More

    ಕೈಕೊಟ್ಟ ಟಿಸಿ ‘ಭಟ್ಕಳಕ್ಕೆ ಕತ್ತಲೆ ಬಿಸಿ’

    ಭಟ್ಕಳ: ತಾಲೂಕಿನ ಹೆಬಳೆಯ ಗ್ರಿಡ್​ನಲ್ಲಿನ ವಿದ್ಯುತ್ ಪರಿವರ್ತಕ (ಟಿಸಿ) ವೈಫಲ್ಯದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿ ಬಹುತೇಕ ಭಟ್ಕಳ ಅಂಧಕಾರದಲ್ಲಿ ಮುಳುಗಿದ್ದು, ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗಿದೆ.
    ನಾಲ್ಕು ದಿನಗಳ ಹಿಂದೆ 110 ಕೆವಿ ಕುಮಟಾ ತಾಲೂಕಿನ ಧಾರೇಶ್ವರ ಗೋರೆಗುಡ್ಡದಲ್ಲಿ ವಿದ್ಯುತ್ ಲೈನ್​ನಲ್ಲಿ ದೋಷವುಂಟಾಗಿ ಎರಡ್ಮೂರು ಗಂಟೆ ಕಾಲ ಭಟ್ಕಳದಿಂದ ಕುಮಟಾದವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಅದಾದ ಮಾರನೇ ದಿನವೇ ಪಟ್ಟಣದ ಹೆಬಳೆ ಗ್ರಿಡ್​ನಲ್ಲಿನ ತಲಾ 5 ಮೆಗಾ ವ್ಯಾಟ್​ ಆಂಪ್​ನ (ಎಂವಿಎ) ಟಿಸಿ ಹಾಳಾಗಿದೆ. ಇದರಿಂದಾಗಿ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯಗೊಂಡಿದ್ದು, ವಿದ್ಯುತ್ ಸಂಪರ್ಕ ಮರು ಸ್ಥಾಪಿಸಲು ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಧ್ಯರಾತ್ರಿವರೆಗೂ ಹರಸಾಹಸಪಟ್ಟಿದ್ದಾರೆ. ಕೊನೆಗೆ ಮುರ್ಡೆಶ್ವರದಿಂದ ಭಟ್ಕಳಕ್ಕೆ ಸಂಪರ್ಕ ನೀಡಲಾಗಿದ್ದು, ತಂತಿಗಳ ದೂರ ಹೆಚ್ಚಾದ ಕಾರಣ ವೋಲ್ಟೇಜ್​ನಲ್ಲಿ ಏರುಪೇರಾಗುತ್ತಿದೆ.
    ಸಾಮಾನ್ಯವಾಗಿ ಒಂದು ಟಿಸಿ ಕನಿಷ್ಠ 20 ವರ್ಷಗಳಿಂದ 30 ವರ್ಷಗಳವರೆಗೆ ಬಳಕೆಗೆ ಬರುತ್ತದೆ. ಹೆಬಳೆಯಲ್ಲಿನ ಮೂರು ಟಿಸಿಗಳಲ್ಲಿ ಒಂದು ಹೊಸದಾಗಿದ್ದು, ಇನ್ನೊಂದು 26 ವರ್ಷ ಹಳೆಯದಾಗಿದ್ದು, ಈಗಲೂ ಕಾರ್ಯನಿರ್ವಹಿಸುತ್ತಿದೆ. ಆದರೆ, 20 ವರ್ಷ ಹಿಂದಿನ ಟಿಸಿ ಈಗ ಹಾಳಾಗಿದೆ.
    110 ಕೆವಿಎ ಗ್ರಿಡ್ ಶಾಶ್ವತ ಪರಿಹಾರ: ಭಟ್ಕಳದಲ್ಲಿ 110 ಕೆವಿಎ ಗ್ರಿಡ್ ಸ್ಥಾಪನೆಯಾಗಬೇಕೆನ್ನುವುದು ದಶಕಗಳ ಬೇಡಿಕೆ. 2009ರಲ್ಲೇ ಈ ಬಗ್ಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಗ್ರಿಡ್ ಮಂಜೂರಾದರೂ ಸ್ಥಾಪನೆಗೆ ಕಾನೂನಾತ್ಮಕ ಹಾಗೂ ಅರಣ್ಯ ಪರವಾನಗಿ ಸಮಸ್ಯೆ ಉಂಟಾಗಿದೆ. 110 ಕೆವಿಎ (ಕಿಲೋ ವ್ಯಾಟ್​ ಆಂಪ್) ಗ್ರಿಡ್ ಅನ್ನು ತಾಲೂಕಿನ ಕಡಸಲಗದ್ದೆಯಲ್ಲಿ ಸ್ಥಾಪಿಸಲು ಜಾಗ ನಿಗದಿಯಾಗಿ ಪ್ರಕ್ರಿಯೆ ನಡೆದಿತ್ತು. ಇದಕ್ಕಾಗಿ ಮುರ್ಡೆಶ್ವರದಿಂದ ವಿದ್ಯುತ್ ಲೈನ್ ಎಳೆಯಬೇಕಾಗಿದ್ದು, ಈ ವಿದ್ಯುತ್ ಮಾರ್ಗ ಹಾದುಹೋಗುವ ಖಾಸಗಿ ಜಾಗದ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಜೊತೆಗೆ ಅರಣ್ಯ ಮಾರ್ಗದಲ್ಲೂ ಈ ಲೈನ್​ಗಳು ಹಾದುಹೋಗುವ ಕಾರಣ ಅರಣ್ಯ ಇಲಾಖೆ ಪರವಾನಗಿ ಕೂಡ ಬಾಕಿ ಇದೆ. ಹೀಗಾಗಿ, ಈ ಸಮಸ್ಯೆ ಪರಿಹಾರವಾಗಿ ಗ್ರಿಡ್ ಸ್ಥಾಪನೆಯಾದರೆ ಭಟ್ಕಳದ ವಿದ್ಯುತ್ ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
    ಭಟ್ಕಳದ ಟಿಸಿ ಹಾಳಾಗುತ್ತಿದ್ದಂತೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿರುವ (ಎಂಡಿ) ಮೊಹಮ್ಮದ್ ರೋಶನ್ ಅವರು ತಕ್ಷಣ ಸ್ಪಂದಿಸಿದ್ದಾರೆ. ಈ ಹಿಂದೆ ಉತ್ತರಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರೋಶನ್ ಅವರಿಗೆ ಜಿಲ್ಲೆಯ ಸಮಸ್ಯೆಗಳು ಗೊತ್ತಿರುವುದರಿಂದ ತಕ್ಷಣ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ ಹೊಸಪೇಟೆಯಿಂದ ಹೊಸ ಟಿಸಿ ಕಳುಹಿಸಲಾಗಿದ್ದು, ಟಿಸಿ ಬದಲಿಸಿ ಪರೀಕ್ಷೆ ಕೈಗೊಂಡು ವಿದ್ಯುತ್ ಪುನಃ ಸ್ಥಾಪನೆಗೊಳ್ಳಲು ಇನ್ನೂ ಎರಡು ದಿನಗಳು ಬೇಕಾಗಬಹುದು ಎನ್ನಲಾಗಿದೆ.


    ಹೆಚ್ಚುವರಿ ಟಿಸಿಗೆ ಪ್ರಸ್ತಾವ ಸಲ್ಲಿಕೆ: ಹೆಬಳೆಯಲ್ಲಿ ಈಗಿರುವ ಮೂರು ಟಿಸಿಗಳ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು 5 ಎಂವಿಎ ಸಾಮರ್ಥ್ಯದ ಟಿಸಿ ಸ್ಥಾಪನೆಗೆ ಈಗಾಗಲೇ ಸ್ಥಳೀಯ ಅಧಿಕಾರಿಗಳಿಂದ ಹೆಸ್ಕಾಂಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಅನೇಕ ಬಾರಿ ಹಿಂದೆಯೂ ಪ್ರಸ್ತಾವ ಸಲ್ಲಿಕೆಯಾಗಿದ್ದರೂ ಯಾವುದೇ ಪ್ರಗತಿಯಾಗಿರಲಿಲ್ಲ. ಆದರೆ ಈಗಿನ ಎಂಡಿ ಮೊಹಮ್ಮದ್ ರೋಶನ್ ಅವರು ಭಟ್ಕಳದ ಪರಿಸ್ಥಿತಿಯನ್ನರಿತು ಈ ಪ್ರಸ್ತಾವಕ್ಕೆ ಅಸ್ತು ಎಂದಿದ್ದು, ಶೀಘ್ರವೇ ಟೆಂಡರ್ ಕರೆಯುವ ಸಾಧ್ಯತೆ ಇದೆ.

    ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಹೆಸ್ಕಾಂ ಬದ್ಧವಾಗಿದೆ. ಬೇಸಿಗೆ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಟ್ಕಳದ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹೆಸ್ಕಾಂ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕಿದೆ.
    | ಮೊಹಮ್ಮದ್ ರೋಶನ್, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts