ಬೆಳಗಾವಿ: ಕಳೆದ ಕೆಲ ವರ್ಷಗಳಿಂದ ಬೇಸಿಗೆ ಸಂದರ್ಭದಲ್ಲಿ ಬತ್ತಿ ಬರಿದಾಗುತ್ತಿದ್ದ ಘಟಪ್ರಭಾ ನದಿ, ಈ ವರ್ಷ ಮೇ ತಿಂಗಳು ಮುಗಿಯುತ್ತ ಬಂದರೂ ಮೈದುಂಬಿ ಹರಿಯುತ್ತಿದೆ.
ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಕೆಲ ಭಾಗಗಳಲ್ಲಿ ಜನರ ದಾಹ ನೀಗಿಸುವ ಘಟಪ್ರಭಾ ನದಿ ಈ ವರ್ಷ ಲಾಕ್‌ಡೌನ್‌ನಿಂದಾಗಿ ಪರಿಶುದ್ಧವಾಗಿ ಕಂಗೊಳಿಸುತ್ತಿದೆ.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಅವಧಿಗೆ ಮುನ್ನವೇ ಕಬ್ಬು ನುರಿಸುವುದನ್ನು ನಿಲ್ಲಿಸಿದ್ದರಿಂದ ನದಿಯಲ್ಲಿ ಕಾರ್ಖಾನೆಗಳ ರಾಸಾಯನಿಕ ತಾಜ್ಯವೂ ಗೋಚರಿಸುತ್ತಿಲ್ಲ. ಕೊಳಚೆ ನೀರು ನದಿಯ ಒಡಲು ಸೇರುವ ಪ್ರಮಾಣವೂ ತಗ್ಗಿದೆ. ಅಲ್ಲದೆ, ಲಾಕ್‌ಡೌನ್ ಪರಿಣಾಮದಿಂದಾಗಿ ಜನರ ದೈನಂದಿನ ಚಟುವಟಿಕೆಗಳೂ ಕಡಿಮೆಯಾಗಿದ್ದರಿಂದ ಘಟಪ್ರಭಾ ನದಿ ನೀರು ಸ್ವಚ್ಛವಾಗಿ ಹರಿಯುತ್ತಿದೆ. ಹುಕ್ಕೇರಿ ಬಳಿಯ ಹಿಡಕಲ್ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಕೆಲ ಭಾಗಗಳಿಗೆ ನಿರಂತರವಾಗಿ ಪೂರೈಕೆ ಮಾಡಲಾಗುತ್ತಿದೆ.
ನದಿಗಿಲ್ಲ ಭಕ್ತರ ಕಿರಿಕಿರಿ: ದಿನವೂ ಸಾವಿರಾರು ಭಕ್ತರು ಈ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಅಲ್ಲದೆ, ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರ ನೆರವೇರಿಸಿದ ಬಳಿಕ ನೈವೇದ್ಯ, ಹೂವು-ಕಾಯಿ, ಬಟ್ಟೆ ಹಾಗೂ ಕರ್ಪೂರವನ್ನೂ ನದಿಗೆ ಎಸೆಯುತ್ತಿದ್ದರು. ಆದರೆ, ಕರೊನಾ ವೈರಸ್ ನಿಯಂತ್ರಣಕ್ಕಾಗಿ ದೇವಸ್ಥಾನಗಳ ಬಾಗಿಲು ಮುಚ್ಚಿಸಿದ್ದರಿಂದ ನದಿಗೆ ಭಕ್ತರ ಕಿರಿಕಿರಿ ಇಲ್ಲವಾಗಿದ್ದು, ಘಟಪ್ರಭಾ ಪರಿಶುದ್ಧವಾಗಿ ಹರಿಯುತ್ತಿದ್ದಾಳೆ.
8 ಟಿಎಂಸಿ ನೀರು ಸಂಗ್ರಹ: 1977ರಲ್ಲಿ ರಾಜಾ ಲಖಮಗೌಡ (ಹಿಡಕಲ್ ಡ್ಯಾಂ) ಜಲಾಶಯ ನಿರ್ಮಿಸಲಾಗಿದ್ದು, 4 ದಶಕಗಳ ಇತಿಹಾಸ ಹೊಂದಿರುವ ಈ ಡ್ಯಾಂ ಈವರೆಗೆ ಕೇವಲ 2 ಬಾರಿ ಮಾತ್ರ (2001-02 ಹಾಗೂ 2019-20) ಭರ್ತಿಯಾಗಿದೆ. 51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಜಲಾಶಯ ಹಿಂದೊಮ್ಮೆ ನಿರಂತರ ಮಳೆ ಹಾಗೂ ಭೀಕರ ಪ್ರವಾಹದಿಂದ ಅವಧಿಗೆ ಮುನ್ನವೇ ಭರ್ತಿಯಾಗಿತ್ತು. ಆದರೆ, ಆಗ ಏಪ್ರಿಲ್ ಅಂತ್ಯಕ್ಕೆ ಜಲಾಶಯ ಖಾಲಿಯಾಗಿತ್ತು.
ಈ ವರ್ಷ ಬೇಸಿಗೆ ಮುಗಿದು ಮಳೆಗಾಲ ಸಮೀಪಿಸುತ್ತಿದ್ದರೂ ಡ್ಯಾಂನಲ್ಲಿ ಇನ್ನೂ ಸುಮಾರು 8 ಟಿಎಂಸಿ ನೀರು ಸಂಗ್ರಹವಿದೆ. ಇನ್ನೂ ನಾಲ್ಕೈದು ತಿಂಗಳು ಮಳೆಯಾಗದಿದ್ದರೂ ಜನರ ನೀರಿನ ದಾಹವನ್ನು ಘಟಪ್ರಭಾ ನೀಗಿಸಲಿದ್ದಾಳೆ ಎನ್ನುತ್ತಾರೆ ನೀರಾವರಿ ಇಲಾಖೆ ಅಧಿಕಾರಿಗಳು.
ಹೊಲಗಳಿಗೂ ಹರಿಯುತ್ತಿದೆ ನದಿ ನೀರು: ಕಳೆದ 3-4 ವರ್ಷಗಳಿಂದ ಘಟಪ್ರಭಾ ನದಿ ಬೇಸಿಗೆ ಮುನ್ನವೇ ಬತ್ತಿ ಹೋಗುತ್ತಿತ್ತು. ಹೀಗಾಗಿ ಡ್ಯಾಂನಲ್ಲಿದ್ದ ಅಲ್ಪಸ್ವಲ್ಪ ಪ್ರಮಾಣದ ನೀರನ್ನೇ ಸದ್ಬಳಕೆ ಮಾಡಿಕೊಳ್ಳಲು ಜಿಲ್ಲೆಯ ವ್ಯಾಪ್ತಿಯಲ್ಲಿ ನದಿಗೆ ಅಳವಡಿಸಿದ್ದ ರೈತರ ಸಾವಿರಾರು ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಸರ್ಕಾರ ಕಡಿತಗೊಳಿಸಿ ದೂರದ ಊರುಗಳಿಗೆ ಕುಡಿಯುವ ನೀರು ಹರಿಸುತ್ತಿತ್ತು. ಆದರೆ, ಈ ವರ್ಷ ಜಲಾಶಯದಲ್ಲಿ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಬಿರುಬೇಸಿಗೆಯಲ್ಲೂ ಹೊಲಗಳಿಗೆ ನೀರು ಹರಿಯುತ್ತಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಒಣಗುತ್ತಿದ್ದ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆಗಳು ಈ ಬಾರಿ ಸಮೃದ್ಧವಾಗಿದ್ದು, ರೈತರೂ ಸಂತಸಗೊಂಡಿದ್ದಾರೆ.
ಘಟಪ್ರಭಾ ಕಾಲುವೆ ನೀರನ್ನೇ ನಂಬಿ ಪ್ರತಿವರ್ಷವೂ 50 ಎಕರೆಯಲ್ಲಿ ಕಬ್ಬು ಬೆಳೆಯುತ್ತಿದ್ದೆ. ಆದರೆ, ಮೂರ‌್ನಾಲ್ಕು ವರ್ಷದಿಂದ ಬೇಸಿಗೆಯಲ್ಲಿ ನದಿಯೇ ಬತ್ತಿ ಹೋಗುತ್ತಿರುವುದರಿಂದ 10-12 ಎಕರೆ ಕಬ್ಬು ಒಣಗಿ ಹೋಗುತ್ತಿತ್ತು. ಈ ವರ್ಷ ಕಾಲುವೆಗಳು ತುಂಬಿ ಹರಿಯುತ್ತಿದ್ದು, ಎಲ್ಲ ಬೆಳೆಗಳೂ ಸಮೃದ್ಧವಾಗಿವೆ.
|ಸುಭಾಷ ಹುಕ್ಕೇರಿ ಪ್ರಗತಿಪರ ರೈತರು, ಘಟಪ್ರಭಾ
ಕಳೆದ ಮೂರ್ನಾಲ್ಕು ವರ್ಷದಿಂದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 10 ದಿನಗಳ ವರಗೆ ಒಟ್ಟು 1.50 ಟಿಎಂಸಿ ನೀರು ಹರಿಸಲಾಗಿತ್ತು. ಆದರೆ, ಈ ವರ್ಷ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದು, 20 ದಿನಗಳ ವರೆಗೆ ಸುಮಾರು 3 ಟಿಎಂಸಿ ನೀರು ಬಿಡಲಾಗಿದೆ. ಬೇಸಿಗೆ ಮುಗಿಯುತ್ತ ಬಂದರೂ ಜಲಾಶಯದಲ್ಲಿ 8 ಟಿಎಂಸಿ ನೀರು ಇದೆ.
|ಎಂ.ಎಸ್. ಒಡೆಯರ ಕಾರ್ಯನಿರ್ವಾಹಕ ಅಭಿಯಂತ, ನೀರಾವರಿ ನಿಗಮ, ಬೆಳಗಾವಿ
|ಅಕ್ಕಪ್ಪ ಮಗದುಮ್ಮ