More

    ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಉರುಳಿಸುವ ಯತ್ನ, ಸರ್ಕಾರ ಕೆಡವಿದರೆ ನಾಶವಾಗಿ ಹೋಗುತ್ತೀರಿ…ಎಂದ ಸಚಿವ ಎಚ್.ಕೆ. ಪಾಟೀಲ

    ವಿಜಯಪುರ: ಮಹಾರಾಷ್ಟ್ರ ಮಾದರಿಯಲ್ಲಿಯೇ ಕರ್ನಾಟಕದಲ್ಲೂ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿದೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ತೀವ್ರ ಅಸಮಾಧಾನ ಹೊರಹಾಕಿರುವ ಸಚಿವ ಎಚ್.ಕೆ. ಪಾಟೀಲ, ಈ ಹಿಂದೆ 17 ಶಾಸಕರನ್ನು ಖರೀದಿ ಮಾಡಿದಾಗಲೇ ಇಡೀ ದೇಶದಲ್ಲಿ ಬಿಜೆಪಿ ಪ್ರಭಾವ ಹೋಯಿತು. ಮತ್ತೆ ಅದೇ ರೀತಿ ಮಾಡಿದರೆ ನೀವು ನಾಶವಾಗಿ ಹೋಗುತ್ತೀರಿ ಎಂದು ಬಿಜೆಪಿ ವಿರುದ್ದ ಕಿಡಿ ಕಾರಿದರು.

    ರಾಜಕಾರಣ ಎಂದರೆ ಸರ್ಕಾರ ಕೆಡುವುದು, ಮತ್ತೆ ಕಟ್ಟುವುದು, ಸುಭದ್ರ ಸರ್ಕಾರ ಬೀಳಿಸುವುದೇ ಅಂದುಕೊಂಡಿದ್ದೀರಾ? ಇದು ಜನತೆಗೆ ಮಾಡುವ ಅವಮಾನ. ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ. ಈ ರೀತಿ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

    ಈ ಮಧ್ಯೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ರಮೇಶ ಜಾರಕಿಹೊಳಿ ಅವರನ್ನೇ ಮಹಾರಾಷ್ಟ್ರಕ್ಕೆ ಕಳುಹಿಸಿಬಿಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

    ಇನ್ನು ಬರದ ವಿಚಾರವಾಗಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲರು, ಸಿಎಂ ಸಿದ್ದರಾಮಯ್ಯ ಅವರು ಬರದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು. ನೀರಾವರಿ ಸಚಿವರೂ ಪ್ರಯತ್ನಿಸಿದ್ದಾರೆ. ಆಗಿಲ್ಲ. ಆದರೆ, ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ನಾವು ವಿಫಲರಾಗಿದ್ದೇವೆ ಸರಿ. ನೀವಾದರೂ ಭೇಟಿ ಮಾಡಿಬಹುದಿತ್ತಲ್ಲ? ಜನರಿಗೆ ಏನು ಹೇಳುತ್ತೀರಿ ನೀವು ? ಎಂದು ಬಿಜೆಪಿಗರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.

    ಅಲ್ಲದೇ, ಮಹಾದಾಯಿ ವಿಚಾರದಲ್ಲಿ ದಾಖಲಾತಿ ನೀಡಿಲ್ಲವೆಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ, ಹಾಗೆಂದರೆ ಏನು? ದಾಖಲಾತಿ ನೀಡಿಲ್ಲವೆಂದು ಕೇಂದ್ರ ಬರೆದಿದೆಯಾ? ಎಂದರು.

    ಕರ್ನಾಟಕ-ಮಹರಾಷ್ಟ್ರ ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನವರಿಯಲ್ಲಿ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ಹೇಳಲಾಗಿದೆ. ಶಿವರಾಜ ಪಾಟೀಲರ ಜೊತೆಗೂ ಚರ್ಚೆ ಮಾಡುತ್ತೇವೆ. ಕನ್ನಡಪರ ಸಂಘಟನೆಗಳ ಸಲಹೆ-ಸೂಚನೆ ಪಡೆದು, ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿ ಮುಂದಿನ ಹೆಜ್ಜೆ ಇಡುವುದಾಗಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts