More

    ಸತ್ಯ ಮಾರ್ಗದಲ್ಲಿ ನಡೆಯೋಣ

    ಬೆಳಗಾವಿ: ಜಗತ್ತಿಗೆ ಸತ್ಯ, ಶಾಂತಿ ಮತ್ತು ಅಹಿಂಸೆ ಬೋಧಿಸಿದ ಮಹಾತ್ಮ ಗಾಂಧೀಜಿ ಅವರ ಮಾರ್ಗವೇ ಸರಿಯಾದ ಮಾರ್ಗ. ಭಾರತೀಯರಾದ ನಾವು ಪರಸ್ಪರ ಗೌರವಿಸುವ ಮೂಲಕ ಸದಾ ಭಾರತೀಯರಾಗಿರುವುದರ ಜತೆಗೆ ಗಾಂಧೀಜಿ ದಾರಿಯಲ್ಲಿ ನಡೆಯಬೇಕಿದೆ ಎಂದು ಶಾಸಕ ಅಸೀಫ್ ಸೇಠ್ ಕರೆ ನೀಡಿದರು.

    ಟಿಳಕವಾಡಿಯ ವೀರಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದೂರ್ ಶಾಸ್ತ್ರೀಜಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಇಂದಿನ ಯುವ ಪೀಳಿಗೆ ಗಾಂಧಿ ತತ್ವಗಳನ್ನು ಸ್ವೀಕರಿಸಬೇಕು. ಅವರ ಪುಸ್ತಕಗಳನ್ನು ಓದಿ ಅವರ ವಿಚಾರ, ಚಿಂತನೆಗಳನ್ನು ತಿಳಿದುಕೊಳ್ಳಬೇಕು. ಭವಿಷ್ಯದಲ್ಲಿ ಮಾದರಿ ವ್ಯಕ್ತಿಗಳಾಗಲು ಕಠಿಣ ಶ್ರಮವಹಿಸಿ, ನಿರಂತರ ಅಭ್ಯಾಸ ನಡೆಸಿದರೆ ಮಾತ್ರ ಪ್ರಯತ್ನದ ಪ್ರತಿಫಲ ಸಿಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಮಾತನಾಡಿ, ಮನುಷ್ಯ ಕುಲಕ್ಕೆ ಶಾಂತಿ, ಸಹಬಾಳ್ವೆ ತೋರಿಸಿಕೊಟ್ಟಿದ್ದು ಮಹಾತ್ಮ ಗಾಂಧೀಜಿ. ಅವರ ಅಹಿಂಸಾ ತತ್ವ, ವಿಚಾರ, ಸರಳತೆ ನಡೆ, ಇಡೀ ಪ್ರಪಂಚ ಮೆಚ್ಚುವಂಥದ್ದು. ಗಾಂಧೀಜಿ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಗಾಂಧಿ ತತ್ವ ಅಳವಡಿಸಿಕೊಳ್ಳುವುದರ ಮೂಲಕ ಅವರ ಆಶಯದಂತೆ ರಾಮರಾಜ್ಯ ಕಟ್ಟಲು ಸಾಧ್ಯ ಎಂದರು.

    ಜಿಪಂ ಸಿಇಒ ಹರ್ಷಲ್ ಭೂಯರ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ಮಾತ್ರ ತಂದುಕೊಟ್ಟಿಲ್ಲ. ಮನಸಿದ್ದರೆ ಮಾರ್ಗ ಎಂಬ ಮಾತಿನಂತೆ ಅವರ ಚಿಂತನೆ, ವಿಚಾರ ಅಹಿಂಸಾ ತತ್ವ, ಮಾರ್ಗಗಳ ಮೂಲಕ ಏನು ಬೇಕಾದರೂ ಸಾಧಿಸಬಹುದು ಎಂಬ ಪಾಠ ಹೇಳಿಕೊಟ್ಟಿದ್ದಾರೆ ಎಂದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

    ವಿನಾಯಕ ಮೋರೆ ಹಾಗೂ ತಂಡದವರು ಮತ್ತು ಭಾರತೀಯ ಸೇವಾ ದಳ, ಶಾಲಾ ಮಕ್ಕಳು ಗಾಂಧಿಪ್ರಿಯ ಭಜನೆ ಪ್ರಸ್ತುತಪಡಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಮತ್ತಿತರರನ್ನು ಗಣ್ಯರು ಗೌರವಿಸಲಾಯಿತು. ಎಸ್‌ಪಿ ಡಾ.ಭೀಮಾಶಂಕರ ಗುಳೇದ, ಉಪ ಮೇಯರ್ ರೇಷ್ಮಾ ಪಾಟೀಲ, ಡಿಸಿಪಿ ರೋಹನ ಜಗದೀಶ, ಪಾಲಿಕೆ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಅಧೀಕ್ಷಕ ಇಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ, ಆಹಾರ ಇಲಾಖೆ ಜಂಟಿ ನಿರ್ದೇಶಕರ ಶ್ರೀಶೈಲ ಕಂಕಣವಾಡಿ ಇತರರು ವೇದಿಕೆಯಲ್ಲಿದ್ದರು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸ್ವಾಗತಿಸಿದರು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts