More

    ಸಾರಿಗೆ ಸಿಬ್ಬಂದಿ ದಿಢೀರ್ ಮುಷ್ಕರ, ಪ್ರಯಾಣಿಕರ ಪರದಾಟ

    ಹಾವೇರಿ: ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಆದೇಶಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಸಂಸ್ಥೆ ಸಿಬ್ಬಂದಿ ದಿಢೀರ್ ಮುಷ್ಕರ ಆರಂಭಿಸಿದ್ದರಿಂದ ಬಸ್ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡಿದರು.

    ಶುಕ್ರವಾರ ಬೆಳಗ್ಗೆಯಿಂದಲೇ ವಿವಿಧೆಡೆ ಸಂಚರಿಸಬೇಕಿದ್ದ ಎಲ್ಲ ಬಸ್​ಗಳು ಚಾಲಕ, ನಿರ್ವಾಹಕರಿಲ್ಲದೇ ಏಕಾಏಕಿ ರದ್ದಾಗಿದ್ದವು. ಇದರಿಂದ ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಗದಗ ಸೇರಿದಂತೆ ಅನ್ಯ ಜಿಲ್ಲೆ ಹಾಗೂ ಜಿಲ್ಲೆಯೊಳಗಿನ ವಿವಿಧ ಪ್ರದೇಶಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಬಸ್​ಗಳಿಲ್ಲದೇ ಖಾಸಗಿ ವಾಹನಗಳ ಮೊರೆ ಹೋದರು. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ವಾಹನಗಳ ಮಾಲೀಕರು ದುಪ್ಪಟ್ಟು ದರಕ್ಕೆ ಬೇಡಿಕೆಯಿಟ್ಟರು. ಹುಬ್ಬಳ್ಳಿಗೆ 89 ರೂ.ಗಳಿದ್ದ ದರಕ್ಕೆ 150ರಿಂದ 200ರೂ.ಗಳ ದರ ಪಡೆದರು. ಅನಿವಾರ್ಯವಿದ್ದವರು ದುಪ್ಪಟ್ಟು ದರ ಕೊಟ್ಟು ಪ್ರಯಾಣ ಬೆಳೆಸಿದರು. ಕೆಲವರು ಮರಳಿ ಮನೆಗೆ ಹೋದರು.

    ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ನೌಕರರು ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ ಸಾರಿಗೆ ಸಂಸ್ಥೆ ಸಿಬ್ಬಂದಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಬಸ್​ನಿಲ್ದಾಣದ ಆವರಣದಲ್ಲಿ ನೌಕರರೆಲ್ಲ ಸರ್ಕಾರದ ವಿರುದ್ಧ ಘೊಷಣೆ ಕೂಗಿ, ಪ್ರತಿಭಟನೆ ನಡೆಸಿದರು.

    ಕೂಡಲೇ ಬೇಡಿಕೆ ಈಡೇರಿಸಬೇಕು

    ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ಸರ್ಕಾರದ ಪರಿಸ್ಥಿತಿ ಸದ್ಯ ಸರಿಯಿಲ್ಲ ಎಂಬುದನ್ನು ನಾವು ಒಪ್ಪುವುದಿಲ್ಲ. ಈವರೆಗೆ ಸಾಮೋಪಾಯದಿಂದ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ನಿರ್ಲಕ್ಷ್ಯ ತೋರಿದ್ದರಿಂದ ಚಾಲಕ, ನಿರ್ವಾಹಕರು ಸೇರಿ ಅಧಿಕಾರಿ, ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರ ಕೂಡಲೆ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು ಎಂದು ಎಐಟಿಯುಸಿ ಹಾವೇರಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಟ್ಟಿ ರಾಜಶೇಖರ ವಿಜಯವಾಣಿಗೆ ತಿಳಿಸಿದರು.

    ಜಿಲ್ಲೆಯಲ್ಲಿ ಪ್ರತಿದಿನ 470 ಮಾರ್ಗಗಳಲ್ಲಿ ಬಸ್​ಗಳು ಸಂಚರಿಸುತ್ತಿದ್ದವು. ಇಂದು ಬೆಳಗ್ಗೆ ಮಾತ್ರ 10 ಬಸ್​ಗಳು ಹೋಗಿವೆ. ಉಳಿದಂತೆ ಯಾವುದೇ ಬಸ್ ಸಂಚರಿಸಿಲ್ಲ. ಮುಷ್ಕರದಿಂದ ಸಂಸ್ಥೆಗೆ ಅಂದಾಜು 49 ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಚಾಲಕ, ನಿರ್ವಾಹಕರ್ಯಾರೂ ಕರ್ತವ್ಯಕ್ಕೆ ಬಂದಿಲ್ಲ. ಮೆಕಾನಿಕ್​ಗಳಲ್ಲಿ ಸ್ವಲ್ಪ ಜನರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆಲಸಕ್ಕೆ ಹಾಜರಾಗುವಂತೆ ಎಲ್ಲರಿಗೂ ಮನವಿ ಮಾಡಿದ್ದೇನೆ. ಮುಂದೆ ಸರ್ಕಾರದಿಂದ ಬರುವ ನಿರ್ದೇಶನದ ಮೇಲೆ ಕ್ರಮ ಕೈಗೊಳ್ಳಲಾಗುವುದು.
    | ವಿ.ಎಸ್. ಜಗದೀಶ, ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾ ಸಂಸ್ಥೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts