More

    ಟಗ್ ನೌಕೆ ನೀರುಪಾಲು ; ಐವರು ನಾಪತ್ತೆ

    ಮಂಗಳೂರು: ಚಂಡಮಾರುತ ಅಟ್ಟಹಾಸ ಮೆರೆದಿದ್ದು ಎಂಆರ್‌ಪಿಎಲ್‌ಗೆ ಸಂಬಂಧಿಸಿದ ತೇಲು ಜೆಟ್ಟಿ(ಸಿಂಗಲ್ ಪಾಯಿಂಟ್ ಮೂರಿಂಗ್-ಎಸ್‌ಪಿಎಂ) ನಿರ್ವಹಣೆ ಮಾಡುವವರ ಟಗ್ ನೌಕೆ ನೀರುಪಾಲಾಗಿದೆ. ಇದರಲ್ಲಿದ್ದ 8 ಮಂದಿಯ ಪೈಕಿ ಐವರು ನಾಪತ್ತೆಯಾಗಿದ್ದು ಇಬ್ಬರು ಸುರಕ್ಷಿತವಾಗಿ ದಡಸೇರಿದ್ದಾರೆ. ಒಬ್ಬರ ಮೃತದೇಹ ಪತ್ತೆಯಾಗಿದೆ.

    ಹೇಮಕಾಂತ್ ಝಾ ಮೃತಪಟ್ಟವರು. ಕರೀಬುಲ್ ಸೀಜುಲ್, ಮೋನಿರುಲ್ ಮೊಲ್ಲಾ ಸುರಕ್ಷಿತವಾಗಿ ದಡ ಸೇರಿದ್ದಾರೆ. ಜೈಬಾನುಲ್ ಹಕ್ ಮೋಂಡಲ್, ಮೈನುದ್ದೀನ್ ಹಕ್, ಪವನ್ ಚಾಂದ್ ಕಟೋಚ್, ನಜೀಂ ಅಹ್ಮದ್, ಅಶ್ಫಾಕ್ ಅಲಿ ಖಲ್ಪೆ ನಾಪತ್ತೆಯಾಗಿದ್ದಾರೆ. ಇವರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು.

    ಮಂಗಳೂರಿನ ನವಮಂಗಳೂರು ಬಂದರಿನಿಂದ ಸುಮಾರು 17 ಕಿ.ಮೀ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿರುವ ಎಸ್‌ಪಿಎಂ ಮೂಲಕ ದೊಡ್ಡ ದೊಡ್ಡ ಹಡಗುಗಳಿಂದ ತೈಲವನ್ನು ಸ್ವೀಕರಿಸಲಾಗುತ್ತದೆ. ಇದಕ್ಕೆ ಬೇಕಾದ ನಿರ್ವಹಣಾ ಕೆಲಸಗಳಿಗೆ ಟಗ್ ಮೂಲಕ ಹೊರಗುತ್ತಿಗೆಯ ತಾಂತ್ರಿಕ ಸಿಬ್ಬಂದಿ ತೆರಳುತ್ತಾರೆ.

    ಈ ಕೆಲಸ ನಿರ್ವಹಿಸುತ್ತಿದ್ದ 8 ಮಂದಿಯ ತಂಡ ಟಗ್ ಅಲಯನ್ಸ್ ಎಂಬ ದೋಣಿಯಲ್ಲಿ ಶುಕ್ರವಾರ ಎಸ್‌ಪಿಎಂಗೆ ತೆರಳಿತ್ತು. ಹೊರದೇಶದಿಂದ ಬಂದ ತೈಲ ಟ್ಯಾಂಕರ್‌ನಿಂದ ಶುಕ್ರವಾರ ರಾತ್ರಿ 7ರ ಹೊತ್ತಿಗೆ ಅನ್‌ಲೋಡಿಂಗ್ ಕೆಲಸ ಮುಗಿದಿದ್ದು ರಾತ್ರಿಯೇ ಮರಳಬೇಕಿತ್ತು. ಆದರೆ ತಂಡ ಶನಿವಾರ ಬೆಳಗ್ಗೆ ಎಸ್‌ಪಿಎಂನಿಂದ ಹೊರಟಿದೆ. ಬೆಳಗ್ಗೆ 9.45ರವರೆಗೂ ಬಂದರಿನೊಂದಿಗೆ ಸಂಪರ್ಕದಲ್ಲಿದ್ದ ಟಗ್ ಆ ಬಳಿಕ ಸಂಪರ್ಕ ಕಡಿದುಕೊಂಡಿದೆ. ಸಂಜೆ ವೇಳೆಗೆ ಟಗ್‌ನ ಅವಶೇಷಗಳು ಪಡುಬಿದ್ರಿ ಬಳಿ ಪತ್ತೆಯಾಗಿವೆ. ಅದರ ಸಮೀಪ ಒಂದು ಮೃತದೇಹವೂ ಪತ್ತೆಯಾಗಿದೆ.
    ಆ ಬಳಿಕ ಉಡುಪಿಯ ಮಲ್ಪೆ ಪಡುಕೆರೆಯಲ್ಲಿ ಕಡಲ ತೀರಕ್ಕೆ ಸಮುದ್ರ ಇಬ್ಬರು ಜೀವಂತ ಸಿಬ್ಬಂದಿಯನ್ನು ತಂದೆಸೆದಿದೆ. ಇಬ್ಬರೂ ಲೈಫ್ ಜಾಕೆಟ್ ಧರಿಸಿದ್ದರಿಂದ ಪವಾಡಸದೃಶರಾಗಿ ಪಾರಾಗಿದ್ದಾರೆ. ಇವರೆಲ್ಲರೂ ಅಂಡರ್ ವಾಟರ್ ಸರ್ವೀಸಸ್ ಸಂಸ್ಥೆಗೆ ಸೇರಿದವರು.

    ಎಂಆರ್‌ಪಿಎಲ್‌ನ ತೇಲುಜೆಟ್ಟಿ: ಭಾರಿ ಗಾತ್ರದ ಹಡಗುಗಳಲ್ಲಿ ಸಾಮಾನ್ಯವಾಗಿ ಕಚ್ಚಾ ಪೆಟ್ರೋಲಿಯಂ ಸಾಗಿಸಲಾಗುತ್ತದೆ. ಆ ಹಡಗು ಬರುವಷ್ಟು ಆಳ ಮಂಗಳೂರು ಬಂದರಿನಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಮಂಗಳೂರಿನ ಸಮುದ್ರದಲ್ಲಿ ತೇಲುಜೆಟ್ಟಿ ನಿರ್ಮಿಸಲಾಗಿದೆ. ಅಲ್ಲಿ ತೈಲ ಇಳಿಸಿ ಹಡಗುಗಳು ತೆರಳುತ್ತವೆ. ಬಳಿಕ ಎಸ್‌ಪಿಎಂನಿಂದ ಬಂದರಿಗೆ ಪೈಪ್‌ಲೈನ್ ಮೂಲಕ ತೈಲವನ್ನು ಪಂಪ್ ಮಾಡಲಾಗುತ್ತದೆ. ಈ ತೈಲ ನಿರ್ವಹಣೆಗೆ ಐದು ವರ್ಷಗಳಿಗೊಮ್ಮೆ ಖಾಸಗಿಯವರಿಗೆ ಹೊರಗುತ್ತಿಗೆ ನೀಡಲಾಗುತ್ತಿದ್ದು ಸದ್ಯ ಕಾಕಿನಾಡ ಮೂಲದ ಕೆಇಆರ್‌ಎಸ್‌ಒಎಸ್ ಎನ್ನುವ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.

    ಮತ್ತೊಂದು ಟಗ್ ಅಪಾಯದಲ್ಲಿ: ನವಮಂಗಳೂರು ಬಂದರಿಗೆ ಹಡಗುಗಳ ಆಗಮನ, ನಿರ್ಗಮನಕ್ಕೆ ಸಹಕರಿಸುವ ‘ಕೋರಮಂಡಲ್’ ಎನ್ನುವ ಟಗ್ ಅರಬ್ಬಿ ಸಮುದ್ರದಲ್ಲಿ ಬಂದರಿನ ಆ್ಯಂಕರೇಜ್‌ನಲ್ಲಿ ಅಪಾಯಕ್ಕೆ ಸಿಲುಕಿ ಹಾಕಿಕೊಂಡಿದೆ. ಕಡಲಿನಲ್ಲಿ ಚಂಡಮಾರುತದ ಪ್ರಭಾವದಿಂದ ಅಲೆಗಳ ಅಬ್ಬರದೊಂದಿಗೆ ಟಗ್‌ನ ಆ್ಯಂಕರ್ ಕೂಡ ತುಂಡಾಗಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ನಿಯಂತ್ರಣ ಕಳೆದುಕೊಂಡು ತೂಗುಯ್ಯಲೆಯಂತಾಗಿದೆ. ಇದರಲ್ಲಿ 12 ಮಂದಿ ಸಿಬ್ಬಂದಿಯಿದ್ದು ಅವರ ರಕ್ಷಣಾ ಕಾರ್ಯಕ್ಕೆ ಕೋಸ್ಟ್‌ಗಾರ್ಡ್ ಕಾರ್ಯಾಚರಣೆ ನಡೆಸುತ್ತಿದೆ.

    ಕಂಟೈನರ್ ಹಡಗಿನಲ್ಲಿ ಅವಘಡ: ಮಂಗಳೂರು ಬಂದರಿನಿಂದ ಹೊರಟಿದ್ದ ಕಂಟೈನರ್ ಹಡಗು ‘ಎಸ್‌ಎಸ್‌ಎಲ್ ಗಂಗಾ’ದ ಡೆಕ್‌ಗೆ ಭಾರಿ ಅಲೆಗಳು ಅಪ್ಪಳಿಸಿದ ಪರಿಣಾಮ ಡೆಕ್ ಮೇಲಿದ್ದ ಸಿಬ್ಬಂದಿ ಸಮುದ್ರ ಪಾಲಾಗಿದ್ದಾರೆ. ಅಲೆಗಳ ಹೊಡೆತಕ್ಕೆ ಸಿಬ್ಬಂದಿ ಗಂಭೀರ ಸ್ವರೂಪದ ಗಾಯಗೊಂಡಿದ್ದು ಹಡಗನ್ನು ಹಿಂದಕ್ಕೆ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಂಗಳೂರಿನಿಂದ ಸುಮಾರು 28 ನಾಟಿಕಲ್ ಮೈಲಿ ದೂರದಲ್ಲಿ ಈ ಅವಘಡ ಸಂಭವಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts