More

    ಪಂಜಾಬ್​ನಲ್ಲೂ ಕಾಂಗ್ರೆಸ್​ಗೆ ಆರಂಭವಾಗಿದೆ ತಳಮಳ, ಸಿಎಂ, ರಾಜ್ಯಸಭೆ ಸದಸ್ಯರ ನಡುವೆ ಜಟಾಪಟಿ

    ನವದೆಹಲಿ: ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಆಡಳಿತವನ್ನು ಕಳೆದುಕೊಂಡಿರುವ ಕಾಂಗ್ರೆಸ್​ ತನ್ನ ಇಬ್ಬರು ನಾಯಕರ ನಡುವಿನ ಜಗಳದಿಂದಾಗಿ ರಾಜಸ್ಥಾನದಲ್ಲಿ ಭಾರಿ ರಾಜಕೀಯ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿರುವಂತೆ ಪಂಜಾಬ್​ನಲ್ಲಿ ಸಿಎಂ ಅಮರಿಂದ್​ ಸಿಂಗ್​ ಮತ್ತು ರಾಜ್ಯಸಭೆ ಸದಸ್ಯ ಪ್ರತಾಪ್​ ಸಿಂಗ್​ ಬಜ್ವಾ ನಡುವೆ ಆರಂಭವಾಗಿರುವ ಘರ್ಷಣೆ ಭಾರಿ ಸ್ವರೂಪ ಪಡೆದುಕೊಳ್ಳುವ ಸೂಚನೆ ನೀಡುತ್ತಿದೆ.

    ಕಳೆದ ವಾರ ಪಂಜಾಬ್​ನಲ್ಲಿ ನಡೆದ ಕಳಭಟ್ಟಿ ದುರಂತ ಉಭಯ ನಾಯಕರ ನಡುವಿನ ಘರ್ಷಣೆಗೆ ಕಾರಣವಾಗಿದೆ. ಕಳೆದ ವಾರ ಸಿಎಂ ಅಮರಿಂದರ್​ ಸಿಂಗ್​ ಅವರಿಗೆ ಈ ಕುರಿತು ಪತ್ರ ಬರೆದಿದ್ದ ಬಜ್ವಾ ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಆದರೆ ಬಜ್ವಾ ಅವರ ಈ ಪತ್ರಕ್ಕೆ ಒಂದಷ್ಟೂ ಬೆಲೆ ಕೊಡದೆ ಸಿಎಂ ಅಮರಿಂದರ್​ ಸಿಂಗ್​ ಅದನ್ನು ಕಸದಬುಟ್ಟಿಗೆ ಸೇರಿಸಿದ್ದರು.

    ಇದನ್ನೂ ಓದಿ: ಸತ್ತಿದ್ದಾಳೆ ಎಂದುಕೊಂಡಾಕೆ ಬದುಕಿದ್ದಳು; ಮಾಡದ ಹತ್ಯೆಗಾಗಿ 8 ತಿಂಗಳಿಂದ ಜೈಲಿನಲ್ಲಿದ್ದಾರೆ ಮೂವರು

    ಸಿಎಂ ಅಮರಿಂದರ್ ಸಿಂಗ್​ ಮತ್ತು ಬಜ್ವಾ ನಡುವಿನ ಜಟಾಪಟಿ ಇಂದುನಿನ್ನೆಯದ್ದಲ್ಲ. ತುಂಬಾ ಹಿಂದಿನಿಂದಲೂ ಇಬ್ಬರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಬಜ್ವಾ ಪಂಜಾಬ್​ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಅವರನ್ನು ಆ ಸ್ಥಾನದಿಂದ ಕಿತ್ತೊಗೆಯುವಂತೆ ಪಕ್ಷದ ಹೈಕಮಾಂಡ್​ ಮೇಲೆ ಅಮರಿಂದರ್​ ಸಿಂಗ್​ ಒತ್ತಡ ಹೇರಿದ್ದರು. ಅಷ್ಟೇ ಅಲ್ಲ, 2016ರಲ್ಲಿ ಅವರನ್ನು ಕಿತ್ತೊಗೆದು, ಅವರ ಸ್ಥಾನದಲ್ಲಿ ತಮ್ಮ ಆಪ್ತರನ್ನು ಕೂರಿಸುವಲ್ಲಿ ಅಮರಿಂದರ್​ ಯಶಸ್ವಿಯಾಗಿದ್ದರು. ಬಜ್ವಾ ಅವರ ಈ ತ್ಯಾಗಕ್ಕೆ ರಾಜ್ಯಸಭೆ ಸದಸ್ಯತ್ವ ರೂಪದಲ್ಲಿ ಉಡುಗೊರೆ ಸಿಕ್ಕಿತ್ತು. ಪಂಜಾಬ್​ನಲ್ಲಿ ಕಾಂಗ್ರೆಸ್​ ಆಡಳಿತಕ್ಕೆ ಮರಳಿದ ನಂತರದಿಂದಲೂ ಇಬ್ಬರು ಮುಖಂಡರ ನಡುವಿನ ಕಿತ್ತಾಟ ಜೋರಾಗುತ್ತಲೇ ಸಾಗುತ್ತಿದೆ. ಆದರೆ, ಇಬ್ಬರನ್ನೂ ಕರೆದು ಕಿತ್ತಾಡದಂತೆ ಮಾಡಲು ಕಾಂಗ್ರೆಸ್​ ಹೈಕಮಾಂಡ್​ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಇದು ಯಾವುದೇ ಕ್ಷಣದಲ್ಲಿ ವಿಪರೀತಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಪಂಜಾಬ್​ ಸರ್ಕಾರ ಬಜ್ವಾ ಅವರಿಗೆ ಒದಗಿಸಿದ್ದ ಭದ್ರತೆಯನ್ನು ಶನಿವಾರ ಹಿಂಪಡೆದುಕೊಂಡಿದೆ. ಇದು ಉಭಯ ಮುಖಂಡರ ನಡುವೆ ಹೊಸ ಸುತ್ತಿನ ಜಟಾಪಟಿಗೆ ನಾಂದಿ ಹಾಡಿದೆ. ಬಜ್ವಾ ಅವರಿಗೆ ಯಾವುದೇ ಜೀವ ಬೆದರಿಕೆ ಇಲ್ಲ. ಅಲ್ಲದೆ, ಈಗ ಅವರು ರಾಜ್ಯಸಭೆ ಸದಸ್ಯರಾಗಿರುವುದರಿಂದ, ಕೇಂದ್ರ ಸರ್ಕಾರದಿಂದ ಅವರಿಗೆ ಭದ್ರತೆ ಲಭಿಸುತ್ತಿದೆ ಎಂದು ಹೇಳಿ ಪಂಜಾಬ್​ ಸರ್ಕಾರ ಅವರಿಗೆ ಒದಗಿಸಿದ್ದ ಭದ್ರತೆಯನ್ನು ಹಿಂಪಡೆದುಕೊಂಡಿದೆ. ರಾಜ್ಯದಲ್ಲಿ 1980ರ ದಶಕದಲ್ಲಿ ಭಯೋತ್ಪಾದಕರ ಹಾವಳಿ ತೀವ್ರವಾಗಿದ್ದಾಗಿನಿಂದಲೂ ಬಜ್ವಾ ಅವರಿಗೆ ಸರ್ಕಾರ ಭದ್ರತಾ ವ್ಯವಸ್ಥೆ ಕಲ್ಪಿಸಿತ್ತು.

    ಇಂಥ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಚಿವುಟಿ ಹಾಕುವ ನಿಟ್ಟಿನಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಮತ್ತೊಮ್ಮೆ ಜಾಣಕರುಡು ಪ್ರದರ್ಶಿಸಿದೆ. ಇದರಿಂದಾಗಿ ಪಕ್ಷದ ಸಾಮರ್ಥ್ಯ ಕುಸಿಯುವ ಜತೆಗೆ ಗಾಂಧಿ ಕುಟುಂಬ ಹಿಡಿತವನ್ನು ಮತ್ತಷ್ಟು ಸಡಿಲಗೊಳಿಸುತ್ತದೆ. ಈಗಾಗಲೆ ಜ್ಯೋತಿರಾದಿತ್ಯ ಸಿಂಧ್ಯಾ, ಪ್ರದ್ಯೂತ್​ ದೇಬ್​ ವರ್ಮನ್​ರಂಥ ನಾಯಕರನ್ನು ಕಳೆದುಕೊಂಡಿರುವ ಕಾಂಗ್ರೆಸ್​ ಸಚಿನ್​ ಪೈಲಟ್​ ಅಂಥವರನ್ನು ಕಳೆದುಕೊಳ್ಳುವ ಹಂತದಲ್ಲಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ರಾಜಸ್ಥಾನದ ಬಳಿಕ ಪಂಜಾಬ್​ನಲ್ಲೂ ಕಾಂಗ್ರೆಸ್​ ಆಡಳಿತನಷ್ಟ ಅನುಭವಿಸಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಮಕ್ಕಳೆದುರು ಬೆತ್ತಲಾಗಿದ್ದ ರೆಹನಾ ಪೊಲೀಸರೆದುರು ಶರಣು: ಕೊನೆಗೂ ಅಂದ್ಕೊಂಡಿದ್ದು ಆಗಲೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts