More

    ಅಧಿವೇಶನದಲ್ಲಿ ತುಳು ಬಳಕೆಗೆ ಕೋರಿಕೆ ಸಲ್ಲಿಕೆ: ಮಂದಾರ ಫಾಂಟ್ ಬಿಡುಗಡೆಗೊಳಿಸಿ ಶಾಸಕ ರಘುಪತಿ ಭಟ್ ಹೇಳಿಕೆ

    ಉಡುಪಿ: ರಾಜ್ಯದಲ್ಲಿ ತುಳುವಿಗೆ ಅಧಿಕೃತ ಮಾನ್ಯತೆ ಸಿಗಬೇಕು. ಈ ನಿಟ್ಟಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರಿಗೆ ತುಳುವಿನಲ್ಲೇ ಮಾತನಾಡಲು ಅವಕಾಶ ಕಲ್ಪಿಸಲು ಸ್ಪೀಕರ್ ಅವರಿಗೆ ಮನವಿ ಮಾಡಲಾಗಿದೆ. ಆದರೆ ಸದನದಲ್ಲಿ ಮಾಹಿತಿಗಳನ್ನು ದಾಖಲು ಮಾಡುವ ತುಳು ಭಾಷಿಕ ಶೀಘ್ರ ಲಿಪಿಕಾರರ ಅಲಭ್ಯತೆಯಿಂದ ನಿಧಾನವಾಗಿದೆ. ವಿಧಾನಸಭಾಧ್ಯಕ್ಷರು ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

    ಸೋಮವಾರ ಪ್ರೆಸ್‌ಕ್ಲಬ್ನಲ್ಲಿ ಜೈ ತುಳುನಾಡು ಹಾಗೂ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳು ಲಿಪಿ ಮಂದಾರ (ತುಳು ಫಾಂಟ್) ಬಿಡುಗಡೆಗೊಳಿಸಿ ಮಾತನಾಡಿದರು.

    ತಾಳೆಗರಿ ಉಪಯೋಗಿಸುತ್ತಿದ್ದ ಕಾಲಘಟ್ಟದಲ್ಲಿ ತುಳು ಲಿಪಿ ಬಳಕೆಯಾಗುತ್ತಿತ್ತು. ಐತಿಹಾಸಿಕ ಹಿನ್ನೆಲೆ ತುಳು ಭಾಷೆಗಿದೆ. ತುಳು ಲಿಪಿ ಮಧ್ವಾಚಾರ್ಯರ ಕಾಲಘಟ್ಟದಲ್ಲಿಯೂ ಹೆಚ್ಚಾಗಿ ಬಳಕೆಯಾಗುತ್ತಿತ್ತು ಎಂಬುದಕ್ಕೆ ಅಷ್ಟ ಮಠದ ಯತಿಗಳು ತುಳು ಲಿಪಿಯಲ್ಲೇ ಸಹಿ ಮಾಡುವುದು ಪುರಾವೆಯಾಗಿದೆ. ಪ್ರಾಂತ್ಯಗಳು ಬದಲಾದಂತೆ ಆಡಳಿತ ವ್ಯವಸ್ಥೆಗಳಿಂದಾಗಿ ತುಳು ಲಿಪಿ ಜನಮಾನಸದಿಂದ ದೂರವಾಗಿದೆ. ಪ್ರಸಕ್ತ ದಿನಗಳಲ್ಲಿ ತುಳು ಭಾಷೆ, ಲಿಪಿಯ ಬಗ್ಗೆ ಯುವ ಸಮುದಾಯ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು.
    ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಆಚಾರ್ಯ, ಜೈ ತುಳುನಾಡು ಸಂಘಟನೆ ಅಧ್ಯಕ್ಷ ಸುದರ್ಶನ್ ಸುರತ್ಕಲ್, ತುಳು ಫಾಂಟ್ ವಿನ್ಯಾಸಕ ಪ್ರಹ್ಲಾದ್ ಪಿ. ತಂತ್ರಿ ಉಪಸ್ಥಿತರಿದ್ದರು.

    ಯುನಿಕೋಡ್ ಜತೆ ಒಪ್ಪಂದ
    ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಆಕಾಶ್‌ರಾಜ್ ಜೈನ್ ಮಾತನಾಡಿ, ತುಳು ಲಿಪಿ ಮೊಬೈಲ್ ಹಾಗೂ ಕಂಪ್ಯೂಟರ್‌ನಲ್ಲಿ ಬಳಕೆಗೆ ಲಭ್ಯವಾದರೆ ಹೆಚ್ಚು ಜನರಿಗೆ ತಲುಪಲಿದೆ. ಈ ನಿಟ್ಟಿನಲ್ಲಿ ಕ್ಯಾಲಿಫೋರ್ನಿಯಾದ ಯುನಿಕೋಡ್ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts