More

    ಸಾಲ ಮಾಡಿಯಾದರೂ ನೀರಾವರಿ ಯೋಜನೆ ಪೂರ್ಣಗೊಳಿಸಿ: ಸಣ್ಣ ನೀರಾವರಿ, ಪರಿಸರ ಇಲಾಖೆಯ ಮಾಜಿ ಕಾರ್ಯದರ್ಶಿ ರಾಜಾರಾವ್ ಹೇಳಿಕೆ

    ತುಮಕೂರು: ವಿಶ್ವಬ್ಯಾಂಕಿನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ತಂದಾದರೂ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಅನಿವಾರ್ಯ. ಇದು ಆಡಳಿತಶಾಹಿಯ ಆದ್ಯಕರ್ತ್ಯವ್ಯವಾಗಬೇಕು ಎಂದು ಸಣ್ಣ ನೀರಾವರಿ ಮತ್ತು ಪರಿಸರ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾಪ್ಟನ್ ಎಸ್.ರಾಜಾರಾವ್ ಹೇಳಿದರು.

    ವಿಶ್ವವಿದ್ಯಾನಿಲಯದ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಗುರುವಾರ ಆಯೋಜಿಸಿದ್ದ ಬಜೆಟ್ 2021-22: ನೀರಾವರಿ ಯೋಜನೆಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳನ್ನು ಯಶಸ್ಸುಗೊಳಿಸುವಲ್ಲಿ ಸರ್ಕಾರಗಳು ಹೆಚ್ಚಿನ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಹೆಚ್ಚುವರಿ ತೆರಿಗೆ ವಿಧಿಸುವ ಬಗ್ಗೆ ಸರ್ಕಾರ ಚಿಂತಿಸಬಹುದು. ತಮ್ಮ ಒಳಿತಿಗಾಗಿ ಜನರು ಸರ್ಕಾರದೊಂದಿಗೆ ಸಹಕರಿಸಬೇಕು. ನಮ್ಮ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.

    ರಾಜ್ಯಕ್ಕೆ ಅಗತ್ಯವಿರುವ ನೀರಾವರಿ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಹಣದ ಅಗತ್ಯವಿದೆ. ಅನುದಾನ ಒದಗಿಸುವ ನಿಟ್ಟಿನಲ್ಲಿ ಉದಾಸೀನ ತಾಳಿದರೆ ಭವಿಷ್ಯದಲ್ಲಿ ದೊಡ್ಡ ಸಂಕಷ್ಟಕ್ಕೆ ಈಡಾಗಬೇಕಾಗುತ್ತದೆ. ಆದರೆ, ಬಜೆಟ್‌ನಲ್ಲಿ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ನೀಡುವ ಹಣ ಏನೇನೂ ಸಾಲದು. ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಹೇಳಿದರು.

    ಹೆಚ್ಚುವರಿ ತೆರಿಗೆ ಚಿಂತಿಸಲಿ: 2016-17ರಲ್ಲಿ ಜಲಸಂಪನ್ಮೂಲಕ್ಕಾಗಿ 14,339.64 ಕೋಟಿ ರೂ., ಅನುದಾನ ಮೀಸಲಿಡಲಾಗಿತ್ತು. 2021-22ರಲ್ಲಿ 21,181 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೂ ನಮ್ಮ ಅಗತ್ಯಗಳಿಗೆ ಹೋಲಿಸಿದರೆ ಇದು ಏನೇನೂ ಸಾಲದು. ಅನಗತ್ಯ ಯೋಜನೆಗಳಿಗೆ ಹಣ ಪೋಲು ಮಾಡುವುದನ್ನು ನಿಲ್ಲಿಸಬೇಕು. ಯಾವುದು ಅಗತ್ಯ ಎಂಬುದನ್ನು ಮನಗಂಡು ಹಣದ ಸದುಪಯೋಗ ಮಾಡಬೇಕು. ನೀರಾವರಿ ಯೋಜನೆಗಳೆಂದರೆ ಪರೋಕ್ಷವಾಗಿ ರೈತರಿಗೆ ನೀಡುವ ಸಬ್ಸಿಡಿ ಎಂದು ಎಸ್.ರಾಜಾರಾವ್ ಹೇಳಿದರು.

    ನಾಡಿನ ಜನತೆಯ ಭವಿಷ್ಯ ನೀರಾವರಿ ಯೋಜನೆಗಳ ಮೇಲೆ ನಿಂತಿವೆ. ವಿವಿಗಳು ಸರ್ಕಾರಕ್ಕೆ ಸಲಹೆಗಳನ್ನು ನೀಡುವಂತಹ ಕೆಲಸ ಮಾಡಬೇಕು. ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದಿಂದ ನೀರಾವರಿ ಯೋಜನೆ ಹಾಗೂ ನಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಿಂಡಿಕೇಟ್ ಸದಸ್ಯಟಿ.ಎಸ್.ಸುನೀಲ್ ಪ್ರಸಾದ್ ತಿಳಿಸಿದರು.

    ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಬಿ.ರವೀಂದ್ರ ಕುಮಾರ್ ಸ್ವಾಗತಿಸಿ, ಡಾ.ಎಂ.ಮುನಿರಾಜು ವಂದಿಸಿದರು. ಡಾ.ಕೆ.ಸಿ.ಸುರೇಶ ನಿರೂಪಿಸಿದರು.

    ಪ್ರಜ್ಞಾವಂತ ಸಮಾಜದಲ್ಲಿ ನಮ್ಮ ಜವಾಬ್ದಾರಿಗಳನ್ನು ಜಾಗೃತೆಯಿಂದ ನಿರ್ವಹಿಸಬೇಕು. ವಿವಿಗಳು ಶಿಖರದ ಮೇಲೆ ಕುಳಿತುಕೊಳ್ಳದೆ ಸಮಾಜದ ಜೊತೆ ಸೇರಿ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು.
    ಪ್ರೊ. ವೈ.ಎಸ್.ಸಿದ್ದೇಗೌಡ ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts