More

    ವಿದೇಶದಿಂದ ಬಂದ 312 ಜನರ ಮೇಲೆ ನಿಗಾ : ಜಿಲ್ಲಾಧಿಕಾರಿ ರಾಕೇಶ್‌ಕುಮಾರ್

    ತುಮಕೂರು: ವಿದೇಶಗಳಿಂದ ಇತ್ತೀಚೆಗೆ ವಾಪಸಾಗಿರುವ 312 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕರೊನಾ ಪ್ರಕರಣ ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಖಚಿತ ಪಡಿಸಿದರು.

    ನಗರದ ಡಿಎಚ್‌ಒ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೋಂಕು ತಡೆಯುವ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿದರು. ಹೋಂ ಕ್ವಾರಂಟೈನ್‌ನಲ್ಲಿರುವವರು ಯಾವುದೇ ಕಾರಣಕ್ಕೂ ಮನೆಬಿಟ್ಟು ಹೊರ ಬರಬಾರದು. ಬಂದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಆರೋಗ್ಯ ಇಲಾಖೆ ಹೊರಡಿಸಿರುವ ‘ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಿ’ ಎಂಬ ಕರಪತ್ರದೊಂದಿಗೆ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಮನೆ-ಮನೆಗೆ ಭೇಟಿ ನೀಡಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಪಾಲಿಕೆ ಹಾಗೂ ನಗರ, ಪಟ್ಟಣ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಕರೊನಾ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸಲಾಗುತ್ತಿದೆ, ಈ ಬಗ್ಗೆ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.
    ಸಭೆಯಲ್ಲಿ ಜಿಪಂ ಸಿಇಒ ಶುಭಾ ಕಲ್ಯಾಣ, ಎಸ್‌ಪಿ ಕೆ. ವಂಶಿಕೃಷ್ಣ, ಎಡಿಸಿ ಚನ್ನಬಸಪ್ಪ, ಹಿರಿಯ ಅಧಿಕಾರಿಗಳು ಇದ್ದರು.

    ಸಕಾಲದಲ್ಲಿ ಪಡಿತರ ವಿತರಣೆ: ಮಾರ್ಚ್ ತಿಂಗಳ ಪಡಿತರ ಈಗಾಗಲೇ ಶೇ.83ರಷ್ಟು ವಿತರಣೆ ಮಾಡಲಾಗಿದೆ. ಉಳಿದ ದಿನಸಿಯನ್ನು ಮುಂದಿನ ಎರಡು ದಿನದಲ್ಲಿ ವಿತರಿಸಲು ಸೂಚಿಸಲಾಗಿದೆ. ಏಪ್ರಿಲ್ ತಿಂಗಳ ಪಡಿತರವನ್ನು ಸಕಾಲದಲ್ಲಿ ವಿತರಿಸಲು ಸೂಚಿಸಲಾಗಿದ್ದು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಿಲ್ಲ ಎಂದು ಜಿಲ್ಲಾವಾಸಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಭರವಸೆ ನೀಡಿದ್ದಾರೆ.

    ಕರೊನಾ ಬಗ್ಗೆ ಮಾಹಿತಿಗೆ: ಜಿಲ್ಲಾ ಸಹಾಯವಾಣಿ ಕೇಂದ್ರದ ಆರೋಗ್ಯ ಸಹಾಯವಾಣಿ 0816 2252936ಕ್ಕೆ ಹಾಗೂ 9449843179, 9449843064 ಸಂಪರ್ಕಿಸಬಹುದು. ಮುಂಜಾಗ್ರತಾ ಕ್ರಮವಾಗಿ ಸೋಮವಾರದಿಂದಲೇ ಜಾರಿಗೆ ಬರುವಂತೆ ಎಲ್ಲ ಸಾರ್ವಜನಿಕರ ಸಾರಿಗೆಯನ್ನು ರದ್ದುಪಡಿಸಲಾಗಿದೆ. ಸೋಮವಾರ ಎರಡು ಖಾಸಗಿ ಬಸ್‌ಗಳನ್ನು ಆರ್‌ಟಿಒ ವಶಪಡಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts