More

    ಫಲಾನುಭವಿಗಳ ನಿತ್ಯ ಅಲೆದಾಟ

    ಮಂಜುನಾಥ ಅಂಗಡಿ ಧಾರವಾಡ
    ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿದ್ದ ಮನೆಗಳ ಪರಿಹಾರ ಜಮಾವಣೆ ಸ್ಥಗಿತಗೊಂಡಿದೆ. ತಹಸೀಲ್ದಾರ್ ಬದಲಾವಣೆಯಾಗಿರುವುದರಿಂದ ಅವರ ಲಾಗಿನ್ ಕ್ರಿಯೇಟ್ ಆಗಬೇಕಾಗಿರುವುದು ಒಂದು ಕಾರಣವಾದರೆ, ಮತ್ತೊಂದೆಡೆ ಸಿಬ್ಬಂದಿ ಆಡಿಟ್ ಓಕೆ ಮಾಡದಿರುವುದರಿಂದ ಸಂತ್ರಸ್ತ ಫಲಾನುಭವಿಗಳು ನಿತ್ಯ ತಹಸೀಲ್ದಾರ್ ಕಚೇರಿಗೆ ಅಲೆದಾಡಬೇಕಾಗಿದೆ.
    ಧಾರವಾಡ ತಹಸೀಲ್ದಾರರಾಗಿದ್ದ ಸಂತೋಷ ಹಿರೇಮಠ ವರ್ಗಾವಣೆ ನಂತರ ಅವರ ಸ್ಥಾನಕ್ಕೆ ಡಾ. ಮೋಹನ ಭಸ್ಮೆ ಆಗಮಿಸಿ 20 ದಿನಗಳಾಯಿತು. ಮನೆ-ಬೆಳೆ ಹಾನಿ ಸೇರಿ ವಿವಿಧ ಪರಿಹಾರ ಧನವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲು ತಹಸೀಲ್ದಾರರ ಲಾಗಿನ್ ಡಿಜಿಟಲ್ ಸಿಗ್ನೇಚರ್ ಕಾರ್ಡ್ (ಪೆನ್ ಡ್ರೖೆವ್ ಮಾದರಿಯ ಡಿಎಸ್​ಸಿ ಕಾರ್ಡ್) ಬಳಸಲಾಗುತ್ತದೆ. ತಹಸೀಲ್ದಾರರು ಬದಲಾವಣೆಯಾಗಿ ಹೊಸಬರು ಬಂದಾಗ ಅವರ ಹೆಸರಿನಲ್ಲಿ ಡಿಎಸ್​ಸಿ ಕಾರ್ಡ್ ಸಿದ್ಧವಾಗಿ ಬರುವವರೆಗೆ ಪರಿಹಾರಧನ ವಿತರಣೆಯಲ್ಲಿ ಹಿನ್ನಡೆಯಾಗುವುದು ಸಹಜ. ಆದರೆ, ಈ ವಿಳಂಬ ನೀತಿ ಅತಿವೃಷ್ಟಿ ಸಂತಸ್ತರ ಮನೆಗಳ ನಿರ್ವಣಕ್ಕೆ ತಡೆಯೊಡ್ಡುತ್ತಿದೆ.
    ಫಲಾನುಭವಿಗಳ ಪರದಾಟ: ಕಳೆದ ವರ್ಷದ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಜಿಲ್ಲಾದ್ಯಂತ ಮನೆಗಳಿಗೆ ಹಾನಿಯಾಗಿದೆ. 2022- 23ನೇ ಸಾಲಿನ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ (ಆರ್​ಜಿಆರ್​ಎಚ್​ಸಿಎಲ್) ತಂತ್ರಾಂಶದಲ್ಲಿ ಸಂತ್ರಸ್ತರ ಹೆಸರುಗಳನ್ನು ನಮೂದಿಸಲಾಗಿದೆ. ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಮಾನದಂಡಗಳ ಅನ್ವಯ ಫಲಾನುಭವಿಗಳ ಖಾತೆಗಳಿಗೆ 95,100 ರೂ. ನೇರ ಜಮೆಯಾಗಿದೆ. ನಂತರ ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ಆರಂಭಿಸಿದ್ದಾರೆ. ತಳಪಾಯ, ಗೋಡೆ, ಛಾವಣಿಯ ಹಂತಗಳಿಗೆ ತಲಾ 1 ಲಕ್ಷ ರೂ. ಹಾಗೂ ಪೂರ್ಣ ಹಂತಕ್ಕೆ 1,04,900 ರೂ. ಸೇರಿ 5 ಲಕ್ಷ ರೂ. ಪರಿಹಾರ ಜಮೆಯಾಗಲಿದೆ. ಆದರೆ, ಹಂತವಾರು ಮನೆ ನಿರ್ವಣವಾದಾಗ ಆಯಾ ಗ್ರಾ.ಪಂ.ನಿಂದ ಫೋಟೋ ತೆಗೆದು ಆರ್​ಜಿಆರ್​ಎಚ್​ಸಿಎಲ್ ತಂತ್ರಾಂಶಕ್ಕೆ ಅಪ್​ಲೋಡ್ ಮಾಡಲಾಗುತ್ತದೆ. ಒಂದು ಹಂತ ಮುಗಿದಾಗ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಮನೆ ನಿರ್ವಣದ ಹಂತವನ್ನು ಪರಿಶೀಲಿಸಿ ಆಡಿಟ್ ಓಕೆ ಮಾಡಬೇಕು. ಆದರೆ, ಸಿಬ್ಬಂದಿ ಆಡಿಟ್ ಓಕೆ ಮಾಡಲು ಇಂದು-ನಾಳೆ ಎನ್ನುತ್ತ ಕಾಲಹರಣ ಮಾಡುತ್ತಿದ್ದಾರೆ. ಫಲಾನುಭವಿ ಕೋಡ್ ಬರೆದುಕೊಡಿ, ನಂತರ ಆಡಿಟ್ ಓಕೆ ಮಾಡಲಾಗುವುದು ಎಂಬ ಸಬೂಬು ಹೇಳಿ ಕಳಿಸುತ್ತಿದ್ದಾರೆ. ನಂತರ ಅದನ್ನು ಅಲ್ಲಿಯೇ ಮರೆಯುತ್ತಿದ್ದಾರೆ. ಇದರಿಂದ ಗ್ರಾಮಿಣ ಪ್ರದೇಶಗಳ ಜನರು ನಿತ್ಯ ತಹಸೀಲ್ದಾರ್ ಕಚೇರಿಗೆ ಅಲೆದಾಡಬೇಕಾದ ಅನಿವಾರ್ಯತೆ ಇದೆ.


    ಮನೆ ನಿರ್ವಣದ ಒಂದು ಹಂತ ಮುಗಿದಾಗ ಆಡಿಟ್ ಓಕೆ ಮಾಡಿದರೆ, ಮುಂದಿನ ಹಂತದವರೆಗೆ ಮನೆ ನಿರ್ವಿುಸಿಕೊಳ್ಳಲು ಅನುಕೂಲವಾಗುತ್ತದೆ. ಆದರೆ, ಕಚೇರಿಯ ಸಿಬ್ಬಂದಿ ತಹಸೀಲ್ದಾರರ ಡಿಐಸಿ ಕಾರ್ಡ್ ಹೊಸದಾಗಿ ಬರಬೇಕು ಎಂಬ ಕಾರಣ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಒಂದೆಡೆ ಆಡಿಟ್ ಓಕೆ ಆಗದೆ, ಮತ್ತೊಂದೆಡೆ ಹಂತವಾರು ಪರಿಹಾರವೂ ಬಿಡುಗಡೆಯಾಗದೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ.
    ನಾನು ಬಂದು 20 ದಿನಗಳಾಗಿವೆ. ಹೊಸದಾಗಿ ಡಿಐಸಿ ಕಾರ್ಡ್ ಬಂದ ನಂತರ ಪೇಮೆಂಟ್ ಸರ್ಟಿಫಿಕೇಶನ್ ಮಾಡಲು ಬರುತ್ತದೆ. ಮನೆಗಳ ಹಂತವಾರು ಆಡಿಟ್ ಓಕೆ ಮಾಡದಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
    | ಡಾ. ಮೋಹನ ಭಸ್ಮೆ
    ಧಾರವಾಡ ತಹಸೀಲ್ದಾರ್


    ತಹಸೀಲ್ದಾರರು ಬದಲಾಗಿರುವುದರಿಂದ ಮನೆ ಹಾನಿ ಪರಿಹಾರ ಜಮೆಯಾಗುವುದು ಸ್ಥಗಿತಗೊಂಡಿದೆ. ಮನೆ ನಿರ್ವಣದ ಒಂದು ಹಂತ ಮುಗಿದಾಗ ಆಡಿಟ್ ಓಕೆಯಾದರೂ ಮುಂದಿನ ಹಂತದ ಮನೆ ನಿರ್ವಿುಸಿಕೊಳ್ಳಲು ಅನುಕೂಲವಾಗುತ್ತದೆ.
    | ಸಲೀಂಸಯ್ಯದ್ ಮನೆ ಹಾನಿ ಸಂತ್ರಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts