More

    ಜನತೆಗೆ ಸಾರಿಗೆ ಸಂಕಷ್ಟ: ಸರ್ಕಾರಿ ಸಿಬ್ಬಂದಿಯಾಗಿ ಪರಿಗಣಿಸಲು ನೌಕರರ ಬಿಗಿಪಟ್ಟು, ರಾಜ್ಯಕ್ಕೆ ಮತ್ತೆ ಬಂದ್ ಬಿಸಿ

    ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ರಚನೆ, ಕೃಷಿ ಕಾಯ್ದೆ ವಿರೋಧಿಸಿ ಕರ್ನಾಟಕ ಹಾಗೂ ಭಾರತ್ ಬಂದ್ ನಡೆದ ಬೆನ್ನಲ್ಲೇ ರಾಜ್ಯದ ಜನತೆಗೆ ಸಾರಿಗೆ ಬಂದ್ ಬಿಸಿ ತಟ್ಟಿದೆ. ತಮ್ಮನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರದಿಂದಾಗಿ ಶುಕ್ರವಾರ ಸರ್ಕಾರಿ ಬಸ್​ಗಳಿಲ್ಲದೆ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಯಿತು. ಸರ್ಕಾರ ನಡೆಸಿದ ಸಂಧಾನ ಮಾತುಕತೆಯೂ ವಿಫಲವಾಗಿರುವುದರಿಂದ ಶನಿವಾರವೂ ಪ್ರತಿಭಟನೆ ಮುಂದುವರಿಯುವುದು ಖಚಿತವಾಗಿದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಸಂಬಂಧ ಸರ್ಕಾರ ಆದೇಶ ಹೊರಡಿಸುವವರೆಗೂ ಪ್ರತಿಭಟನೆ ಹಿಂಪಡೆದುಕೊಳ್ಳು ವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ.

    ತಟ್ಟಿದ ಬಿಸಿ: ದೂರದೂರುಗಳಿಗೆ ಹೊರಟಿದ್ದ ಲಕ್ಷಾಂತರ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಿತು. ಬಸ್​ಗಳಿಗಾಗಿ ಕಾದು ಸುಸ್ತಾಗಿ ಕೊನೆಗೆ ಅನಿವಾರ್ಯ ವಾಗಿ ಬಾಡಿಗೆ ವಾಹನಗಳ ಮೊರೆ ಹೋಗಬೇಕಾಯಿತು. ಕಚೇರಿ ಕೆಲಸಗಳಿಗೆ ಹೋಗಲು ಬಸ್ ನಿಲ್ದಾಣಗಳಿಗೆ ಬಂದ ಪ್ರಯಾಣಿಕರು ಸರ್ಕಾರಿ ಬಸ್​ಗಳಿಲ್ಲದೆ ಆಟೋ, ಕ್ಯಾಬ್, ಟ್ಯಾಕ್ಸಿಗಳಂತಹ ಬಾಡಿಗೆ ವಾಹನಗಳಲ್ಲಿ ತೆರಳಿದರು. ಕೆಲ ಆಟೋ, ಟ್ಯಾಕ್ಸಿ ಚಾಲಕರು ದುಪ್ಪಟ್ಟು ಬಾಡಿಗೆ ವಸೂಲು ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬೆಂಗಳೂರು ಸೇರಿ ರಾಜ್ಯಾದ್ಯಂತ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಈಶಾನ್ಯ, ವಾಯವ್ಯ ಸಾರಿಗೆ ನಿಗಮಗಳ ನೌಕರರು ಸೇವೆ ಸ್ಥಗಿತಗೊಳಿಸಿ ಏಕಾಏಕಿ ಪ್ರತಿಭಟನೆಗೆ ಇಳಿದಿದ್ದರು. ಬಸ್​ಗಳ ಓಡಾಟವಿಲ್ಲದೆ ರಸ್ತೆಗಳು, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಹೊರ ಜಿಲ್ಲೆಗಳಿಂದ ಬಂದ ಕೂಲಿ ಕಾರ್ವಿುಕರು ಕೈಯಲ್ಲಿ ಕಾಸಿಲ್ಲದೇ ಆಟೋಗಳಲ್ಲಿ ಓಡಾಡಲಾಗದೇ ಪರದಾಡಬೇಕಾಯಿತು.

    ಆಂಧ್ರ ಮಾದರಿ ಬೇಡಿಕೆ: ಆಂಧ್ರಪ್ರದೇಶದಲ್ಲಿ 2020ರ ಜ. 1ರಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಆದೇಶಿಸಲಾಗಿದೆ. ಇದರಿಂದಾಗಿ ಎಪಿಎಸ್​ಆರ್​ಟಿಸಿಯ ಎಲ್ಲ 51,488 ನೌಕರರು, ಅಧಿಕಾರಿಗಳು ಸರ್ಕಾರಿ ನೌಕರರಾಗಿ ಪರಿವರ್ತನೆಗೊಂಡಿದ್ದಾರೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕೆಂಬುದು ಪ್ರತಿಭಟನಾಕಾರರ ಆಗ್ರಹ.

    ಸರ್ಕಾರ ಹಿಂದೇಟೇಕೆ?

    ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಮತ್ತು ಭತ್ಯೆ ಹೆಚ್ಚಳ ಇನ್ನಿತರ ಕಾರಣಗಳಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳು ನಷ್ಟದಲ್ಲಿವೆ. 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ನಷ್ಟ ಅನುಭವಿಸುತ್ತಿವೆ. ನಾಲ್ಕು ನಿಗಮಗಳಲ್ಲಿ 10 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹೊಣೆಗಾರಿಕೆಯಿದೆ. ರಾಜ್ಯದಲ್ಲಿ 1.26 ಲಕ್ಷ ನೌಕರರು, 22 ಸಾವಿರಕ್ಕೂ ಹೆಚ್ಚಿನ ಬಸ್​ಗಳಿವೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿದರೆ ಸರ್ಕಾರಕ್ಕೆ 6,500 ಕೋಟಿ ರೂ.ಗೂ ಹೆಚ್ಚಿನ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ. ಈ ಕಾರಣಕ್ಕೆ ಸರ್ಕಾರ ನೌಕರರ ಬೇಡಿಕೆಗೆ ಮಣಿಯುತ್ತಿಲ್ಲ.

    ಒಡಕು ತರುವ ಯತ್ನ?

    ಸಾರಿಗೆ ನೌಕರರ ಸಂಘಟನೆಗಳು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಮುಷ್ಕರಕ್ಕೆ ಕರೆ ನೀಡಿವೆ. ಆದರೆ, ಶುಕ್ರವಾರ ಸಚಿವ ಲಕ್ಷ್ಮಣ ಸವದಿ ಕೆಲ ಸಂಘಟನೆಗಳ ಜತೆಗಷ್ಟೇ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಮುಷ್ಕರಕ್ಕೆ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ ನೀಡಿರುವುದು ಕೆಲ ಸಂಘಟನೆಗಳಿಗೆ ಅಪಥ್ಯವಾಗಿದೆ. ಅದನ್ನೇ ಮುಂದಿಟ್ಟುಕೊಂಡು, ಸಚಿವರು ಸಂಘಟನೆಗಳ ನಡುವೆ ಒಡಕು ತಂದು ಮುಷ್ಕರ ಅಂತ್ಯವಾಗಿಸಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

    ನೌಕರರ ಹಾದಿ?

    • ಸರ್ಕಾರದ ಮನವಿಗೆ ಸ್ಪಂದಿಸಿ, ಕರ್ತವ್ಯಕ್ಕೆ ಹಾಜರಾಗುವುದು
    • ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುತ್ತೇವೆಂಬ ಸರ್ಕಾರದ ಕ್ರಮವನ್ನು ಒಪ್ಪಿ ಮುಷ್ಕರ ಕೈಬಿಡುವುದು
    • ಬೇಡಿಕೆ ಈಡೇರುವರೆಗೆ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ಮುಂದುವರಿಸುವುದು
    • ಜನರಿಗಾಗುತ್ತಿರುವ ಸಮಸ್ಯೆ ಅರಿತು, ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಬರುವುದು

    ಬೇಡಿಕೆಗಳೇನು?

    • ಸರ್ಕಾರಿ ನೌಕರರನ್ನಾಗಿಸಬೇಕು
    • ವೇತನ ತಾರತಮ್ಯ ಸರಿಪಡಿಸಬೇಕು
    • ಕರೊನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು
    • ಅಧಿಕಾರಿಗಳಿಂದಾಗುತ್ತಿರುವ ಕಿರುಕುಳ ತಪ್ಪಿಸಬೇಕು
    • ಸುಖಾಸುಮ್ಮನೆ ನೋಟಿಸ್, ಅಮಾನತು ಕ್ರಮಗಳನ್ನು ನಿಲ್ಲಿಸಬೇಕು
    • ತಡೆಹಿಡಿಯಲಾಗಿರುವ ಭತ್ಯೆಗಳನ್ನು ನೀಡಬೇಕು

    ಜನತೆಗೆ ಸಾರಿಗೆ ಸಂಕಷ್ಟ: ಸರ್ಕಾರಿ ಸಿಬ್ಬಂದಿಯಾಗಿ ಪರಿಗಣಿಸಲು ನೌಕರರ ಬಿಗಿಪಟ್ಟು, ರಾಜ್ಯಕ್ಕೆ ಮತ್ತೆ ಬಂದ್ ಬಿಸಿಸಾರಿಗೆ ಸಿಬ್ಬಂದಿ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿಯಿದೆ, ಬೇಡಿಕೆ ಬಗ್ಗೆ ಚರ್ಚೆ ಮುಂದುವರಿ ಸಲು ಸಿದ್ಧ. ನೌಕರರು ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸವಿದ್ದು, ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸುವುದು ಸೇರಿದಂತೆ ಮತ್ತಿತರ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಿಲ್ಲ.

    | ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿ

    ಎಸ್ಮಾಸ್ತ್ರ ಪ್ರಯೋಗ?

    ಸಾರಿಗೆ ಸೇವೆ ಅಗತ್ಯ ಸೇವೆಗಳಲ್ಲಿ ಒಂದಾಗಿರುವ ಕಾರಣ ನೌಕರರು ಮುಷ್ಕರ ನಡೆಸಲು ಅವಕಾಶವಿಲ್ಲ. ಒಂದು ವೇಳೆ ಮುಷ್ಕರದಿಂದ ಹಿಂದೆ ಸರಿಯದಿದ್ದರೆ ಸರ್ಕಾರ ಎಸ್ಮಾ ಬಳಸಿ ನೌಕರರನ್ನು ಕೆಲಸಕ್ಕೆ ಹಾಜರಾಗುವಂತೆ ಮಾಡಬಹುದು. ಈ ಹಿಂದಿನ ಮುಷ್ಕರಗಳ ಸಂದರ್ಭದಲ್ಲಿ ಎಸ್ಮಾ ಬಳಕೆಯ ಬೆದರಿಕೆಯೊಡ್ಡಲಾಗಿತ್ತು. ನಂತರ ನೌಕರರ ಬೇಡಿಕೆಗೆ ಸರ್ಕಾರ ಮಣಿದು ಮುಷ್ಕರ ಅಂತ್ಯಗೊಳಿಸಿದ್ದರು.

    ಇಂದೂ ಸರ್ಕಾರಿ ಬಸ್ ಇರಲ್ಲ

    ಸರ್ಕಾರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶನಿವಾರವೂ ಮುಷ್ಕರ ಮುಂದುವರಿಸಲು ನೌಕರರ ಸಂಘಟನೆ ಗಳು ನಿರ್ಧರಿಸಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು ಮುಷ್ಕರದ ಉದ್ದೇಶ. ಆದರೆ, ಸರ್ಕಾರ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಹೀಗಾಗಿ ಮುಷ್ಕರ ಶನಿವಾರವೂ ಮುಂದುವರಿಯಲಿದೆ ಎಂದರು.

    ಸರ್ಕಾರಕ್ಕಿರುವ ಅವಕಾಶ

    • ನೌಕರರ ಬೇಡಿಕೆ ಈಡೇರಿಸಿ ಮನವೊಲಿಸುವುದು
    • ತರಬೇತಿ ನೌಕರರ ಮೂಲಕ ಬಸ್ ಸೇವೆ ನೀಡುವುದು
    • ಖಾಸಗಿ ಬಸ್ ಚಾಲಕರಿಗೆ ಸರ್ಕಾರಿ ಬಸ್ ಚಲಾಯಿಸಲು ತಾತ್ಕಾಲಿಕ ಅವಕಾಶ ನೀಡುವುದು, ಎಸ್ಮಾ ಜಾರಿ ಮಾಡಿ ನೌಕರರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಬಹುದು
    • ನೌಕರರ ಮೇಲೆ ಪ್ರಕರಣ ದಾಖಲಿಸುವುದು ಇನ್ನಿತರ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಕರೆಸಿಕೊಳ್ಳಬಹುದು

    ಹಲ್ಲೆ, ಕಲ್ಲು ತೂರಾಟ

    • ರಾಜ್ಯದ ವಿವಿಧೆಡೆ 32 ಕೆಎಸ್ಸಾರ್ಟಿಸಿ, ಬೆಂಗಳೂರಲ್ಲಿ 9 ಬಿಎಂಟಿಸಿ ಬಸ್ ಮೇಲೆ ಕಲ್ಲು
    • ನೆಲಮಂಗಲದಲ್ಲಿ ಬಸ್ ಸಂಚಾರಕ್ಕೆ ಮನವಿ ಮಾಡಿದ ಪ್ರಯಾಣಿಕರ ಮೇಲೆ ಸಿಬ್ಬಂದಿ ಹಲ್ಲೆ
    • ಚನ್ನಪಟ್ಟಣದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಮೇಲೆ ದಾಳಿ
    • ಬಂಗಾರಪೇಟೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್​ಗಳ ಮೇಲೆ ಕಲ್ಲು ತೂರಾಟ
    • ರಾಯಚೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ 2 ದಿನದ ಮಗು ಜತೆ ಬಾಣಂತಿಯ ಪರದಾಟ
    • ಬಳ್ಳಾರಿಯಲ್ಲಿ 2 ಬಸ್​ಗಳ ಮೇಲೆ ಕಲ್ಲು ತೂರಿ ಗಾಜು ಜಖಂಗೊಳಿಸಿದ ಕಿಡಿಗೇಡಿಗಳು
    • ಬಿ ಫಾರ್ಮ, ಡಿ ಫಾರ್ಮ, ಎಂ ಫಾಮ್ರ್ ಪರೀಕ್ಷೆಗೆ ತೆರಳಲು ವಿದ್ಯಾರ್ಥಿಗಳ ಪರದಾಟ

    ಸಂಧಾನ ಮಾತುಕತೆ ವಿಫಲ

    ಸಿಎಂ ಸಮಕ್ಷಮ ಮತ್ತೊಂದು ಸುತ್ತಿನ ಸಭೆಗೆ ನಿರ್ಧಾರ

    ಮುಷ್ಕರನಿರತ ಸಾರಿಗೆ ಸಿಬ್ಬಂದಿ ಒಕ್ಕೂಟಗಳ ಮುಖಂಡರ ಜತೆಗೆ ಸಾರಿಗೆ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಶುಕ್ರವಾರ ನಡೆಸಿದ ಮಾತುಕತೆ ವಿಫಲವಾಗಿದೆ. ಶನಿವಾರ ಮಧ್ಯಾಹ್ನದ ತನಕ ಕಾದು ನೋಡಿ ಮುಂದೆ ಖಾಸಗಿ ವಾಹನಗಳ ಸೇವೆ ಪಡೆಯುವುದು, ಎಸ್ಮಾ ಜಾರಿ ಸೇರಿದಂತೆ ಹಲವು ಕಠಿಣ ತೀರ್ವನಗಳನ್ನು ಕೈಗೊಳ್ಳಲು ಸರ್ಕಾರ ಉದ್ದೇಶಿಸಿರುವುದಾಗಿ ತಿಳಿದು ಬಂದಿದೆ.

    ಸಿಎಂ ಸಮಕ್ಷಮ ಸಭೆ: ನಿಗಮದ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಪರಿಶೀಲಿಸಿ, ಮುಖ್ಯಮಂತ್ರಿ ಜತೆಗೆ ಒಕ್ಕೂಟದ ಮುಖಂಡರ ಸಭೆಯನ್ನು ಏರ್ಪಡಿಸಲಾಗುವುದು. ಶೀಘ್ರವೇ ಮುಂದಿನ ಮಾಗೋಪಾಯಗಳನ್ನು ನಿರೂಪಿಸಲಾಗುವುದು ಎಂಬ ಸವದಿ ಭರವಸೆ ನೀಡಿದರು. ಕರೊನಾ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರ ಕುಟುಂಬದವರಿಗೆ ಇನ್ನು 15 ದಿನಗಳೊಳಗೆ 20 ಲಕ್ಷ ರೂ. ಪರಿಹಾರ ನೀಡಲಾಗುವುದು. ಸಿಬ್ಬಂದಿಗೆ ಕೆಲಸ ವಿಂಗಡಿಸುವ ವೇಳೆ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಗಮನಸೆಳೆದಿದ್ದು, ಅಂತಹ ಘಟನೆಗಳು ಮುಂದೆ ನಡೆದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.

    ಹಠಾತ್ ಬಸ್ ಸಂಚಾರ ಸ್ಥಗಿತದಿಂದ ಕೆಲವೆಡೆ ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗಿದೆ. ಮುಷ್ಕರ ನಿರತ ಸಿಬ್ಬಂದಿ ಕರ್ತವ್ಯಕ್ಕೆ ಮರಳಬೇಕು ಎಂದು ಸವದಿ ವಿನಂತಿಸಿದರು. ವಿಧಾನ ಮಂಡಲದ ಅಧಿವೇಶನದಲ್ಲಿ ಪಾಲ್ಗೊಂಡಿದ್ದರಿಂದ ಪ್ರತಿಭಟನಾನಿರತರ ಜತೆ ಮಾತುಕತೆಗೆ ಅಧಿಕಾರಿಗಳನ್ನು ಕಳುಹಿಸಿ ಮನವೊಲಿಸಲು ಪ್ರಯತ್ನಿಸಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಭೆಯಲ್ಲಿ ಎಐಟಿಯುಸಿ ಮುಖಂಡ ಅನಂತ ಸುಬ್ಬರಾವ್, ಸಿಐಟಿಯು ಮುಖಂಡ ಪ್ರಕಾಶ್, ಮಹಾ ಮಂಡಲದ ಪ್ರತಿನಿಧಿಗಳು, ಭಾರತೀಯ ಮಜ್ದೂರ್ ಸಂಘದ ಪೂಂಜಾ, ಕೆಎಸ್​ಆರ್​ಟಿಸಿ ಅಧ್ಯಕ್ಷ ಚಂದ್ರಪ್ಪ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಸಾರಿಗೆ ಆಯುಕ್ತ ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts