More

    ಸಂಚಾರಕ್ಕೆ ಮುಕ್ತವಾಗದ ರಸ್ತೆಗಳು

    ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗಲ್ಲಿಗಳಲ್ಲಿನ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಮಾರ್ಗಗಳನ್ನು ಬಂದ್ ಮಾಡಿರುವ ಪರಿಣಾಮ ದಿನಸಿ, ತರಕಾರಿ ತೆಗೆದುಕೊಂಡು ಮನೆಗಳಿಗೆ ತೆರಳಲು ಜನರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

    ಕರೊನಾ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ 21ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ದಿನಸಿ, ತರಕಾರಿ ಖರೀದಿಸಲು ಮಾತ್ರ ಅವಕಾಶ ನೀಡಲಾಗಿದೆ. ಈ ನಡುವೆ ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಅಲ್ಲಲ್ಲಿ ಸ್ಥಳೀಯ ನಿವಾಸಿಗಳು ಬಂದ್ ಮಾಡಿದ್ದಾರೆ. ಇದರಿಂದ ವಾಹನ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಜನರು ನಿತ್ಯ 1 ಕಿ.ಮೀ. ವರೆಗೆ ನಡೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಹಿರಿಯ ನಾಗರಿಕರು, ಮಕ್ಕಳು ದಿನಸಿ ವಸ್ತುಗಳನ್ನು ತೆಗೆದುಕೊಂಡು ಬರಲು ಸಾಧ್ಯವಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ.

    ನೆಹರು ನಗರದಲ್ಲಿ ಸಣ್ಣ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಡಿ.ಮಾರ್ಟ್ ಸೇರಿ ವಿವಿಧ ಅಂಗಡಿಗಳಿಗೆ ಬರುವ ಗ್ರಾಹಕರು
    1 ಕಿ.ಮೀ. ದೂರದಲ್ಲಿ ವಾಹನ ನಿಲ್ಲಿಸಿ ನಡೆದುಕೊಂಡು ಬರುತ್ತಿದ್ದಾರೆ. ಕೆಲವು ಕಡೆ ನಡೆದುಕೊಂಡು ಹೋಗಲು ಸಾಧ್ಯವಾಗದೆ ಹಿರಿಯ ನಾಗರಿಕರು ಬರಿಗೈಯಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದಾರೆ. ಹಾಗಾಗಿ ನಗರ ಪೊಲೀಸರು, ಪಾಲಿಕೆ ಆಯುಕ್ತರು ಮಾರ್ಗಗಳನ್ನು ಮುಕ್ತಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಸಂಚಾರ ಮಾರ್ಗ ಬದಲಾವಣೆ: ಕ್ಯಾಂಪ್ ಪ್ರದೇಶ ಪ್ರವೇಶಿಸುವ ತುರ್ತು ಸೇವೆ, ವೈದ್ಯಕೀಯ ಸೇವೆ ಒದಗಿಸುವ
    ವಾಹನಗಳಿಗೆ ನಗರದ ಚನ್ನಮ್ಮ ಸರ್ಕಲ್ ಬಳಿ ಮಿಲನ ಹೋಟೆಲ್ ಹತ್ತಿರ ಆಗಮನ ಹಾಗೂ ನಿರ್ಗಮನಕ್ಕೆ ಒಂದೇ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಿ ಇನ್ನುಳಿದವರಿಗೆ ಸಂಚರಿಸಲು ಸಂಪೂರ್ಣ ನಿಬಂಧಿಸಲಾಗಿದೆ. ಜಿಲ್ಲಾ ಆಸ್ಪತ್ರೆ ಸುತ್ತಮುತ್ತಲೂ ಅಗತ್ಯ ವಸ್ತುಗಳ ಸರಬರಾಜು ಮಾಡುವ ಮತ್ತು ತುರ್ತು ಸೇವೆ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಮಾದರಿಯ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

    ಚನ್ನಮ್ಮ ಸರ್ಕಲ್ನಿಂದ ಪೀರನವಾಡಿ ಕಡೆಗೆ, ಪೀರನವಾಡಿಯಿಂದ ಚನ್ನಮ್ಮ ಸರ್ಕಲ್ ಕಡೆಗೆ ಸಂಚರಿಸುವವರು ಆರ್‌ಟಿಒ ಸರ್ಕಲ್, ಕಿಲ್ಲಾ ಕೆರೆ ಅಶೋಕ ಪಿಲ್ಲರ್, ಸರ್ಕಿಟ್ ಹೌಸ್, ಜೀಜಾಮಾತಾ ಸರ್ಕಲ್, ದೇಶಪಾಂಡೆ ಪೆಟ್ರೋಲ್ ಪಂಪ್, ಪಿಂಪಳ ಕಟ್ಟಾ, ಶನಿ ಮಂದಿರ, ಕಪಿಲೇಶ್ವರ ಓವರ್‌ಬ್ರಿಡ್ಜ್, ಬ್ಯಾಂಕ ಆಫ್ ಇಂಡಿಯಾ, ಮಹಾತ್ಮ ಫುಲೆ ರಸ್ತೆ, ಗೋವಾ ವೇಸ್, ಆರ್‌ಪಿಡಿ ಸರ್ಕಲ್, 3ನೇ ರೈಲ್ವೆ ಗೇಟ್ ಮೂಲಕ ಪೀರನವಾಡಿ ತಲುಪಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts