More

    ಸಿಬ್ಬಂದಿಗೆ ಪ್ರಾಣಿ ಸಂರಕ್ಷಣೆ ಯೋಜನೆ ತರಬೇತಿ: ಸಚಿವ ಅರವಿಂದ ಲಿಂಬಾವಳಿ ಹೇಳಿಕೆ

    ಬೆಳ್ತಂಗಡಿ: ಕಾಡುಪ್ರಾಣಿಗಳ ಸಂರಕ್ಷಣೆಗೆ ಪ್ರಾಯೋಗಿಕವಾಗಿ ಬೆಳ್ತಂಗಡಿಯಲ್ಲಿ ಪ್ರಾರಂಭಿಸಲಾಗುವ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಇಲಾಖಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಜೋಡಿಸಿದ್ದರಿಂದ ಹೆಚ್ಚು ಶಕ್ತಿ ಬಂದಿದೆ ಎಂದು ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ಧರ್ಮಸ್ಥಳದಲ್ಲಿ ಶನಿವಾರ ಅರಣ್ಯ ಇಲಾಖಾ ಅಧಿಕಾರಿಗಳ ವಿಶೇಷ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಪ್ರಸ್ತುತ ದಿನಗಳಲ್ಲಿ ಆಮ್ಲಜನಕವನ್ನು ಕೂಡ ಖರೀದಿಸುವ ಪ್ರಮೇಯ ಬಂದಿದೆ. ಇದು ದುರದೃಷ್ಟಕರ. ಇದಕ್ಕೆ ಅರಣ್ಯ ನಾಶವೇ ಕಾರಣ ಎಂದು ಡಾ.ಹೆಗ್ಗಡೆಯವರು ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ ಎಂದರು.

    ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಧ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್ ಮಂಜುನಾಥ್, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಲ್‌ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳ, ಕೆಎಫ್‌ಡಿಪಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಮಲಾ, ಸಾಮಾಜಿಕ ಅರಣ್ಯ ಇಲಾಖಾ ಪಿಸಿಎಫ್ ಶ್ರೀಧರ ನಾಯ್ಕ, ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್, ಶ್ರೀಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ಮ್ಯಾನೇಜರ್ ಬಾಲಕೃಷ್ಣ ಪೂಜಾರಿ, ಬೆಳ್ತಂಗಡಿ ವಿಭಾಗದ ಅರಣ್ಯಾಧಿಕಾರಿ ತ್ಯಾಗರಾಜ್ ಇದ್ದರು.

    ಶೀಘ್ರ ಸ್ಪಂದನೆ ಶ್ಲಾಘನೀಯ: ಹಲವು ವರ್ಷಗಳ ಹಿಂದೆ ರಾತ್ರಿ ವೇಳೆ ಕಾಡುಪ್ರಾಣಿಗಳ ಸಂಚಾರ ಕಂಡಿದ್ದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ. ಕಾಡುಪ್ರಾಣಿಗಳು ನಾಡಿಗೆ ಬಂದು ಕೃಷಿ ನಾಶ ಮಾಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಳವಳ ವ್ಯಕ್ತಪಡಿಸಿದರು. ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಸಿಗುತ್ತಿಲ್ಲ. ಇದಕ್ಕೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದ್ದೆ. ಸಚಿವರು ಶೀಘ್ರ ಸ್ಪಂದಿಸಿರುವುದು ಅಭಿನಂದನೀಯ. ಈ ಯೋಜನೆಗೆ ಶ್ರೀ ಕ್ಷೇತ್ರ ಧ.ಗ್ರಾ ಯೋಜನೆ ಸಹಕಾರ ನೀಡಲಿದೆ. ಉಜಿರೆ ಬದುಕು ಕಟ್ಟೋಣ ಎಂಬ ತಂಡ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಬಹುದು ಎಂದು ಹೇಳಿದರು.

    ನೈಸರ್ಗಿಕ ಅಸಮತೋಲನ, ಪ್ರಕೃತಿ ವಿಕೋಪ ಹಾಗೂ ಇನ್ನಿತರ ಅವ್ಯವಸ್ಥೆಗಳಿಂದ ಅರಣ್ಯ ಕಡಿಮೆಯಾಗುತ್ತಿದೆ. ಇದರಿಂದ ಕಾಡುಪ್ರಾಣಿಗಳು ನಾಶ ಹೊಂದುವ ಸ್ಥಿತಿ ಎದುರಾಗಿದೆ. ಇದರ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಿಶೇಷ ಕಾಳಜಿ ವಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಕಾಡುಪ್ರಾಣಿ ಸಂರಕ್ಷಣೆಗೆ ಕಾರ್ಯೋನ್ಮುಖವಾಗಿದೆ.
    – ಅರವಿಂದ ಲಿಂಬಾವಳಿ
    ಸಚಿವ, ಅರಣ್ಯ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts