More

    ತುಮಕೂರು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಅಕ್ರಮದ್ದೇ ಸದ್ದು

    ತುಮಕೂರು: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ವಿರುದ್ಧ ಸಮರ ಸಾರಿರುವ ಸದಸ್ಯರು, ಕಳೆದ 2 ವರ್ಷದಿಂದ ಕೋಟಿಗಟ್ಟಲೆ ಭ್ರಷ್ಟಾಚಾರ
    ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ತನಿಖೆಗೆ ಒಕ್ಕೊರಲಿನಿಂದ ಆಗ್ರಹಿಸಿದರು.

    ಸತತ ಎರಡು ಬಾರಿ ಕೋರಂ ಕೊರತೆಯಿಂದ ಮುಂದೂಡಿಕೆಯಾಗಿದ್ದ ಸಭೆ ರೈತಪರ ಕೆಲ ಕಾರ್ಯಕ್ರಮಗಳಿಗೆ ಅನುಮೋದನೆ ಅನಿವಾರ್ಯವಾಗಿದ್ದ ಹಿನ್ನೆಲೆಯಲ್ಲಿ ಶನಿವಾರ ನಡೆಯಿತು. ಈ ವೇಳೆ ಸದಸ್ಯರು, ಅಧ್ಯಕ್ಷೆ ಲತಾ, ಸಿಇಒ ಶುಭಾಕಲ್ಯಾಣ್ ವಿರುದ್ಧ ಆರೋಪಗಳ ಸುರಿಮಳೆಗೈದರು.

    ಆರಂಭದಲ್ಲಿ ಮಾತಿಗೆ ನಿಂತ ವೈ.ಸಿ.ಸಿದ್ದರಾಮಯ್ಯ, ಸಿಸಿ ಕ್ಯಾಮರಾ ಅಳವಡಿಕೆ ಕಾಮಗಾರಿಯಲ್ಲಿ ಜಿಪಂನಲ್ಲಿ 1.30 ಕೋಟಿ ರೂ. ದುರುಪಯೋಗವಾಗಿದ್ದು ಸಿಇಒ ತಪ್ಪಿತಸ್ಥ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
    ಸಾಮಾನ್ಯಸಭೆ, ಸ್ಥಾಯಿ ಸಮಿತಿಯಲ್ಲಿ ಅನುಮೋದನೆ ಪಡೆಯದೆ ಹಣ ಬಳಸಲಾಗಿದೆ. ಈ ಬಗ್ಗೆ ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಲೋಕಾಯುಕ್ತ ತನಿಖೆ ವಹಿಸುವಂತೆ ತೀರ್ಮಾನಿಸಿದ್ದರೂ ಸುಮ್ಮನಿರುವುದೇಕೆ ಎಂದು ತರಾಟೆಗೆ ತೆಗೆದುಕೊಂಡರು.

    ಸದಸ್ಯರು ಒಂದೇ ಬಾರಿಗೆ ಆರೋಪಗಳನ್ನು ಹೊರಿಸಿದಾಗ ತಬ್ಬಿಬ್ಬಾದ ಸಿಇಒ ಶುಭಾಕಲ್ಯಾಣ್, ಕಿಯೋನಿಕ್ಸ್ ಸಂಸ್ಥೆ ನಡೆಸಿರುವ ಕಾಮಗಾರಿ ಪರಿಶೀಲಿಸಲಾಗಿದ್ದು, ಕೆಲವು ಕಡೆ ಸ್ಥಗಿತವಾಗಿರುವ ಕ್ಯಾಮರಾ ದುರಸ್ತಿಗೆ ಕ್ರಮವಹಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಆರೋಗ್ಯ ಸ್ಥಾಯಿ ಸಮಿತಿಯಲ್ಲಿ 43 ಲಕ್ಷ ರೂ.ಗೆ ಮಾತ್ರ ಅನುಮತಿ ಪಡೆದು ಹೆಚ್ಚುವರಿಯಾಗಿ 1ಕೋಟಿ ರೂ. ಬಳಸಿರುವ ಬಗ್ಗೆ ದೂರು ನೀಡಿದರೂ ಏಕೆ ಕ್ರಮಕೈಗೊಂಡಿಲ್ಲ ಎಂದು ಸಮಿತಿ ಅಧ್ಯಕ್ಷೆ ಡಾ.ನವ್ಯಾ ಪ್ರಶ್ನಿಸಿದರು.

    ಯಾವ ಅಭಿವೃದ್ಧಿಗಾಗಿ ಅಕ್ರಮಗಳನ್ನು ಮರೆಮಾಚುತ್ತಿದ್ದೀರಾ? ಒಂದೂವರೆ ವರ್ಷದ ಹಿಂದೆ ನಡೆದ ಸಭೆಯಲ್ಲಿ ಸದಸ್ಯರು ತೀರ್ಮಾನಿಸಿದ್ದು ರೆಕಾರ್ಡ್ ಆಗಿದೆ, ಆದರೆ ಇದುವರೆಗೂ ಏಕೆ ಲೋಕಾಯುಕ್ತ ತನಿಖೆಗೆ ವಹಿಸಿಲ್ಲ ಎಂದು ಸದಸ್ಯ ತಿಮ್ಮಯ್ಯ ಪ್ರಶ್ನಿಸಿದರು. ಅಧ್ಯಕ್ಷರ ಅಸಮರ್ಥತೆಯಿಂದ ಮಕ್ಕಳಿಗೆ ಮಿಠಾಯಿ ಕೊಡಿಸುವಂತೆ ಹಣ ದುರುಪಯೋಗವಾಗಿದೆ, ಅಕ್ರಮ ತನಿಖೆಯ ನಂತರವೇ ಸಭೆ ನಡೆಯಬೇಕು ಎಂದು ಹಿರಿಯ ಸದಸ್ಯ ವೈ.ಎಚ್.ಹುಚ್ಚಯ್ಯ ಒತ್ತಾಯಿಸಿದರು. ಉಪಾಧ್ಯಕ್ಷೆ ಶಾರದಾ, ಸದಸ್ಯರಾದ ಮಹಾಲಿಂಗಯ್ಯ, ಗಾಯತ್ರಿದೇವಿ, ಯಶೋಧಾ, ತಿಮ್ಮಣ್ಣ ಮತ್ತಿತರರು ಈ ಅಕ್ರಮದ ಬಗ್ಗೆ ಸಭೆಯಲ್ಲಿ ದನಿ ಎತ್ತಿದರು.

    ನಡಾವಳಿ ತಿದ್ದಲಾಗಿದೆ!: 2017ರ ಸ್ಥಾಯಿ ಸಮಿತಿಯಲ್ಲಿ ವಿವಾದಿತ ಯೋಜನೆಗೆ ಒಪ್ಪಿಗೆ ನೀಡಿದೆ ಎಂದು ಜಿಲ್ಲಾ ಯೋಜನಾ ಶಾಖೆ ಉಪನಿರ್ದೇಶಕಿ ಗಾಯತ್ರಿ ಮಾಹಿತಿ ನೀಡಿದಾಗ ಸಿಟ್ಟಾದ ಸಮಿತಿ ಅಧ್ಯಕ್ಷ ಡಾ.ನವ್ಯಾ ನೇತೃತ್ವದಲ್ಲಿ ಸಭಾಂಗಣದ ಮುಂಭಾಗಕ್ಕೆ ತೆರಳಿ ಎಲ್ಲ ಸದಸ್ಯರು ಧರಣಿ ನಡೆಸಿದರು. ನಡಾವಳಿಯನ್ನೇ ತಿದ್ದಿ ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ದೂರಿದರು.

    ಮುಖ್ಯ ಲೆಕ್ಕಾಧಿಕಾರಿ ಜಿಪಂಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ಅಕ್ರಮ ಉಲ್ಲೇಖಿಸಿದ್ದಾರೆ. ಸಭೆಯಲ್ಲಿ ಅನುಮೋದನೆ ಆಗಿಲ್ಲ ಎನ್ನುವ ಪತ್ರದಲ್ಲಿ ಜಿಪಂ ಅಧ್ಯಕ್ಷರು ಅನುಮೋದನೆ ನೀಡಿದೆ ಎಂದು ಬರೆದು ಸಹಿ ಹಾಕಿದ್ದಾರೆ. ಈ ಅಕ್ರಮಕ್ಕೆ ಅಧ್ಯಕ್ಷರೇ ನೇರ ಹೊಣೆ.
    ಮಹಾಲಿಂಗಯ್ಯ ಸದಸ್ಯ

    ಎಲ್ಲ ಸದಸ್ಯರು ನನ್ನ ಜತೆ ನಡೆಸಿರುವ ಪೋನ್ ಸಂಭಾಷಣೆ ರೆಕಾರ್ಡ್ ಇದೆ, ಈಚೆ ತೆಗೆದರೆ ಎಲ್ಲರ ಬಣ್ಣ ಬಯಲಾಗಲಿದೆ, ನಾನೇನು ಎಸ್ಕೇಪ್ ಆಗೋದಿಲ್ಲ, ಅಂತಹ ತಪ್ಪು ನಾನು ಮಾಡಿಲ್ಲ. ಮುಂದಿನದ್ದು ಸದಸ್ಯರೇ ತೀರ್ಮಾನ ಮಾಡಲಿ.
    ಲತಾ ಜಿಪಂ ಅಧ್ಯಕ್ಷೆ

    157 ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್, ಸಿಸಿ ಕ್ಯಾಮರಾ ಕಳಪೆಯದ್ದಾಗಿದೆ. ಮಾರುಕಟ್ಟೆಗಿಂತ ಜಾಸ್ತಿ ಬೆಲೆಗೆ ಒಪ್ಪಿಗೆ ನೀಡಿದವರು ಯಾರು? ಸಿಸಿ ಕ್ಯಾಮರಾ ಇಲ್ಲದೆಯೂ ಹಣ ನೀಡಲಾಗಿದೆ. ಈ ಬಗ್ಗೆ ತನಿಖೆಯಾಗಲೇಬೇಕು.
    ಡಾ.ನವ್ಯಾ
    ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts