More

    ಮುಸ್ಲಿಮರಿಗೆ ಶೇ.4 ಮೀಸಲಾತಿ ತೆಗೆದದ್ದು ಸರಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಖಿ ಸಮರ್ಥನೆ

    ಮೈಸೂರು: ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ಆಗುವುದಿಲ್ಲ. ಹಾಗಾಗಿ ರಾಜ್ಯದಲ್ಲಿ ‘2ಬಿ’ಯಡಿಯಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿ ತೆಗೆದು ಹಾಕಿದ್ದು ಸರಿಯಾದ ನಿರ್ಣಯ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಖಿ ಸಮರ್ಥಿಸಿಕೊಂಡರು.
    ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಜಾರಿಯಲ್ಲಿದ್ದ ಶೇ.4ರಷ್ಟು (2ಬಿ) ಮೀಸಲಾತಿಯನ್ನು ಅಂದಿನ ಬಿಜೆಪಿ ಸರ್ಕಾರ ರದ್ದು ಪಡಿಸಿದೆ. ಆದರೆ ಪ್ರಧಾನಿ ನರೇಂದ್ರಮೋದಿ ಅವರು ಇಡಬ್ಲುೃಎಸ್‌ನಲ್ಲಿ ಶೇ.10ರಷ್ಟು ಮೀಸಲಾತಿ ನೀಡಿದ್ದಾರೆ. ಈ ಮೀಸಲಾತಿಯನ್ನು ಮುಸ್ಲಿಮರು ಪಡೆಯಬಹುದು ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಶಾಲಾ ಕಾಲೇಜುಗಳಲ್ಲಿ ಆಯಾ ಸಂಸ್ಥೆಗಳ ಸಮವಸ್ತ್ರ ಧರಿಸಲು ಮಾತ್ರ ಅವಕಾಶ ಇದೆ. ಹಿಜಾಬ್ ಏನಿದ್ದರೂ ಅವರವರ ಮನೆಗಳಲ್ಲಿ ಹಾಕಿಕೊಳ್ಳಲು ಸ್ವತಂತ್ರರು. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಪಿಎಂ ಆವಾಸ್, ಆಯುಷ್ಮಾನ್ ಭಾರತ್, ಮುದ್ರಾ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
    ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಅನಿಲ್ ಥಾಮಸ್ ಮಾತನಾಡಿ, ಬಿಜೆಪಿ ಅಲ್ಪಸಂಖ್ಯಾತ ವಿಭಾಗಕ್ಕೆ ಪದಾಧಿಕಾರಿಗಳಾಗಲು ಸಾಕಷ್ಟು ಜನರು ಕಚೇರಿಗೆ ಬರುತ್ತಿದ್ದರು. ಆದರೆ ಕಾರ್ಯಕ್ರಮಗಳಿಗೆ ಬರುವುದಿಲ್ಲ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಮಾತ್ರ ಅವಕಾಶ ಸಿಗುತ್ತದೆ. ಯಾವುದೇ ಅನುಮಾನ ಇಟ್ಟುಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಅವರಿಗೆ ಖಂಡಿತ ಅವಕಾಶ ಇರಲಿದೆ ಎಂದು ಹೇಳಿದರು.
    ಬಿಜೆಪಿ ಅಲ್ಪಸಂಖ್ಯಾತ ಸಮುದಾಯದ ವಿರೋಧಿ ಎಂಬ ಭಾವನೆ ಮನಸ್ಸಿನಿಂದ ತೆಗೆದುಹಾಕಿ ಬಿಜೆಪಿಗೆ ಬೆಂಬಲ ಕೊಡಬೇಕು. ಈ ಹಿಂದೆ ಸಾಂಗ್ಲಿಯಾನ ಅವರನ್ನು ಸಂಸದರನ್ನಾಗಿ ಮಾಡಿದರೆ, ಅವರು ಅವಧಿ ಮುಗಿದ ಬಳಿಕ ಪಕ್ಷ ಬಿಟ್ಟರು. ಅದೇ ರೀತಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮುಮ್ತಾಜ್ ಅಲಿಖಾನ್ ಅವರಿಗೆ ಸಚಿವ ಸ್ಥಾನ ನೀಡಿದ್ದರು. ಅವರೂ ಪಕ್ಷ ಬಿಟ್ಟು ಹೋದರು. ಈ ರೀತಿ ಪಕ್ಷದಲ್ಲಿ ಸ್ಥಾನಮಾನ ಪಡೆದು ಬಳಿಕ ಪಕ್ಷ ಬಿಟ್ಟು ಹೋದರೆ ಅಲ್ಪಸಂಖ್ಯಾತರನ್ನು ಹೇಗೆ ನಂಬಲು ಸಾಧ್ಯ ಅವರು ಮೊದಲು ನಂಬಿಕೆ ಉಳಿಸಿಕೊಳ್ಳಬೇಕು ಎಂದು ಹೇಳಿದರು. ಮುಖಂಡರಾದ ಸಂತೋಷ್ ಜಾರ್ಜ್, ವಿವೇಕ್ ಜೈನ್, ಮೊಹಮ್ಮದ್ ನಾಸೀರ್, ಅಕ್ರಂ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts