More

    ಸ್ಥಳದಲ್ಲೇ ಸಮಸ್ಯೆ ಪರಿಹರಿಸಲು ಯತ್ನ

    ಚಿಕ್ಕಮಗಳೂರು: ಜನರ ಸಮಸ್ಯೆಗಳನ್ನು ಗ್ರಾಮದಲ್ಲಿಯೇ ಆಲಿಸಿ, ಸ್ಥಳದಲ್ಲಿಯೇ ಅವುಗಳನ್ನು ಪರಿಹರಿಸುವ ಸಲುವಾಗಿ ಗ್ರಾಮ ಮಟ್ಟದಲ್ಲಿಯೂ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

    ನಗರದ ರಾಮನಹಳ್ಳಿಯಲ್ಲಿ ಗುರುವಾರ ಸರ್ಕಾರದ ಆದೇಶದಂತೆ ನಗರಸಭೆಯಿಂದ ಏರ್ಪಡಿಸಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರು ನೀಡಿದ ಅರ್ಜಿಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಮುಂದಿನ ಸಭೆಯಲ್ಲೂ ಹಳೆಯ ಸಮಸ್ಯೆ ಕುರಿತು ದೂರು ಅಥವಾ ಮನವಿ ಸಲ್ಲಿಸುವ ಅಗತ್ಯವಿಲ್ಲದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಕೂಡಲೇ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.
    ನಗರದಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರು ವಾಸಿಸುವ ವಾರ್ಡ್‌ಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರಾಮನಹಳ್ಳಿ ವಾರ್ಡ್‌ನ ಅಭಿವೃದ್ಧಿಗೆ ನಗರಸಭೆ ಸದಸ್ಯ ಲಕ್ಷ್ಮಣ್ ಕೋರಿರುವಂತೆ 70 ಲಕ್ಷ ರೂ. ಅನುದಾನ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
    ಕೆಂಪನಹಳ್ಳಿ ಚಂದ್ರಕಟ್ಟೆ ರುದ್ರಭೂಮಿ ಅಭಿವೃದ್ಧಿಗೆ 30 ಲಕ್ಷ ರೂ. ಹಾಗೂ 40 ಲಕ್ಷ ರೂ. ವೆಚ್ಚದಲ್ಲಿ ರಾಮನಹಳ್ಳಿಯ ರುದ್ರಭೂಮಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ನಗರೋತ್ಥಾನದಡಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 18 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
    ವಕೀಲ ನಟರಾಜ್ ಮಾತನಾಡಿ, ರಾಮೇಶ್ವರ ರಸ್ತೆ ಭಾಗದಲ್ಲಿ ಯುಜಿಡಿ ಸಂಪರ್ಕ ಕಲ್ಪಿಸಬೇಕು. ವಾರ್ಡ್‌ನ ಕೆಲವೆಡೆ ರಸ್ತೆ ಒತ್ತುವರಿಯಾಗಿದ್ದು ತೆರವುಗೊಳಿಸಬೇಕು. ರಾಮನಹಳ್ಳಿಯಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣವಾಗಿದ್ದರೂ ಈವರೆಗೆ ಸಂಚಾರ ನಿಯಮದಂತೆ ಪಟ್ಟಿಗಳನ್ನು ಹಾಕಿಲ್ಲ. ರಸ್ತೆ ಮಧ್ಯೆಭಾಗ ಡಿವೈಡಿಂಗ್ ಲೈಟ್‌ಗಳನ್ನು ಅಳವಡಿಸಿಲ್ಲ. ಹಂಪ್‌ಗಳನ್ನು ನಿರ್ಮಿಸಬೇಕು. ಗಾಂಧಿ ಪಾರ್ಕ್ ವೃತ್ತದ ಬಳಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
    ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಲಕ್ಷ್ಮಣ, ಮಂಜುಳಾ, ಗುರುಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಾಗರತ್ನ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts