More

    ವನ್ಯಜೀವಿಗಳ ಸಂರಕ್ಷಣೆ ಎಲ್ಲರ ಹೊಣೆ: ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‌ಕುಮಾರ್ ಹೇಳಿಕೆ

    ಮೈಸೂರು: ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ಧ್ವನಿ ಇಲ್ಲದ ಪ್ರಾಣಿಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‌ಕುಮಾರ್ ಹೇಳಿದರು.
    ಮೈಸೂರು ಮೃಗಾಲಯದಿಂದ ಹತ್ತು ದಿನಗಳ ಕಾಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಬೇಸಿಗೆ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಯುವಜನತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳವ ಮೂಲಕ ಮೂಕಪ್ರಾಣಿಗಳ ಬಗ್ಗೆಯೂ ಒಲವು ತೋರಬೇಕು ಎಂದು ಮನವಿ ಮಾಡಿದರು.
    ಪ್ರತಿವರ್ಷ ಬೇಸಿಗೆ ಶಿಬಿರ, ಯೂತ್ ಕ್ಲಬ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ, ವನ್ಯಜೀವಿ ಸಂರಕ್ಷಣೆ ಮಹತ್ವ ಕುರಿತು ಮೃಗಾಲಯದಿಂದ ಶಿಕ್ಷಣ ನೀಡುತ್ತಾ ಬರಲಾಗುತ್ತಿದೆ. ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಮುಂದಿನ ದಿನಗಳಲ್ಲಿ ಮೃಗಾಲಯದ ಒಂದು ಭಾಗವಾಗುತ್ತಾರೆ. ಕೆಲವರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರೆ, ವಿವಿಧ ಉದ್ಯೋಗ ಪಡೆದ ನಂತರ ಪ್ರಾಣಿ ದತ್ತು ಯೋಜನೆಗೆ ಕೈ ಜೋಡಿಸಲಿದ್ದಾರೆ ಎಂದು ಹೇಳಿದರು.
    ಮೈಸೂರು ಮೃಗಾಲಯ ಇದುವರೆಗೆ ಸಾಕಷ್ಟು ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ವರ್ಷದಿಂದ ವರ್ಷಕ್ಕೆ ಹೊಸ, ಹೊಸ ಸಾಧನೆ ಮಾಡುತ್ತಲೇ ಗಮನ ಸೆಳೆಯುತ್ತಾ ದೇಶದ ಮೊದಲ ಸ್ವಾವಲಂಬಿ ಮೃಗಾಲಯ ಎಂಬ ಕೀರ್ತಿ ಪಡೆದಿದೆ ಎಂದರು.
    ಮೃಗಾಲಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ವರ್ಮಿ ಕಾಂಪೋಸ್ಟ್ ತಯಾರಿಕೆ, ಪ್ರಾಣಿ-ಪಕ್ಷಿ ದತ್ತು ಸ್ವೀಕಾರ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲ ಬಾರಿಗೆ ಮೈಸೂರು ಮೃಗಾಲಯದಲ್ಲಿ ಜಾರಿಗೊಳಿಸಲಾಯಿತು. ಈ ಎಲ್ಲ ಕಾರ್ಯಕ್ರಮಗಳು ಇತರ ಮೃಗಾಲಯಗಳಿಗೆ ಮಾದರಿಯಾಗಿದೆ ಎಂದು ವಿವರಿಸಿದರು.
    ಏ.24ರವರೆಗೆ ನಡೆಯಲಿರುವ ಶಿಬಿರದಲ್ಲಿ 65 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಪ್ರತಿದಿನ ಸಂಪನ್ಮೂಲ ವ್ಯಕ್ತಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಂದ ವನ್ಯಜೀವಿ ಸಂರಕ್ಷಣೆ ಹಾಗೂ ಜೀವನ ಕ್ರಮ ಸೇರಿದಂತೆ ಇನ್ನಿತರ ಮಹತ್ತರ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್, ಆರ್‌ಎಫ್‌ಒ ಮುನಿರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts