More

  ಜಿಪಂ ಅಧ್ಯಕ್ಷೆ ಲತಾ ರಾಜೀನಾಮೆ ಕೊಡಿಸೋಣ ಬ್ರದರ್: ಮಾಜಿ ಸಿಎಂ ಕುಮಾರಸ್ವಾಮಿ

  ತುಮಕೂರು: ಜಿಪಂ ಅಧ್ಯಕ್ಷೆ ಲತಾ ಹಾಗೂ ಉಪಾಧ್ಯಕ್ಷೆ ಶಾರದಾ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜೆಡಿಎಸ್ ಜಿಪಂ ಸದಸ್ಯರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅಧ್ಯಕ್ಷ, ಉಪಾಧ್ಯಕ್ಷೆ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿದ್ದಾರೆ.

  ಪೂರ್ವನಿರ್ಧಾರದಂತೆ ಬೆಂಗಳೂರು ನಿವಾಸದಲ್ಲಿ ಶನಿವಾರ ಭೇಟಿಯಾದ ಸದಸ್ಯರಿಗೆ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ನೀಡಬೇಡಿ, ನಾನೇ ಅಧ್ಯಕ್ಷರ ರಾಜೀನಾಮೆ ಕೊಡಿಸುತ್ತೇನೆ ಎಂದು ಎಚ್‌ಡಿಕೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

  ರಾಜೀನಾಮೆಗೆ ಒಪ್ಪಿರುವ ಕುಮಾರಸ್ವಾಮಿ ಸದಸ್ಯರ ಬಲ ತೋರಿಸುವಂತೆ ಷರತ್ತು ವಿಧಿಸಿದ್ದು, ಅಧ್ಯಕ್ಷರ ಪದಚ್ಯುತಿಗೆ ಯತ್ನಿಸಿದವರಿಗೆ ಇರಿಸುಮುರಿಸು ತಂದಿದೆ. ಮತ್ತೆ ಅಧ್ಯಕ್ಷ ಗಾದಿ ಜೆಡಿಎಸ್‌ಗೆ ಎಂಬ ಖಾತ್ರಿ ಸಿಕ್ಕರೆ ರಾಜೀನಾಮೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಸಭೆಯಲ್ಲಿದ್ದ ಸದಸ್ಯರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

  ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಜಿಪಂ ಅಧ್ಯಕ್ಷೆ ಲತಾ, ಕಲ್ಕೆರೆ ರವಿಕುಮಾರ್, ಮಾಜಿ ಶಾಸಕ ಸುಧಾಕರ್‌ಲಾಲ್ ಸೇರಿ ಜಿಪಂ 14 ಸದಸ್ಯರು ಚರ್ಚಿಸಿದರು ಎನ್ನಲಾಗಿದೆ.ಲತಾ ಅವರನ್ನು ಬದಲಾಯಿಸಿ ಶೆಟ್ಟಿಕೆರೆ ಜಿಪಂ ಕ್ಷೇತ್ರದ ಸದಸ್ಯ ಕಲ್ಲೇಶ್‌ಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಜೆಡಿಎಸ್ ಸದಸ್ಯರ ಆಗ್ರಹದ ಸಮಯದಲ್ಲಿ ಅಮೃತೂರು ಕ್ಷೇತ್ರದ ಸದಸ್ಯೆ ಮಂಜುಳಾ ಉಪಾಧ್ಯಕ್ಷ ಸ್ಥಾನದ ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿರುವ ಕಾಂಗ್ರೆಸ್, ಜೆಡಿಎಸ್ ಸದಸ್ಯರು ನಮ್ಮ ಬೆಂಬಲಕ್ಕೆ ಸಿದ್ಧರಾಗಿರುವ ಬಗ್ಗೆ ನನಗೆ ಖಾತ್ರಿ ಒದಗಿಸಬೇಕು. ಅದೇನ್ ಮಾಡ್ತಿರೋ ಮಾಡಿ ಬ್ರದರ್ ಆಯಾ ಪಕ್ಷದ ನಿರ್ಧಾರ ಉಲ್ಲಂಘಿಸಿ ಬರುವ ಸದಸ್ಯರನ್ನು ಕರೆದುಕೊಂಡು ಬನ್ನಿ ಎಂದು ಕಲ್ಲೇಶ್‌ಗೆ ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ. ಕಲ್ಲೇಶ್ ರಾಜಕೀಯ ದಾಳಕ್ಕೆ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸಿದ್ದ ವೈ.ಸಿ.ಸಿದ್ದರಾಮಯ್ಯ, ಜಿ.ಜೆ.ರಾಜಣ್ಣ ಮತ್ತಿತರರು ಭ್ರಮನಿರಸನವಾಗಿದ್ದು ಲತಾ ಹಾಗೂ ಶಾರದಾಗೆ ಆನೆ ಬಲ ಬಂದಂತಾಗಿದೆ.

  ಕಲ್ಲೇಶ್‌ಗೆ ಬೆಂಬಲವಿಲ್ಲ!: ಶೆಟ್ಟಿಕೆರೆ ಕ್ಷೇತ್ರದ ಜಿಪಂ ಸದಸ್ಯ ಕಲ್ಲೇಶ್ ಹೆಸರು ಅನಿರೀಕ್ಷಿತವಾಗಿ ಕುಮಾರಸ್ವಾಮಿ ಎದುರೇ ಪ್ರಸ್ತಾಪವಾಗಿದ್ದರೂ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಗಟ್ಟಿಯಾಗಿ ಬೆಂಬಲಕ್ಕೆ ನಿಲ್ಲದಿರುವುದು ಹಿನ್ನಡೆಯಾಗಲಿದೆ. ಕುರುಬ ಸಮುದಾಯದ ಲತಾಗೆ ಬೆಂಬಲ ನೀಡಬೇಕಾದ ಧರ್ಮ ಸಂಕಟದಲ್ಲಿರುವ ಸುರೇಶ್‌ಬಾಬು ರಾಜೀನಾಮೆ ಪ್ರಹಸನದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಪ್ರಮುಖ ನಾಯಕರಾದ ಎಸ್.ಆರ್.ಶ್ರೀನಿವಾಸ್, ಬೆಮೆಲ್ ಕಾಂತರಾಜು ಕೂಡ ಸಭೆಯಿಂದ ದೂರ ಉಳಿದಿದ್ದರು.

  ಅವಿಶ್ವಾಸಕ್ಕೆ ಕೆಎನ್ನಾರ್ ಹಿಂದೇಟು!: ಕಾಂಗ್ರೆಸ್‌ಗೆ ಸುಲಭವಾಗಿ ಅಧಿಕಾರ ಹಿಡಿಯುವ ಅವಕಾಶವಿದ್ದರೂ ಮುಖಂಡನ ನಡುವಿನ ವೈಮನಸ್ಯ ಜಿಪಂ ಸದಸ್ಯರ ಆಸೆಗೆ ತಣ್ಣಿರು ಎರಚಿದೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವಿಶ್ವಾಸ ಗೊತ್ತುವಳಿಗೆ ಆಸಕ್ತಿ ತೋರದಿರುವುದು ಪರಮೇಶ್ವರ್ ಬೆಂಬಲಿಗ ಜಿಪಂ ಸದಸ್ಯರ ಕಣ್ಣು ಕೆಂಪಾಗಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts