ಅಗ್ನಿಪಥ ಆಕಾಂಕ್ಷಿಗಳಿಗೆ ಮಾಜಿ ಸೈನಿಕರಿಂದ ತರಬೇತಿ

2 Min Read
ಅಗ್ನಿಪಥ ಆಕಾಂಕ್ಷಿಗಳಿಗೆ ಮಾಜಿ ಸೈನಿಕರಿಂದ ತರಬೇತಿ

ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆ ಹೊಂದಿರುವ ಯುವಕರಿಗೆ ಇಲ್ಲಿನ ಐವರು ಮಾಜಿ ಯೋಧರು ಉಚಿತ ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಿರುವ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಅಗ್ನಿಪಥ ಯೋಜನೆಯಡಿ ಸೈನಿಕರಾಗಲು ಹೆಚ್ಚಿನ ಜನರು ಉತ್ಸುಕರಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ , ಸೈನಿಕ ಭರ್ತಿಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸವಾಲಿನ ಕೆಲಸ. ಹೀಗಾಗಿ, ಅದಕ್ಕೆ ಕಠಿಣ ತರಬೇತಿ ಅಗತ್ಯವಾಗಿದ್ದು, ಮಾಜಿ ಸೈನಿಕರು ಅರ್ಜಿ ಸಲ್ಲಿಸಿದ ಯುವ ಪಡೆಗೆ ತರಬೇತಿ ನೀಡುತ್ತಿದ್ದಾರೆ.
ಇಲ್ಲಿಯ ಬಿಜೆಪಿ ಸಹಕಾರಿ ಪ್ರಕೋಷ್ಠದ ಸಂಚಾಲಕ ಸೋಮೇಶ ಉಪನಾಳ ಅವರು ಯುವಕರಿಗೆ ಮಾಜಿ ಸೈನಿಕರಿಂದ ಉಚಿತ ಮಾರ್ಗದರ್ಶನ ಮತ್ತು ತರಬೇತಿ ಕೊಡಿಸುತ್ತಿದ್ದಾರೆ. ಇದಕ್ಕೆ ಮಾಜಿ ಸೈನಿಕರೂ ಕಾಳಜಿಯಿಂದ ಸೇವೆ ನೀಡುತ್ತಿದ್ದಾರೆ.
ಏನೇನು ತರಬೇತಿ: ದೈಹಿಕ ಪರೀಕ್ಷೆಗೆ ಬೇಕಾದ ತರಬೇತಿ ನೀಡಲಾಗುತ್ತಿದೆ. ರನ್ನಿಂಗ್, ಚಿನ್ನಪ್, ಲಾಂಗ್ ಜಂಪ್, ಹೈ ಜಂಪ್, ಪುಲ್ ಅಪ್ಸ್, ಪುಷ್ ಅಪ್ಸ್, ಕಟ್ಟಿಗೆ ಮೇಲೆ ಜಿಗ್ ಜಾಗ್ ನಡಿಗೆ, ಅವಶ್ಯಕ ಸಂದರ್ಭದಲ್ಲಿ ಸೈನಿಕರನ್ನು ಹೊತ್ತು ಓಡುವುದು ಸೇರಿ ಸೈನಿಕ ತರಬೇತಿಯಲ್ಲಿಯ ಎಲ್ಲ ದೈಹಿಕ ಕಸರತ್ತಿನ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತಿದೆ. ಐದು ಜನ ಮಾಜಿ ಸೈನಿಕರು ಕಳೆದ 15 ದಿನಗಳಿಂದ ಪಟ್ಟಣದ ಉಮಾ ವಿದ್ಯಾಲಯದ ಮೈದಾನದಲ್ಲಿ ಉಚಿತವಾಗಿ ಅಗ್ನಿಪಥ ಸೇರ ಬಯಸುವ ಯುವಕರಿಗೆ ತರಬೇತಿ ನೀಡುತ್ತಿದ್ದಾರೆ. ಪಟ್ಟಣ ಹಾಗೂ ವಿವಿಧ ಗ್ರಾಮಗಳ 75ಕ್ಕೂ ಅಧಿಕ ಯುವಕರು ಪಾಲ್ಗೊಳ್ಳುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 6ರಿಂದ 8 ರವರೆಗೆ ತರಬೇತಿ ನಡೆಯುತ್ತಿದೆ. ಮಾಜಿ ಸೈನಿಕ (ಕ್ಯಾಪ್ಟನ್) ಮೃತ್ಯುಂಜಯ ಹಾವೇರಿಮಠ, ಮಾಜಿ ಸುಬೇದಾರ ಮೇಜರ್ ಚನ್ನಬಸಪ್ಪ ಹುಡೇದ, ಮಾಜಿ ಸೈನಿಕರಾದ ಅಶೋಕ ಪ್ಯಾಟಿ, ಈರಣ್ಣ ಅಣ್ಣಿಗೇರಿ, ಬಸವರಾಜ ಸೂರಣಗಿ ಇತರರು ತರಬೇತಿ ನೀಡುತ್ತಿದ್ದಾರೆ.ಸೈನಿಕರಾಗಬೇಕೆಂಬ ಆಸೆಯಿದ್ದರೂ ನಮಗೆ ಸೂಕ್ತ ಮಾರ್ಗದರ್ಶನದ ಕೊರತೆ ಕಾಡುತ್ತಿತ್ತು. ಮಾಜಿ ಸೈನಿಕರ ಕಳಕಳಿ, ಮಾರ್ಗದರ್ಶನ, ತರಬೇತಿಯಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಈ ರೀತಿಯ ಉಚಿತ ತರಬೇತಿಯಿಂದ ನಮ್ಮಲ್ಲಿ ಹೊಸ ಉತ್ಸಾಹ ಬಂದಿದೆ. ಇದು ನಮ್ಮ ಭವಿಷ್ಯಕ್ಕೆ ಅನುಕೂಲವಾಗಲಿದೆ.
| ಪ್ರದೀಪ ಟೋಕಾಳಿ, ಮಾಲತೇಶ ಪೂಜಾರ, ಅಗ್ನಿಪಥ ಸೇರಬಯಸುವ ಆಕಾಂಕ್ಷಿಗಳು

ಇದೊಂದು ರೀತಿಯಲ್ಲಿ ದೇಶ ಸೇವೆ ಎನ್ನುವ ನಿಟ್ಟಿನಲ್ಲಿ ತರಬೇತಿ ಹಮ್ಮಿಕೊಂಡಿದ್ದೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕಾದರೆ ಲಿಖಿತ ಮತ್ತು ದೈಹಿಕ ಪರೀಕ್ಷೆಯಲ್ಲಿ ಪಾಸಾಗಬೇಕು. ಈ ಉದ್ದೇಶದಿಂದ ಮಾಜಿ ಸೈನಿಕರ ಸಹಕಾರದೊಂದಿಗೆ ಉಚಿತ ತರಬೇತಿ ಹಮ್ಮಿಕೊಂಡಿದ್ದೇವೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಹಾವೇರಿಯಲ್ಲಿ ಆಯ್ಕೆ ಪ್ರಕ್ರಿಯೆ ಆರಂಭವಾಗುವವರೆಗೆ ಬರುವ ಎಲ್ಲ ಯುವಕರಿಗೂ ತರಬೇತಿ ನೀಡಲಾಗುತ್ತದೆ.
| ಸೋಮೇಶ ಉಪನಾಳ ಬಿಜೆಪಿ ಸಹಕಾರಿ ಪ್ರಕೋಷ್ಠದ ಸಂಚಾಲಕ


See also  50 ಸಾವಿರಕ್ಕಿಂತ ಮೇಲ್ಪಟ್ಟು ಹಣ ಕೊಂಡೊಯ್ಯುವಂತಿಲ್ಲ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​
Share This Article