು ಈ ಬಗ್ಗೆ ತಾಪಂ ಇಒ ಬಿ.ಶಿವಕುಮಾರ್ ಅವರಿಗೆ ಅರ್ಜಿ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇವರು ಪಿಡಿಒಗೆ ಪತ್ರ ಬರೆದು, ಇದು ಸರ್ಕಾರಿ ಯೋಜನೆ ಕಾರ್ಯಕ್ರಮವಾಗಿದ್ದು, ಖಾಸಗಿ ವ್ಯಕ್ತಿಗಳ ಹೆಸರು ನಮೂದಿಸಬಾರದು. ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ವರದಿ ನೀಡಬೇಕು ಎಂದು ಸೂಚಿಸಿದ್ದರು. ಅದರಂತೆ ಸೋಮವಾರ ರಾತ್ರಿ ಬಿ.ರಾಮಯ್ಯ ಅವರ ಹೆಸರನ್ನು ಸ್ವಾಗತ ಲಕದಿಂದ ತೆರವು ಮಾಡಲಾಯಿತು.

    ಬಿ.ರಾಮಯ್ಯ ಅವರು ಸಜ್ಜನ ರಾಜಕಾರಣಿ. ಇವರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಸರ್ಕಾರಿ ಯೋಜನೆಗಳಲ್ಲಿ ಖಾಸಗಿ ವ್ಯಕ್ತಿಗಳ ಹೆಸರು ಸೇರಿಸಬಾರದು ಎಂಬ ಕಾನೂನು ಇದ್ದರೂ ಇವರ ಹೆಸರು ಸೇರಿಸಿ ಬಳಿಕ ಅಳಿಸಿದ್ದು ಹಿರಿಯರಿಗೆ ಮಾಡಿದ ಅವಮಾನ.
    -ತನುಜಾ ರಘು, ಜಿಪಂ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts