More

    ಡಿಸಿ ಕಚೇರಿ ಆವರಣಕ್ಕೆ ಟೊಯೋಟಾ ಕಿಲೋಸ್ಕರ್ ಮೋಟಾರ್ಸ್ ಕಾರ್ವಿುಕ ಮುಷ್ಕರ ಸ್ಥಳಾಂತರ

    ಬಿಡದಿ: ಟೊಯೋಟಾ ಕಿಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ಕಾರ್ವಿುಕರ ಸಂಘದ ಪ್ರತಿಭಟನೆ 39ನೇ ದಿನವೂ ಮುಂದುವರಿದಿದ್ದು, ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಡಿ.18ರ ಶುಕ್ರವಾರದಂದು ಡಿಸಿ ಕಚೇರಿ ಅಂಗಳಕ್ಕೆ ಹೋರಾಟ ಸ್ಥಳಾಂತರವಾಗುವ ಲಕ್ಷಣ ಕಂಡುಬಂದಿದೆ.

    ಸಮಸ್ಯೆ ಬಗೆಹರಿಯದ ಕಾರಣ ಜಿಲ್ಲಾಡಳಿತದ ಮೊರೆ ಹೋಗುವ ಬಗ್ಗೆ ಚಿಂತಿಸಿರುವ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ.

    ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 432 ಎಕರೆ ಪ್ರದೇಶದಲ್ಲಿ 1997ರಿಂದ ಟಿಕೆಎಂ ಕಾರ್ಯನಿರ್ವಹಿಸುತ್ತಿದ್ದು, ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿದೆ. ಇದಕ್ಕೆ ಸಂಬಂಧಿಸಿದ 190ಕ್ಕೂ ಹೆಚ್ಚು ಕಂಪನಿಗಳು ಈ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿವೆ. ಸಂಸ್ಥೆಯಲ್ಲಿ 3500 ಕಾಯಂ ಮತ್ತು 6500ಕ್ಕೂ ಹೆಚ್ಚು ಗುತ್ತಿಗೆ ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ.

    ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ವಿುಕರು ನಡೆಸುತ್ತಿರುವ ಮುಷ್ಕರ 39 ದಿನ ತಲುಪಿದ್ದರೂ, ಇತ್ತ ಕಾರ್ವಿುಕರು ಪಟ್ಟು ಬಿಡುತ್ತಿಲ್ಲ, ಅತ್ತ ಟಿಕೆಎಂ ಆಡಳಿತ ಮಂಡಳಿ ಮಾತುಕತೆಗೆ ಮುಂದಾಗುತ್ತಿಲ್ಲ. ಕಂಪನಿ ಲಾಕ್​ಔಟ್ ಅಸ್ತ್ರ ಬಳಸಿ, ಮುಚ್ಚಳಿಕೆ ಬರೆದುಕೊಟ್ಟು ಕೆಲಸ ಮಾಡುವವರಿಗೆ ಕೆಲಸಕ್ಕೆ ಬರಲು ಅನುಮತಿ ನೀಡಿದರೂ ಕಾರ್ವಿುಕರು ಅಮಾನತು ಆದೇಶ ಹಿಂಪಡೆಯಬೇಕು, ಕಾರ್ವಿುಕರಿಗೆ ಆಗುತ್ತಿರುವ ಶೋಷಣೆ ನಿಲ್ಲಬೇಕು ಮತ್ತು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಪಟ್ಟು ಹಿಡಿದು ಹೋರಾಟ ಮುಂದುವರಿಸಿದ್ದಾರೆ.

    ಈ ನಡುವೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥನಾರಾಯಣ, ಸ್ಥಳೀಯ ಶಾಸಕ ಎ. ಮಂಜುನಾಥ್, ಕಾರ್ವಿುಕ ಇಲಾಖೆ ಅಧಿಕಾರಿಗಳು ಮತ್ತು ಟಿಕೆಎಂ ಆಡಳಿತ ಮಂಡಳಿ ಹಾಗೂ ಕಾರ್ವಿುಕ ಮುಖಂಡರ ಜತೆ ನಡೆಸಿದ ಸಂಧಾನ ಸಭೆಯೂ ಯಶಸ್ವಿಯಾಗಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಮಸ್ಯೆ ಬಗೆಹರಿಸಿ, ಕಾರ್ವಿುಕರು ಮತ್ತು ಕಂಪನಿ ಹಿತ ಕಾಯುವಂತೆ ಕಾರ್ವಿುಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

    ಸರ್ಕಾರ ಪ್ರತಿನಿಧಿ ನೇಮಿಸಲಿ

    ಒಟ್ಟಾರೆ ಮುಷ್ಕರ ಹೀಗೆ ಮುಂದುವರಿದರೆ ಕಾರ್ವಿುಕರನ್ನೇ ಆಶ್ರಯಿಸಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಕಾರ್ವಿುಕರನ್ನು ನಂಬಿ ಬಂಡವಾಳ ಹೂಡಿರುವ ಕಂಪನಿ ಉತ್ಪಾದನೆ ಮೇಲೆ ಗಂಬೀರ ಪರಿಣಾಮ ಬೀರಲಿದೆ. ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪ್ರತಿನಿಧಿಯೊಬ್ಬರನ್ನು ನೇಮಿಸಿದರೆ ಇಬ್ಬರ ನಡುವೆ ಸಾಮರಸ್ಯ ಕಾಪಾಡಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

    ಎರಡು ಬಾರಿ ಲಾಕೌಟ್

    ಸಂಸ್ಥೆ ಆರಂಭವಾದಾಗಿನಿಂದ ಇದುವರೆಗೆ 2 ಬಾರಿ ಲಾಕೌಟ್ ಘೋಷಿಸಿದೆ. 2014ರಲ್ಲಿ ವೇತನ ಪರಿಷ್ಕರಣೆ ವಿಷಯವಾಗಿ ಕಾರ್ವಿುಕರು ಪ್ರತಿಭಟನೆ ನಡೆಸಿದ್ದರು. ಆಗ 36 ದಿನ ಹಾಗೂ ಈಗ 39 ದಿನಗಳ ಸುದೀರ್ಘ ಹೋರಾಟದಲ್ಲಿ ಕಂಪನಿ ಲಾಕೌಟ್ ಘೊಷಿಸಿತ್ತು.

    ಉದ್ಯಮಿಗಳ ಆತಂಕ

    ಟಿಕೆಎಂನಂತಹ ಬಹುರಾಷ್ಟ್ರೀಯ ಕಂಪನಿಗಳು ಉದ್ಯಮಸ್ನೇಹಿ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ. ಕಾರ್ವಿುಕರ ಹೋರಾಟ, ಕಂಪನಿ ಲಾಕೌಟ್​ನಂತಹ ವಿಷಯಗಳಿಂದ ದೊಡ್ಡ ಕಂಪನಿಗಳ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತವೆ. ಅಷ್ಟೆ ಅಲ್ಲದೆ ಕಂಪನಿಗಳು

    ಇಲ್ಲಿಂದ ನಿರ್ಗಮಿಸುವ ಸಾಧ್ಯತೆ ಹೆಚ್ಚಾಗಲಿವೆ. ಹಾಗಾಗಿ ಸರ್ಕಾರ ಸಮಸ್ಯೆ ಬಗೆಹರಿಸಲು ಮುಂದಾದರೆ ಮಾತ್ರ ಗೊಂದಲಕ್ಕೆ ತೆರೆ ಎಳೆಯಬಹುದು ಎಂಬುದು ಉದ್ಯಮಿಯೊಬ್ಬರ ಅಭಿಪ್ರಾಯವಾಗಿದೆ.

    ಕಾರ್ವಿುಕರ ಸಮಸ್ಯೆ ಬಗೆಹರಿಸುವಂತೆ ನಡೆಸುತ್ತಿರುವ ಹೋರಾಟಕ್ಕೆ ಕಂಪನಿ ಆಡಳಿತ ಮಂಡಳಿ ವತಿಯಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ. ಕಾರ್ವಿುಕರಿಗೆ ನ್ಯಾಯ ಒದಗಿಸುವಂತೆ ಜಿಲ್ಲಾಡಳಿತದ ಮೊರೆ ಹೋಗುವ ಅನಿವಾರ್ಯ ನಮ್ಮದಾಗಿದೆ. ಹಾಗಾಗಿ ಡಿ.18ರ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಪ್ರತಿಭಟನೆ ಸ್ಥಳಾಂತರ ಮಾಡಿ ಮನವಿ ಸಲ್ಲಿಸಲಾಗುವುದು.

    | ಬಸವರಾಜ್ ಹವಲ್ದಾರ್ ಜಂಟಿ ಕಾರ್ಯದರ್ಶಿ, ಟಿಕೆಎಂ ಕಾರ್ವಿುಕ ಸಂಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts