More

    ಭೂ ಒಡೆತನಕ್ಕೆ ಹೊಸ ರೂಪ ನೀಡಲು ಯತ್ನ: ಪರಿಶಿಷ್ಟರಿಗೆ ಭೂಮಿ ಹಂಚಿಕೆ ನಿಯಮ ಸರಳೀಕರಣ; ಅಭಿವೃದ್ಧಿ ನಿಗಮಗಳ ಮೂಲಕ ಖರೀದಿ

    ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ಇತರೆ ಕೆಲವು ಅಭಿವೃದ್ಧಿ ನಿಗಮಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಭೂ ರಹಿತರಿಗೆ ಭೂಮಿ ಖರೀದಿ ಮಾಡಿಕೊಟ್ಟು ಭೂ ಮಾಲಿಕರನ್ನಾಗಿಸುವ ‘ಭೂ ಒಡೆತನ’ ಯೋಜನೆಗೆ ಸರ್ಕಾರ ಹೊಸ ರೂಪ ಕೊಡುವ ಪ್ರಯತ್ನ ನಡೆದಿದೆ.

    ಸ್ಪರ್ಧಾತ್ಮಕ ಯುಗದಲ್ಲಿ ಭೂಮಿಗಳ ಬೆಲೆ ಹೆಚ್ಚಾಗುತ್ತಿದ್ದು ಸರ್ಕಾರವು ನಿಗದಿ ಮಾಡಿರುವ ಬೆಲೆಗಳು ಕಡಿಮೆಯಾಗಿದೆ. ಭೂ ಮಾಲಿಕರು ಸರ್ಕಾರ ನಿಗದಿ ಮಾಡಿರುವ ಬೆಲೆಗೆ ಭೂಮಿಯನ್ನು ಮಾರಾಟ ಮಾಡಲು ಒಪು್ಪತ್ತಿಲ್ಲ. ಆದ್ದರಿಂದ ಸರ್ಕಾರವು ಮಾರ್ಗದರ್ಶಿ ದರವನ್ನು ಪರಿಷ್ಕರಣೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ಸ್ವರೂಪ ಮಾರ್ಪಡಿಸಲು ಬಯಸಿದೆ.

    ಭೂ ಒಡೆತನ ಯೋಜನೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಘಟಕ ವೆಚ್ಚವು 20 ಲಕ್ಷ ರೂ.ಗಳಿಗೆ ನಿಗದಿಪಡಿಸಿದ್ದು, ಉಳಿದ 26 ಜಿಲ್ಲೆಗಳಲ್ಲಿ ಘಟಕ ವೆಚ್ಚವು 15 ಲಕ್ಷಗಳಾಗಿರುತ್ತದೆ. ಇದರಲ್ಲಿ ಶೇ.50 ಸಹಾಯಧನ ಮತ್ತು ಶೇ. 50 ಅವಧಿ ಸಾಲವಾಗಿರುತ್ತದೆ.

    ಭೂ ಮಾಲಿಕರು ನಿಗಮಕ್ಕೆ ಮಾರಾಟ ಮಾಡಲು ಇಚ್ಛಿಸುವ ಜಮೀನಿನ ದರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಆಯ್ಕೆ ಸಮಿತಿಯಲ್ಲಿ ಆ ಭಾಗದ ನೋಂದಣಿ ಇಲಾಖೆಯಲ್ಲಿ ನಿಗದಿಪಡಿಸಿದ ಮಾರ್ಗಸೂಚಿ ಬೆಲೆಗಿಂತ ಮೂರು ಪಟ್ಟಿನವರೆಗೆ ದರ ನಿಗದಿಗೆ ಅವಕಾಶ ಇರುತ್ತದೆ. ಜಿಲ್ಲಾಧಿಕಾರಿಯವರು ಮೂರು ಪಟ್ಟಿಗಿಂತ ಹೆಚ್ಚಿನ ದರ ನಿಗದಿಪಡಿಸಿದ್ದಲ್ಲಿ ಸಕಾರಣಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದರೆ ಮಂಜರಾತಿಗೆ ಅವಕಾಶ ಇರುತ್ತದೆ. ಷರತ್ತುಗಳ ಪ್ರಕಾರ ಫಲಾನುಭವಿಗಳು ವಾಸಿಸುತ್ತಿರುವ ಪ್ರದೇಶದ ಸುತ್ತ 5 ಕಿಮೀ ವ್ಯಾಪ್ತಿಯಲ್ಲಿರಬೇಕೆಂಬ ಷರತ್ತು ಸಡಿಲಗೊಳಿಸಿ, ಫಲಾಪೇಕ್ಷಿಯು ವಾಸಿಸುವ 10 ಕಿಮೀ ವ್ಯಾಪ್ತಿಯಲ್ಲಿ ಲಭ್ಯ ಇರುವ ಕೃಷಿ ಜಮೀನನ್ನು ಖರೀದಿಸಿಕೊಡಲು ಅನುಮತಿ ನೀಡಿ ಆದೇಶ ಹೊರಡಿಸಲಾಗಿತ್ತು, ಈಗ ಇದನ್ನು ಇನ್ನಷ್ಟು ವಿಸ್ತರಿಸಲು ಇರುವ ಅವಕಾಶದ ಬಗ್ಗೆ ಇಲಾಖೆ ಹಂತದಲ್ಲಿ ವಿಚಾರ ವಿನಿಮಯ ನಡೆದಿದೆ. 25 ಕಿಲೋ ಮೀಟರ್ ವರೆಗೂ ವಿಸ್ತರಿಸಿ ಎಂಬ ಒತ್ತಾಯ ಹಲವು ಶಾಸಕರ ಕಡೆಯಿಂದಲೂ ಇದೆ. ಇನ್ನು ಸರ್ಕಾರದ 2017ರಲ್ಲಿ ಹೊರಡಿಸಿದ ಆದೇಶದಂತೆ ಘಟಕ ವೆಚ್ಚ ಗರಿಷ್ಟ 15 ಲಕ್ಷ ರೂ. ಇದ್ದು ಇದರಲ್ಲಿ ಶೇ.50 ಭಾಗ ಸಹಾಯಧನ, ಹಾಗೂ ಶೇ.50 ಭಾಗ ಸಾಲದ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುವುದು. 15 ಲಕ್ಷ ರೂ.ಘಟಕ ವೆಚ್ಚದ ಮಿತಿಯಲ್ಲಿ ಕನಿಷ್ಠ 2 ಎಕರೆ ಖುಷ್ಕಿ ಅಥವಾ ಕನಿಷ್ಠ 1 ಎಕರೆ ತರಿ ಭಾಗಾಯ್ತು ಜಮೀನುಗಳನ್ನು ಅಥವಾ ಭಾಗಾಯ್ತು ಅರ್ಧ ಎಕರೆ(20 ಗುಂಟೆ) ಕಡಿಮೆ ಇಲ್ಲದಂತೆ ಒದಗಿಸಲಾಗುವುದು. ಫಲಾನುಭವಿಯು ಸಾಲದ ಹಣವನ್ನು 10 ವಾರ್ಷಿಕ ಕಂತುಗಳಲ್ಲಿ ಮರು ಪಾವತಿ ಮಾಡಬೇಕು. ಇದಕ್ಕೆ ಶೇ.6 ಬಡ್ಡಿ ವಿಧಿಸಲಾಗುತ್ತದೆ. ಮಾರ್ಗಸೂಚಿ ಬೆಲೆ ಮೂರು ಪಟ್ಟಿನಿಂದ ಐದು ಪಟ್ಟಿನವರೆಗೆ ಹಾಗೂ 15 ಲಕ್ಷದಿಂದ 20 ಲಕ್ಷ ಹಾಗೂ 20 ರಿಂದ 25 ಲಕ್ಷ ರೂ. ಹೆಚ್ಚಿಸುವ ಬಗ್ಗೆ ಇಲಾಖೆಯ ಪರಿಶೀಲನೆ ಹಂತದಲ್ಲಿದೆ. ಇದನ್ನು ಹೆಚ್ಚಿಸ ಬೇಕೆಂಬ ಒತ್ತಡವಿದೆ ಎಂದು ಇಲಾಖೆ ಸಚಿವರು ಹೇಳಿಕೊಂಡಿದ್ದಾರೆ.

    ನಿವೇಶನ ಹಂಚಿಕೆ ಪ್ರಕ್ರಿಯೆಗೂ ವೇಗ: ರಾಜ್ಯದಲ್ಲಿ ಅಂದಾಜು 1.27 ಕೋಟಿ ಪರಿಶಿಷ್ಟರು ಇದ್ದಾರೆ, 28 ಲಕ್ಷ ಕುಟುಂಬಗಳಿವೆ. 5 ಲಕ್ಷಕ್ಕೂ ಮಿಕ್ಕಿ ಕುಟುಂಬಗಳಿಗೆ ಸ್ವಂತ ನೆಲೆ ಇಲ್ಲದ ಅಂಕಿಅಂಶಗಳು ಇವೆ. ಈ ಹಿನ್ನೆಲೆಯಲ್ಲಿ ಪ್ರತಿ ಕುಟುಂಬ ಸ್ವಂತ ನಿವೇಶನ ಹೊಂದಬೇಕು, ಈ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಸಮಗ್ರ ಯೋಜನೆ ಕಣ್ಣು ಮುಂದೆ ಇಟ್ಟುಕೊಂಡು 4 ಜಿಲ್ಲೆಗಳನ್ನು ಮಾದರಿಯಾಗಿಸಲು ಸ್ವಂತ ನಿವೇಶನ ವಿತರಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಲಬುರಗಿ, ಚಿತ್ರದುರ್ಗ, ಹಾವೇರಿ, ಚಾಮರಾಜನಗರ ಜಿಲ್ಲೆಗಳಲ್ಲಿ ಆದ್ಯತೆ ಮೇಲೆ ಈ ಕಾರ್ಯಕ್ರಮ ಅನುಷ್ಠಾಗೊಳಿಸಲು ನಮ್ಮ ಇಲಾಖೆ ಶ್ರಮಪಟ್ಟಿದೆ. ನಿವೇಶನ ಹಂಚಿಕೆ ಮಾಡಲು ಜಾಗದ ಲಭ್ಯತೆ ಇಲ್ಲದಿದ್ದರೂ ಖರೀದಿ ಮಾಡಿಯಾದರೂ ವಿತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಜಯವಾಣಿಗೆ ತಿಳಿಸಿದರು.

    ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts