More

    ಸಾರಿಗೆ ನೌಕರರ ಕೈ ಬಿಡುವುದಿಲ್ಲ – ಲಕ್ಷ್ಮಣ ಸವದಿ

    ಸವದತ್ತಿ: ಕರೊನಾದಿಂದಾಗಿ ಕೇಂದ್ರ ಹಾಗೂ ರಾಜ್ಯಗಳ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿದೆ. ಜನರಲ್ಲಿರುವ ಭಯದಿಂದ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚಾರ ಕಡಿಮೆಯಾಗಿ ಇಲಾಖೆ ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವದತ್ತಿ ನೂತನ ಬಸ್‌ನಿಲ್ದಾಣದ ಶಂಕು ಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದರು.

    ಕೋವಿಡ್‌ನಿಂದಾಗಿ ಸಾರಿಗೆ ಇಲಾಖೆಯ 4 ವಿಭಾಗೀಯ ಸಂಸ್ಥೆಗಳು ನಷ್ಟದಲ್ಲಿವೆ. ಬಿಎಎಂಟಿಸಿಗೆ ದಿನಕ್ಕೆ 1.7 ಕೋಟಿ ರೂ. ನಷ್ಟದಲ್ಲಿದೆ. ನಿಗಮದಲ್ಲಿ ಒಟ್ಟು 1.3 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಈ ಕುಟುಂಬಗಳು ಬೀದಿ ಪಾಲಾಗುತ್ತಿದ್ದರು. ಕೂಡಲೇ ಸರ್ಕಾರದಿಂದ 2 ತಿಂಗಳ ವೇತನ ಪಾವತಿಸಲಾಗಿದೆ. ಉಳಿದ ವೇತನವನ್ನು ನಿಗಮಗಳಿಗೆ ಪಾವತಿಸಲು ಸಿಎಂ ಒಪ್ಪಿಗೆ ನೀಡಿದ್ದರು. ಶೀಘ್ರ ಬಾಕಿ ವೇತನ ಪಾವತಿ ಮಾಡಲಾಗುವುದು ಎಂದರು.

    ಹಳೇ ಬಸ್ ಬಳಕೆ: ಹಳೆಯ ಬಸ್‌ಗಳನ್ನು ಗುಜರಿಗೆ ಸೇರಿಸುವ ಬದಲು ಅವುಗಳನ್ನು ಬಳಸಿ ಹೈಟೆಕ್ ಶೌಚಗೃಹಗಳಾಗಿ ಮಾರ್ಪಡಿಸಿ ಬೆಂಗಳೂರಿನ ದೇವಸ್ಥಾನದ ಹತ್ತಿರ ಉಪಯೋಗಕ್ಕಾಗಿ ಪ್ರಾಯೋಗಿಕ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

    ಎಲೆಕ್ಟ್ರೀಕ್ ಬಸ್ ಖರೀದಿಗೆ ಸರ್ಕಾರದಿಂದ ಒಪ್ಪಿಗೆ ನೀಡಲಾಗಿದ್ದು, ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ಹೂಡಿಕೆದಾರರಿಂದ ಬಸ್ ಪಡೆದು ಇಲಾಖೆ ಸಿಬ್ಬಂದಿಯಿಂದ ನಿರ್ವಹಿಸುವಂತೆ ಕ್ರಮವಹಿಸಲಾಗಿದೆ. ನಿಗಮದ 4 ವಿಭಾಗಗಳನ್ನು ಲಾಭದಾಯಕವಾಗಿ ಆದಾಯ ಬರುವಂತೆ ನಡೆಸುತ್ತೇವೆ. ಯಾವುದೇ ಪರಿಸ್ಥಿಯಲ್ಲೂ ನೌಕಕರರನ್ನು ಕೈಬಿಡುವುದಿಲ್ಲ ಎಂದರು.

    ವಿಧಾನಸಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಒಂದೆಡೆ ಕೋವಿಡ್ ಇನ್ನೊಂದೆಡೆ ಪ್ರವಾಹ. ಆದಾಗ್ಯೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6 ಸಾವಿರ ರೂ. ನೆರವು ನೀಡಲಾಗಿದೆ. ಪ್ರವಾಹಕ್ಕೀಡಾದ ಉತ್ತರ ಕರ್ನಾಟಕ ಭಾಗದ ಮನೆಗಳಿಗೆ ಸರ್ಕಾರ 5 ಲಕ್ಷ ನೀಡಿದೆ ಎಂದು ಮಾಹಿತಿ ನೀಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಬಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಕೋರಿದರು. ರಾಜಶೇಖರ ಕಾರದಗಿ, ಶಿವಾನಂದ ಹೂಗಾರ, ಹುಬ್ಬಳ್ಳಿ ವಾ.ಕ.ರಾ.ರ. ಸಂಸ್ಥೆಯ ಎಂಡಿ ಕೃಷ್ಣ ಭಾಜಪೇಯಿ, ವಾ.ಕ.ರಾ.ರ. ಸಂಸ್ಥೆಯ ಅಧ್ಯಕ್ಷ ವಿ.ಎಸ್ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts