More

    ಸರ್ಕಾರಿ ನೌಕರರನ್ನಾಗಿಸಲು ಸಾರಿಗೆ ಸಿಬ್ಬಂದಿ ಪಟ್ಟು: ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ, ಬೇಡಿಕೆ ಪರಿಗಣಿಸುವ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಭರವಸೆ

    ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಫ್ರೀಡಂಪಾರ್ಕ್​ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ರಜೆಯಲ್ಲಿ ಇದ್ದ ನೌಕರರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಬಸ್ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯವಾಗಲಿಲ್ಲ.

    ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆಯ ಸಾವಿರಾರು ಕಾರ್ಯಕರ್ತರು ಫ್ರೀಡಂಪಾರ್ಕ್​ನಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯಯಂಜಯ ಸ್ವಾಮೀಜಿ, ಶಾಸಕ ಎ.ಎಸ್. ನಡಹಳ್ಳಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ನೀಡಿದರು.

    ಶಾಸಕ ಎ.ಎಸ್. ನಡಹಳ್ಳಿ ಮಾತನಾಡಿ, ಪ್ರತಿನಿತ್ಯ ಸಾವಿರಾರು ಜನರನ್ನು ಸುರಕ್ಷಿತವಾಗಿ ಒಂದೂರಿನಿಂದ ಮತ್ತೊಂದು ಊರಿಗೆ ತಲುಪಿಸುವ ಸಾರಿಗೆ ನೌಕರರಿಗೆ ಉದ್ಯೋಗ ಭದ್ರತೆ ಇಲ್ಲವಾಗಿದೆ. ಸರ್ಕಾರ ಇವರೆಲ್ಲರ ಬೇಡಿಕೆಗಳನ್ನು ಈಡೇರಿಸಿ ನೆಮ್ಮದಿಯ ಬದುಕಿಗೆ ಅವಕಾಶ ಮಾಡಿಕೊಡಬೇಕು. ಬಡ ಕುಟುಂಬದಿಂದ ಬಂದಿದ್ದರೂ ಇವರಿಗೆ ಬಿಪಿಎಲ್ ಕಾರ್ಡ್, ಆರೋಗ್ಯಭಾಗ್ಯ ಯೋಜನೆಯ ಪ್ರಯೋಜನ ಲಭಿಸುತ್ತಿಲ್ಲ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

    ಸಾರಿಗೆ ನೌಕರರಿಗೆ ಸೂರು, ಅಪಘಾತದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಪರಿಹಾರ ಹಾಗೂ ಮಕ್ಕಳಿಗೆ ಉನ್ನತ ಶಿಕ್ಷಣ ಸೌಲಭ್ಯ ಕಲ್ಪಿಸುವ ಯೋಜನೆಗಳನ್ನು ರೂಪಿಸುವಂತೆ ಆಗ್ರಹಿಸಿದರು.

    ಸಂಘದ ಅಧ್ಯಕ್ಷ ಎಂ. ಶಿವರೆಡ್ಡಿ, ಉಪಾಧ್ಯಕ್ಷ ರಫೀಕ್ ಅಹಮದ್ ನಾಗನೂರು, ಖಜಾಂಚಿ ರಮೇಶ್ ಮೋರೆ, ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ ಮತ್ತಿತರರು ಉಪಸ್ಥಿತರಿದ್ದರು.

    ಮನವಿ ಸ್ವೀಕರಿಸಿದ ಸಾರಿಗೆ ಸಚಿವ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ನಾನು ಕೆಳಹಂತದಿಂದ ಬಂದವನು. ಸಾರಿಗೆ ನೌಕರರ ಕಷ್ಟಗಳು ಏನೆಂಬುದು ಗೊತ್ತಿದೆ. ನಿಮ್ಮ ಜೀವನ ಭದ್ರತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಮುಖ್ಯಮಂತ್ರಿ ಜತೆ ರ್ಚಚಿಸುತ್ತೇನೆ ಎಂದರು. ಬೇಡಿಕೆಗಳನ್ನು ಪರಿಶೀಲಿಸಲು ಈಗಾಗಲೇ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ನೆರೆ ರಾಜ್ಯಗಳಿಗೆ ತೆರಳಿ ಸಮಿತಿ ಅಧ್ಯಯನ ನಡೆಸಲಿದೆ. ಸಮಿತಿಯ ಸದಸ್ಯರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ವೋಟ್ ಬ್ಯಾಂಕ್ ರಾಜಕಾರಣ ಆರೋಪ: ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಬಿಎಂಟಿಸಿ ಪ್ರತಿನಿತ್ಯ 1.14 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸುತ್ತಿದೆ. ಡೀಸೆಲ್ ಬೆಲೆ ವಿಪರೀತ ಹೆಚ್ಚಳವಾಗಿದೆ. ಆದಾಗ್ಯೂ ಕಳೆದ 6 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಇದಕ್ಕೆ ವೋಟ್ ಬ್ಯಾಂಕ್ ರಾಜಕೀಯವೇ ಕಾರಣ.ಇದರಿಂದ 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂದು ಲಕ್ಷ್ಮಣ್ ಸವದಿ ಹೇಳಿದರು.

    ಸಮವಸ್ತ್ರ ಭತ್ಯೆ ನೇರ ವರ್ಗಾವಣೆ: ಸಾರಿಗೆ ನೌಕರರಿಗೆ ಮೂರು ವರ್ಷದಿಂದ ಸಮವಸ್ತ್ರ ವಿತರಿಸಿಲ್ಲ. 1 ವರ್ಷ ಸಮವಸ್ತ್ರ ವಿತರಿಸಿ, ಇನ್ನೆರಡು ವರ್ಷದ ಸಮವಸ್ತ್ರದ ಭತ್ಯೆಯನ್ನು ಸಿಬ್ಬಂದಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ವರ್ಷದಿಂದ ಸಮವಸ್ತ್ರ ವಿತರಿಸುವ ಬದಲು ಅಷ್ಟೂ ಮೊತ್ತದ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು. ಸಾರಿಗೆ ನೌಕರರ ಸಮಸ್ಯೆಗಳ ಅರಿವಿದ್ದು ಅವೆಲ್ಲವನ್ನೂ ಸರ್ಕಾರ ಹಂತಹಂತವಾಗಿ ಪರಿಹರಿಸಲಿದೆ ಎಂದು ಸವದಿ ಭರವಸೆ ನೀಡಿದರು.

    ಕನ್ನಡ ಸಂಘಟನೆಗಳ ಜತೆ ಚಕಮಕಿ: ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಾರಿಗೆ ನೌಕರರ ಪ್ರತಿಭಟನೆ ಬೆಂಬಲಿಸಿ ಫ್ರೀಡಂಪಾರ್ಕ್​ನಲ್ಲಿ ವೇದಿಕೆ ಹತ್ತಿದ್ದರು. ಈ ವೇಳೆ ಅವರನ್ನು ವೇದಿಕೆಯಿಂದ ಕೆಳಗೆ ಇಳಿಸಲಾಯಿತು. ಈ ವಿಚಾರಕ್ಕೆ ಕೆಲಕಾಲ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಸಾರಿಗೆ ನೌಕರರ ನಡುವೆ ಮಾತಿನ ಚಕಮಕಿ ನಡೆಯಿತು.

    ಎಂದಿನಂತೆ ಬಸ್ ಸಂಚಾರ: ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಕಂಡು ಬರಲಿಲ್ಲ. ಬೆಳಗ್ಗೆಯಿಂದಲೇ ಎಂದಿನಂತೆ ಬಸ್​ಗಳು ಸಂಚರಿಸಿದವು. ಬೆಂಗಳೂರು ಹೊರವಲಯ ಸೇರಿ ರಾಜ್ಯಾದ್ಯಂತ ಬಸ್ ಸಂಚಾರದ ಮೇಲೆ ಸಾರಿಗೆ ನೌಕರರ ಪ್ರತಿಭಟನೆ ಬಿಸಿ ತಟ್ಟಲಿಲ್ಲ. ಬಿಎಂಟಿಸಿ, ಕೆಎಸ್​ಆರ್​ಟಿಸಿ, ಈಶಾನ್ಯ ಹಾಗೂ ಆಗ್ನೇಯ ನಿಗಮಗಳ ರಜೆಯಲ್ಲಿದ್ದ ನೌಕರರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಾರಿಗೆ ನೌಕರರ ಜೀವನ ತೀರಾ ಅಭದ್ರತೆಯಿಂದ ಕೂಡಿದೆ. ಇವರೆಲ್ಲರೂ ಕಡು ಬಡತನದ ಹಿನ್ನೆಲೆಯಿಂದ ಬಂದವರು. ಹಾಗಾಗಿ ಇವರೆಲ್ಲರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು.

    | ಜಯಮೃತ್ಯುಂಜಯ ಸ್ವಾಮೀಜಿ

    ಕೂಡಲಸಂಗಮದ ಪಂಚಮಸಾಲಿ ಪೀಠ

    ಸರ್ಕಾರಿ ನೌಕರರನ್ನಾಗಿ ಮಾಡುವ ಕುರಿತು ಹಣಕಾಸು ಇಲಾಖೆ ಜತೆ ರ್ಚಚಿಸಲಾಗುವುದು. ನಿಗಮಗಳ ಆದಾಯ ಹಾಗೂ ಸಾಧಕ-ಭಾದಕಗಳನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

    | ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts