More

    ನರೇಗಲ್ಲ ಪ.ಪಂ.ಗೆ ಅಕ್ಕಮ್ಮ ಅಧ್ಯಕ್ಷೆ

    ನರೇಗಲ್ಲ: ನರೇಗಲ್ಲ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅಕ್ಕಮ್ಮ ಮಣ್ಣೊಡ್ಡರ ಹಾಗೂ ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಕೋರಾಧಾನ್ಯಮಠ ಗುರುವಾರ ಆಯ್ಕೆಯಾದರು.

    17 ಸದಸ್ಯ ಬಲದ ನರೇಗಲ್ಲ ಪ.ಪಂ.ನಲ್ಲಿ 12 ಬಿಜೆಪಿ ಸದಸ್ಯರಿದ್ದು ಸ್ಪಷ್ಟ ಬಹುಮತ ಹೊಂದಿದೆ. ಉಳಿದಂತೆ ಮೂವರು ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹೀಗಾಗಿ 16ನೇ ವಾರ್ಡ್​ನ ಪರಿಶಿಷ್ಟ ಜಾತಿ ಮೀಸಲಾತಿಯಿಂದ ಆಯ್ಕೆಯಾಗಿದ್ದ ಅಕ್ಕಮ್ಮ ಮಣ್ಣೊಡ್ಡರ ಹಾಗೂ 17ನೇ ವಾರ್ಡ್​ನ ಸಾಮಾನ್ಯ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದ ಕುಮಾರಸ್ವಾಮಿ ಕೋರಧಾನ್ಯಮಠ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಅಶೋಕ ಕಲಘಟಗಿ ತಿಳಿಸಿದ್ದಾರೆ.

    ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಅಭಿವೃದ್ಧಿ ಹೊಂದುತ್ತಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆ ಯಶಸ್ವಿ ಪಥದಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಎರಡು ವರ್ಷದಲ್ಲಿ ಎರಡು ಬಾರಿ ಪ್ರವಾಹ ಬಂದರೂ ಎದೆಗುಂದದೆ ಕಷ್ಟದಲ್ಲಿರುವ ಜನರನ್ನು ರಕ್ಷಿಸುವ ಕಾರ್ಯವನ್ನು ನಮ್ಮ ಸರ್ಕಾರಗಳು ಮಾಡಿವೆೆ. ಅಲ್ಲದೆ, ಕರೊನಾ ವೈರಸ್ ಮಹಾಮಾರಿಯಿಂದ ಉಂಟಾದ ದೊಡ್ಡ ಪ್ರಮಾಣದ ನಷ್ಟವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎದುರಿಸಿವೆ. ಸಂಕಷ್ಟದ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಅವರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುವ ಮೂಲಕ ದೇಶದ ಜನರ ಆರೋಗ್ಯವನ್ನು ಕಾಪಾಡಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉಜ್ವಲ ಯೋಜನೆ ಮೂಲಕ ಮಹಿಳೆಯರ ಆರೋಗ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ’ ಎಂದರು.

    ಶಾಸಕ ಕಳಕಪ್ಪ ಬಂಡಿ ಮಾತನಾಡಿ, ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಪಕ್ಷಭೇದ ಮರೆತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕು. ಅಧಿಕಾರ ಎಂದೂ ಶಾಶ್ವತವಲ್ಲ, ಅಧಿಕಾರ ಒಲಿದು ಬಂದಾಗ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಅವಿರೋಧ ಆಯ್ಕೆಗೆ ಶ್ರಮಿಸಿದ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನರೇಗಲ್ಲ ಪಟ್ಟಣಕ್ಕೆ ನಾನು ಹಾಗೂ ಸಂಸದರಾದ ಶಿವಕುಮಾರ ಉದಾಸಿ ಅವರು ಜತೆಗೂಡಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

    ಪ.ಪಂ. ಸದಸ್ಯ ಶ್ರೀಶೈಲಪ್ಪ ಬಂಡಿಹಾಳ, ಫಕೀರಪ್ಪ ಮಳ್ಳಿ, ಫಕೀರಪ್ಪ ಬಂಬಲಾಪುರ, ಮಲ್ಲಿಕಸಾಬ್ ರೋಣದ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಈರಪ್ಪ ಜೋಗಿ, ವಿಜಯಲಕ್ಷ್ಮೀ ಚಲವಾದಿ, ಜ್ಯೋತಿ ಪಾಯಪ್ಪಗೌಡ್ರ, ವಿಶಾಲಾಕ್ಷಿ ಹೊಸಮನಿ, ಸುಮಿತ್ರಾ ಕಮಲಾಪೂರ, ಮಂಜುಳಾ ಹುರಳಿ, ಮುತ್ತಣ್ಣ ಕಡಗದ, ಉಮೇಶ ಸಂಗನಾಳಮಠ, ಬಸವರಾಜ ವಂಕಲಕುಂಟಿ, ನಿಂಗಪ್ಪ ಕಣವಿ, ಬಸವರಾಜ ಕೊಟಗಿ, ಶಶಿಧರ ಸಂಕನಗೌಡ್ರ, ಮುತ್ತಣ್ಣ ಲಿಂಗನಗೌಡ್ರ, ರವಿ ಬಿದರೂರ, ಯಲ್ಲಪ್ಪ ಮಣ್ಣೊಡ್ಡರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

    ಅಭಿವೃದ್ಧಿಯ ಕನಸು ಬಿಚ್ಚಿಟ್ಟ ಅಕ್ಕಮ್ಮ: ನರೇಗಲ್ಲ ಪಟ್ಟಣದ ಅಭಿವೃದ್ಧಿಯ ಕನಸು ಬಿಚ್ಚಿಟ್ಟ ನೂತನ ಅಧ್ಯಕ್ಷೆ ಅಕ್ಕಮ್ಮ ಮಣ್ಣೊಡ್ಡರ, ನರೇಗಲ್ಲ ಪಟ್ಟಣ ಸೇರಿದಂತೆ ಐದು ಮಜರೆ ಗ್ರಾಮಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು. ಅಲ್ಲದೆ, ರೈತರು, ಸಂಘ, ಸಂಸ್ಥೆಯವರು ಸೇರಿಕೊಂಡು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದ ಹಿರೇಕೆರೆಗೆ ಶಾಶ್ವತ ನೀರು ತರುವ ಮೂಲಕ ಸುತ್ತಲಿನ ರೈತರಿಗೆ ಅನುಕೂಲ ಮಾಡುವ ಗುರಿ ಹೊಂದಲಾಗಿದೆ. ಬಹುದಿನಗಳಿಂದ ಅನಾಥವಾಗಿ ಬಿದ್ದಿರುವ ಆಶ್ರಯ ಮನೆಗಳಿಗೆ ಮೂಲ ಸೌಲಭ್ಯ ಒದಗಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪಟ್ಟಣದಲ್ಲಿ ಡಿಜಿಟಲ್ ಮಾದರಿಯ ಗ್ರಂಥಾಲಯ ಪ್ರಾರಂಭಿಸುವ ಉದ್ದೇಶವಿದೆ. ಪಟ್ಟಣದ ಹೊರ ಹದ್ದಿನಲ್ಲಿ ಸ್ವಾಗತ ದ್ವಾರ ನಿರ್ವಿುಸುವುದು ಸೇರಿದಂತೆ ಸಾರ್ವಜನಿಕರ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ನರೇಗಲ್ಲ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts