More

    ಶಕ್ತಿ ಯೋಜನೆ ಜಾರಿಯಾದ ತಿಂಗಳ ಅವಧಿಯಲ್ಲಿ 46 ಲಕ್ಷ ಮಹಿಳೆಯರಿಂದ ಸಂಚಾರ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಯಾದ 1 ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 46.67 ಲಕ್ಷ ಮಹಿಳೆಯರು ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ!


    ಕಳೆದ ಜೂನ್ 11ರಂದು ಶಕ್ತಿ ಯೋಜನೆ ಜಾರಿಗೆ ಬಂದ ಮೊದಲ ದಿನದಿಂದಲೇ ಮಹಿಳಾ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇವಲ 1 ತಿಂಗಳಲ್ಲಿ 46,67,151 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದರ ಟಿಕೆಟ್ ಮೌಲ್ಯ 12.58 ಕೋಟಿ ರೂ. ಆಗಿದೆ.


    ಜಿಲ್ಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಣೆಬೆನ್ನೂರ, ಹಿರೇಕೆರೂರ, ಬ್ಯಾಡಗಿ, ಸವಣೂರ, ಹಾನಗಲ್ಲ ಹಾಗೂ ಹಾವೇರಿ ಸೇರಿ ಒಟ್ಟು 6 ಡಿಪೋ(ಘಟಕ)ಗಳಿವೆ. ನಿತ್ಯವೂ 600ಕ್ಕೂ ಅಧಿಕ ಮಾರ್ಗಗಳಲ್ಲಿ ನೂರಾರು ಬಸ್​ಗಳು ಸಂಚಾರ ಮಾಡುತ್ತಿದ್ದು, ಟ್ರಿಪ್​ಗಳನ್ನೂ ಹೆಚ್ಚಿಸಲಾಗಿದೆ.


    ಹುಬ್ಬಳ್ಳಿ, ದಾವಣಗೆರೆ ಸೇರಿ ಸುತ್ತಲಿನ ಪಟ್ಟಣ, ನಗರಗಳಿಗೆ ನಿತ್ಯವೂ ಕೆಲಸ-ಕಾರ್ಯಗಳಿಗೆ ತೆರಳಲು ರೈಲು, ಖಾಸಗಿ ಬಸ್, ಆಟೋರಿಕ್ಷಾ, ಟಂಟಂ, ಟೆಂಪೋ ಸೇರಿ ಇನ್ನಿತರ ವಾಹನಗಳನ್ನು ಅವಲಂಬಿಸುತ್ತಿದ್ದ ಸಾವಿರಾರು ಮಹಿಳೆಯರು ಶಕ್ತಿ ಯೋಜನೆ ಜಾರಿಯಾದ ದಿನದಿಂದ ಸಾರಿಗೆ ಬಸ್​ಗಳನ್ನೆ ನೆಚ್ಚಿಕೊಂಡಿದ್ದಾರೆ.


    ಸರ್ಕಾರಿ ನೌಕರರು, ಖಾಸಗಿ ಕಂಪನಿಗಳ ಉದ್ಯೋಗಿಗಳು, ಗಾರ್ವೆಂಟ್ ಸೇರಿ ವಿವಿಧ ಕ್ಷೇತ್ರಗಳ ಅಸಂಘಟಿತ ಕಾರ್ವಿುಕರು, ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರ-ವಹಿವಾಟು ಮಾಡುವವರು ಸಾರಿಗೆ ಬಸ್​ಗಳಲ್ಲೇ ಪ್ರಯಾಣಿಸುತ್ತಿದ್ದಾರೆ. ಗ್ರಾಮೀಣ ಸಾರಿಗೆ ಜತೆಗೆ ಎಕ್ಸ್ ಪ್ರೆಸ್ ಬಸ್​ಗಳಲ್ಲಿಯೂ ಮಹಿಳಾ ಪ್ರಯಾಣಿಕರ ಸಂಖ್ಯೆ ಮೂರುಪಟ್ಟು ಹೆಚ್ಚಿದೆ. ಅದರಲ್ಲೂ ಧಾರ್ವಿುಕ ಕ್ಷೇತ್ರಗಳಿಗೆ ತೆರಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ.


    ಈ ಮೊದಲು ಪ್ರಯಾಣಿಕರು ಇಲ್ಲದೆ ಸಂಚರಿಸುತ್ತಿದ್ದ ಬಸ್​ಗಳಲ್ಲೂ ಇದೀಗ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ರಾಣೆಬೆನ್ನೂರ ಸಾರಿಗೆ ಘಟಕದ ವ್ಯಾಪ್ತಿಯಲ್ಲಿ ಅತಿ ಹೆಚ್ಚು 9.51 ಲಕ್ಷ ಮಹಿಳೆಯರು ಪ್ರಯಾಣಿಸಿದರೆ, ಸವಣೂರಿನಲ್ಲಿ ಅತಿ ಕಡಿಮೆ 5.45 ಲಕ್ಷ ಮಹಿಳಾ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ.


    ಜೂ. 11ರಿಂದ ಜೂ. 30ರವರೆಗೆ 20 ದಿನಗಳಲ್ಲಿ 30,49,459 ಮಹಿಳೆಯರು ವಿವಿಧ ಸಾರಿಗೆ ಘಟಕಗಳ ಬಸ್​ಗಳಲ್ಲಿ ಪ್ರಯಾಣಿಸಿದ್ದಾರೆ. ಇದರ ಟಿಕೆಟ್​ನ ಒಟ್ಟು ಮೊತ್ತ ಅಂದಾಜು 8 ಕೋಟಿ ರೂ. ಆಗಿತ್ತು. ಜು. 11ರ ವೇಳೆಗೆ ಮಹಿಳಾ ಪ್ರಯಾಣಿಕರ ಸಂಖ್ಯೆ 46.67 ಲಕ್ಷ ದಾಟಿದ್ದು, ಇದರ ಟಿಕೆಟ್ ಮೌಲ್ಯ 12.58 ಕೋಟಿ ರೂ. ಆಗಿದೆ. ಸಾರಿಗೆ ಬಸ್​ಗಳಲ್ಲಿ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸ್​ಗಳಿಗೂ ಬೇಡಿಕೆ ಹೆಚ್ಚಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಬಸ್​ಗಳ ಸಂಚಾರ ಇಲ್ಲದಂತಾಗಿದೆ. ಒಂದೆಡೆ ಬಸ್​ಗಳ ಕೊರತೆ ಜತೆಗೆ ಸಿಬ್ಬಂದಿ ಕೊರತೆಯೂ ಇರುವ ಕಾರಣ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್​ಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಸಾರಿಗೆ ಸಂಸ್ಥೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

    ಹಾವೇರಿ ವಿಭಾಗ ವ್ಯಾಪ್ತಿಯ ಸಾರಿಗೆ ಬಸ್​ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮೊದಲಿದ್ದ ಎಲ್ಲ ಮಾರ್ಗಗಳಲ್ಲಿಯೂ ಬಸ್​ಗಳು ಎಂದಿನಂತೆ ಸಂಚರಿಸುತ್ತಿವೆ. 1 ತಿಂಗಳಲ್ಲಿ 46.67 ಲಕ್ಷ ಮಹಿಳೆಯರು ಶಕ್ತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. – ಶಶಿಧರ ವಿ.ಎಂ ವಿಭಾಗೀಯ ನಿಯಂತ್ರಣಾಧಿಕಾರಿ ಹಾವೇರಿ


    ರಾಜ್ಯ ಸರ್ಕಾರ ಘೋಷಿಸಿರುವ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಇದೀಗ ಎಲ್ಲ ತೀರ್ಥ ಕ್ಷೇತ್ರಗಳ ದರ್ಶನ ಮಾಡುತ್ತಿದ್ದಾರೆ. ಮಹಿಳಾ ನೌಕರರು ಸೇರಿದಂತೆ ಎಲ್ಲ ಮಹಿಳೆಯರಿಗೆ ಯೋಜನೆ ಬಹಳ ಅನುಕೂಲ ಮಾಡಿಕೊಟ್ಟಿದೆ. ನಾವು ಸಹ ಧರ್ಮಸ್ಥಳ ಸೇರಿ ಇತರ ಪುಣ್ಯಕ್ಷೇತ್ರ ಪ್ರವಾಸ ಮಾಡಿ ಬಂದಿದ್ದೇವೆ. – ಶ್ರೀದೇವಿ ಎ.ಎಸ್. ರಾಣೆಬೆನ್ನೂರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts