More

    ಕಲ್ಪತರುನಾಡಲ್ಲಿ ಇಂದಿನಿಂದ 2ನೇ ಹಂತದ ಯಾತ್ರೆ: ಇದರ ನಡುವೆಯೇ ತುಮಕೂರು ನಗರ ಜೆಡಿಎಸ್​ನಲ್ಲಿ ‘ಆಡಿಯೋ ಸದ್ದು’!

    ತುಮಕೂರು: ಜೆಡಿಎಸ್​ ಪಾಲಿನ “ಕಲ್ಪವೃಕ್ಷ’ವೆನಿಸಿರುವ ತುಮಕೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಯಶಸ್ವಿಯಾಗಿ ಪಂಚರತ್ನ ರಥಯಾತ್ರೆ ಮುಗಿಸಿರುವ ಎಚ್​.ಡಿ.ಕುಮಾರಸ್ವಾಮಿ, ಇಂದಿನಿಂದ ಎರಡನೇ ಹಂತದಲ್ಲಿ ಪಕ್ಷ ಶಕ್ತಿಶಾಲಿಯಾಗಿರುವ ಇನ್ನುಳಿದಿರುವ ನಾಲ್ಕು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲಿದ್ದಾರೆ. ಇದರ ನಡುವೆಯೇ ತುಮಕೂರು ನಗರ ಜೆಡಿಎಸ್​ನಲ್ಲಿ “ಆಡಿಯೋ ಸದ್ದು” ಮಾಡುತ್ತಿದೆ.

    ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಮುಖಂಡರ ನಡುವಿನ ಗಲಾಟೆ ಬೀದಿರಂಪವಾಗಿದೆ. ಬೆಂಗಳೂರಿನ ಉದ್ಯಮಿಯಿಂದ ಜೆಡಿಎಸ್​ ಅಭ್ಯರ್ಥಿ 4 ಕೋಟಿ ರೂಪಾಯಿ ಪಡೆದು ಸ್ಪರ್ಧೆಗೆ ಹಿಂದೇಟು ಹಾಕಿದ್ದ ಬಗ್ಗೆ ಸಾಕ್ಷಿ ಸಮೇತ ಕುಮಾರಸ್ವಾಮಿಗೆ ದೂರು ನೀಡಿದ್ದೇವೆ ಎಂದು ಜೆಡಿಎಸ್​ ಮುಖಂಡರೊಬ್ಬರು ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್​ ಆಗಿದ್ದು, ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕುಮಾರಸ್ವಾಮಿ ಪಂಚರತ್ನ ಯಾತ್ರೆ ಸಂದರ್ಭದಲ್ಲಿಯೇ ಇಂತಹದೊಂದು ಆಡಿಯೋ ವಿವಾದ ಬೀದಿಗೆ ಬಂದಿರುವುದು ಜೆಡಿಎಸ್​ಗೆ ಇರಿಸು-ಮುರಿಸು ಉಂಟುಮಾಡಿದೆ.

    ಡಿ.11ರಿಂದ ನಡೆಯಬೇಕಿದ್ದ ಯಾತ್ರೆ ಮಳೆಯ ಕಾರಣದಿಂದ ಮುಂದೂಡಿಕೆಯಾಗಿತ್ತು. ಡಿ.27ರಂದು ತುರುವೇಕೆರೆ, 28 ಚಿಕ್ಕನಾಯಕನಹಳ್ಳಿ, 29ರಂದು ಕುಣಿಗಲ್​ ಹಾಗೂ 30ರಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾತ್ರೆ ಸಾಗಲಿದೆ. ರಾಷ್ಟ್ರೀಯ ಪಕ್ಷಕ್ಕೆ ಹೋಲಿಸಿದರೆ ಜೆಡಿಎಸ್​ನಲ್ಲಿ ಟಿಕೆಟ್​ ಗೊಂದಲ ಬಗೆಹರಿದಿದ್ದು, ಟಿಕೆಟ್​ ಘೋಷಣೆಯ ನಂತರ ನಡೆಯುತ್ತಿರುವ ಯಾತ್ರೆಯಾದ್ದರಿಂದ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.

    ಎರಡನೇ ಹಂತದ ಯಾತ್ರೆ ಸಾಗುತ್ತಿರುವ ಮಾರ್ಗದಲ್ಲಿ ಜೆಡಿಎಸ್​ ಹೆಚ್ಚು ಪ್ರಭಲವಾಗಿದೆ. ಅಹಿಂದ ಮತದಾರರು ಹೆಚ್ಚಾಗಿರುವ ಚಿಕ್ಕನಾಯಕನಹಳ್ಳಿಯೂ ಪಕ್ಷ ಶಕ್ತಿಶಾಲಿಯಾಗಿದೆ, ಇನ್ನುಳಿದ ಮೂರು ಕ್ಷೇತ್ರದಲ್ಲಿ ಒಕ್ಕಲಿಗರ ಭದ್ರಕೋಟೆಯಾಗಿದ್ದು ಕುಮಾರಸ್ವಾಮಿ ಪರವಾದ ಅಲೆಯ ನಿರೀಕ್ಷೆ ಜೆಡಿಎಸ್​ಗಿದೆ.

    ತುರುವೇಕೆರೆಯಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿಯಲ್ಲಿ ಸಿ.ಬಿ.ಸುರೇಶ್​ಬಾಬು, ತುಮಕೂರು ಗ್ರಾಮಾಂತರದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್​ ಪಕ್ಷದ ಅಧಿಕೃತ ಅಭ್ಯಥಿರ್ಗಳಾಗಿದ್ದು, ಯಾವುದೇ ಪೈಪೋಟಿಯಿಲ್ಲ. ಆದರೆ, ಕುಣಿಗಲ್​ ಕ್ಷೇತ್ರದಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ಅವರಿಗೆ ಟಿಕೆಟ್​ ಘೋಷಿಸಲಾಗಿದ್ದರೂ ವಯಸ್ಸಿನ ಕಾರಣ ಮುಂದಿಟ್ಟುಕೊಂಡು ಕೊನೇ ಕ್ಷಣದಲ್ಲಿ ಅವರ ಪುತ್ರರಿಬ್ಬರಲ್ಲಿ ಒಬ್ಬರನ್ನು ಜೆಡಿಎಸ್​ ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

    ಜ.20ಕ್ಕೆ ತಿಪಟೂರಿನಲ್ಲಿ ಯಾತ್ರೆ?: ತಿಪಟೂರು ಕ್ಷೇತ್ರದಲ್ಲಿ ಪಕ್ಷ ಮುನ್ನೆಡೆಸುವ ಸಾರಥಿಯ ಹುಡುಕಾಟ ಆರಂಭಿಸಲಾಗಿದ್ದು, ಜ.20ರಂದು ಯಾತ್ರೆ ಆಯೋಜಿಸುವ ಸಾಧ್ಯತೆಯಿದೆ. ಕಾಂಗ್ರೆಸ್​ನಲ್ಲಿ ಟಿಕೆಟ್​ಗೆ ಅಜಿರ್ ಹಾಕಿರುವ ಪ್ರಮುಖ ನಾಯಕರೊಬ್ಬರಿಗೆ ಜೆಡಿಎಸ್​ ಗಾಳ ಹಾಕಿದ್ದು, ಅವರನ್ನು ಸೇರ್ಪಡೆ ಮಾಡಿಕೊಂಡು ಯಾತ್ರೆ ನಡೆಸಲಿದೆ ಎಂಬ ಗುಸುಗುಸು ಕ್ಷೇತ್ರದೆಲ್ಲೆಡೆ ಕೇಳಿಬರುತ್ತಿದೆ. ಮೊದಲ ಹಂತದಲ್ಲಿ ಟಿಕೆಟ್​ ಘೋಷಣೆಯಾಗಿರುವ ಕ್ಷೇತ್ರಗಳ ಪೈಕಿ ತಿಪಟೂರು ಹಾಗೂ ಶಿರಾದಲ್ಲಿ ಸಾರಥಿಗಾಗಿ ಹುಡುಕಾಟವಿದೆ. ಈ ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್​ ಟಿಕೆಟ್​ ಕೈತಪ್ಪುವವರಿಗೆ ಬಲೆ ಬೀಸಲಾಗಿದೆ ಎಂಬ ಮಾತುಗಳಿವೆ.

    ತಿಪಟೂರಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಪಿಡಿಒ ಸೇರಿ ಮೂವರ ಬಂಧನ

    ಪಂಚರತ್ನ ರಥಯಾತ್ರೆಗೆ ಆಗಮಿಸಿದ್ದವರಿಗೆ ಅಪಘಾತ: ಇಬ್ಬರ ಸ್ಥಿತಿ ಗಂಭೀರ, 10 ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts