More

    ಮರಳು ತುಂಬಿದ ಟ್ಯಾಕ್ಟರ್ ಪಲ್ಟಿ, ಓರ್ವ ಸ್ಥಳದಲ್ಲಿಯೇ ಸಾವು….ಅಕ್ರಮ ದಂಧೆಗೆ ಅಮಾಯಕ ಬಲಿ?

    ವಿಜಯಪುರ: ಒಂದು ಕಡೆ ಮರಳು ಗಣಿಗಾರಿಕೆಗೆ ಗುತ್ತಿಗೆ ಕರೆಯದೇ ವಿಳಂಬ ನೀತಿ ಅನುಸರಿಸುತ್ತಿದ್ದರೆ ಇನ್ನೊಂದು ಕಡೆ ಅಕ್ರಮ ಮರಳು ದಂಧೆ ಜೋರಾಗಿಯೇ ನಡೆಯುತ್ತಿರುವುದು ಆಡಳಿತ ವರ್ಗವೇ ಪರೋಕ್ಷವಾಗಿ ದಂಧೆಗೆ ಕುಮ್ಮಕ್ಕು ನೀಡಿದಂತಾಗಿದೆ !
    ಹೌದು, ಬೇಸಿಗೆ ಹಿನ್ನೆಲೆ ಡೋಣಿ ನದಿ ಬತ್ತಿ ಹೋಗಿದ್ದು ದೇವರಹಿಪ್ಪರಗಿ ಹಾಗೂ ಕಲಕೇರಿ ಭಾಗದಲ್ಲಿ ಮರಳು ಗಣಿಗಾರಿಕೆ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರು ಪೊಲೀಸ್ ಇಲಾಖೆ ಗಮನಕ್ಕೆ ತಂದಿದ್ದರೂ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದರು. ಇದೀಗ ಮರಳು ಸಾಗಾಟ ವೇಳೆ ಟ್ರಾೃಕ್ಟರ್ ಪಲ್ಟಿಯಾಗಿ ಓರ್ವ ಅಸುನೀಗಿದ್ದು, ಇದರ ಹೊಣೆ ಅಧಿಕಾರಿ ವರ್ಗವೇ ಹೊರಬೇಕಲ್ಲವೇ? ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ ಪ್ರಶ್ನಿಸಿದ್ದಾರೆ.
    ಏನಿದು ಅವಘಡ?
    ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಸುಕಿನ ಜಾವ ಮರಳು ತುಂಬಿದ ಟ್ರಾೃಕ್ಟರ್ ಪಲ್ಟಿಯಾಗಿ ಓರ್ವ ಅಸುನೀಗಿದ್ದಾನೆ. ಮೃತ ಯುವಕನನ್ನು ಮಹೇಶ ತಳವಾರ (22) ಎಂದು ಗುರುತಿಸಲಾಗಿದೆ. ಅಂಬಳನೂರ ಬಳಿಯ ಡೋಣಿ ನದಿಯಿಂದ ಟ್ರಾೃಕ್ಟರ್‌ನಲ್ಲಿ ಮರಳು ಸಾಗಿಸುತ್ತಿದ್ದ ಸಂದರ್ಭ ಕೆಸರಟ್ಟಿ ಕ್ರಾಸ್ ಬಳಿ ಟ್ರಾೃಕ್ಟರ್ ಪಲ್ಟಿಯಾಗಿದೆ. ಟ್ರಾೃಕ್ಟರ್‌ನಲ್ಲಿದ್ದ ಮಹೇಶ ಕೆಳಗೆ ಬಿದ್ದಿದ್ದು, ಆತನ ಮೇಲೆ ಮರಳು ತುಂಬಿದ ಟ್ರೇಲರ್ ಬಿದ್ದಿದೆ. ಪರಿಣಾಮ ಮಹೇಶ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಘಟನೆಗೆ ಅಕ್ರಮ ಮರಳು ದಂಧೆಯೇ ಕಾರಣ ಎನ್ನಲಾಗಿದ್ದು, ಪೊಲೀಸ್ ಇಲಾಖೆ ಮಾತ್ರ ಇನ್ನೂ ತನಿಖೆ ಕೈಗೊಂಡಿರುವುದಾಗಿ ಪ್ರತಿಕ್ರಿಯಿಸಿದೆ.
    ಕೆಆರ್‌ಎಸ್ ಪಕ್ಷ ಗಮನ ಸೆಳೆದಿತ್ತು:
    ಕೆಲ ದಿನಗಳ ಹಿಂದೆ ದೇವರಹಿಪ್ಪರಗಿ ಹಾಗೂ ಕಲಕೇರಿ ವ್ಯಾಪ್ತಿಯಲ್ಲಿ ಮರಳು ದಂಧೆ ನಡೆದಿರುವ ಬಗ್ಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಇಲಾಖೆ ಗಮನಕ್ಕೆ ತಂದಿದ್ದು ಮಾತ್ರವಲ್ಲ ಲಿಖಿತವಾಗಿ ಮನವಿ ಕೂಡ ಸಲ್ಲಿಸಿತ್ತು. ಮರಳು ದಂಧೆ ಸ್ಥಳಕ್ಕೆ ತೆರಳಿದ್ದ ಕೆಆರ್‌ಎಸ್ ಪಕ್ಷದ ಯುವ ಘಟಕದ ಉಪಾಧ್ಯಕ್ಷ ಮಹಿಬೂಬ ತಾಂಬೋಳಿಯನ್ನು ಸಹ ದಂಧೆ ಕೋರರು ಹಿಡಿದುಕೊಂಡಿದ್ದು, ಕೂಡಲೇ ಪೊಲೀಸ್ ಇಲಾಖೆಗೆ ಕರೆ ಮಾಡಲಾಗಿ ಪೊಲೀಸರು ಭೇಟಿ ನೀಡಿ ತಾಂಬೋಳಿಯನ್ನು ಬಿಡಿಸಿದ್ದರೆಂದು ಶಿವಾನಂದ ಯಡಹಳ್ಳಿ ತಿಳಿಸುತ್ತಾರೆ. ಅಕ್ರಮ ದಂಧೆ ಕೋರರು ಜೀವ ಬೆದರಿಕೆ ಹಾಕುವ ಮಟ್ಟಿಗೆ ಬೆಳೆದು ನಿಂತಿದ್ದು, ಇದರ ಹಿಂದೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೈವಾಡ ಇಲ್ಲದಿಲ್ಲ. ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದಂಧೆಗೆ ಬ್ರೇಕ್ ಹಾಕಬೇಕೆಂದು ಶಿವಾನಂದ ಯಡಹಳ್ಳಿ ಒತ್ತಾಯಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts