More

    ನಂದಿಗಿರಿಯಲ್ಲಿ ಪ್ರವಾಸಿಗರ ಸುತ್ತಾಟ : ಪ್ರವಾಸೋದ್ಯಮ ಚಟುವಟಿಕೆ ಚೇತರಿಕೆ

    ಚಿಕ್ಕಬಳ್ಳಾಪುರ: ಹಲವು ತಿಂಗಳುಗಳ ಬಳಿಕ ‘ಕರ್ನಾಟಕದ ಊಟಿ ನಂದಿ ಗಿರಿಧಾಮ’ ಪ್ರವೇಶಕ್ಕೆ ಬುಧವಾರದಿಂದ ಅವಕಾಶ ನೀಡಲಾಗಿದೆ. ಮೊದಲ ದಿನ ಪ್ರವಾಸಿಗರು ಭೇಟಿ ವಿರಳವಾಗಿತ್ತಾದರೂ ಹಂತ ಹಂತವಾಗಿ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.

    ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಬ್ರಹ್ಮಗಿರಿಯಲ್ಲಿ ರಸ್ತೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಇದೀಗ 80 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯನ್ನು ಮರು ಅಭಿವೃದ್ಧಿಪಡಿಸಿದ್ದು ಬುಧವಾರದಿಂದ ಜನರ ಭೇಟಿಗೆ ಅವಕಾಶ ನೀಡಲಾಗಿದೆ.
    ವಿವಿಧೆಡೆಯಿಂದ ದಂಪತಿ, ನೌಕರರು ಸೇರಿದಂತೆ ಪ್ರವಾಸಿಗರು ಬೆಟ್ಟದ ಮೇಲೆ ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಮುಂಜಾಗ್ರತಾ ಕ್ರಮವಾಗಿ ಎಂದಿನಂತೆ ನಂದಿ ಗಿರಿಧಾಮದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಗಿರಿಧಾಮದ ತಪ್ಪಲಿನಲ್ಲಿನ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡಿ ಒಳಗೆ ಬಿಡಲಾಯಿತು.
    ಮಾಸ್ಕ್ ಧರಿಸುವಿಕೆ, ಅಂತರ ಕಾಪಾಡಿಕೊಳ್ಳುವಿಕೆ ಸೇರಿ ಕರೊನಾ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜತೆಯಲ್ಲಿಯೇ ಸ್ವಚ್ಛತೆ, ಸುರಕ್ಷತೆ ಆದ್ಯತೆ ನೀಡಲು ಸೂಚಿಸಲಾಯಿತು.

    ಆದಾಯ ಖೋತಾ: ರಸ್ತೆಯ ಸಂಪರ್ಕ ಕಡಿತದಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರಿಂದ ಗಿರಿಧಾಮದಿಂದ ಪ್ರವಾಸೋದ್ಯಮ ಇಲಾಖೆಗೆ ಬರಬೇಕಾದ ಕೋಟ್ಯಂತರ ರೂ. ಆದಾಯ ಖೋತಾ ಆಗಿದೆ. ಗಿರಿಧಾಮಕ್ಕೆ ರಜೆ ದಿನಗಳಲ್ಲಿ ಕನಿಷ್ಠ 10 ಸಾವಿರ, ಉಳಿದಂತೆ ಸಾಮಾನ್ಯ ದಿನಗಳಲ್ಲಿ ಕನಿಷ್ಠ 6 ಸಾವಿರ ಮಂದಿ ಭೇಟಿ ನೀಡುತ್ತಾರೆ. ತೋಟಗಾರಿಕೆ, ಲೋಕೋಪಯೋಗಿ, ಪ್ರವಾಸೋದ್ಯಮ ಮತ್ತು ಬೆಸ್ಕಾಂ ಇಲಾಖೆಯ ಕೊಠಡಿಗಳು ಇದ್ದು ನಿರಂತರವಾಗಿ ದಿನದ ಲೆಕ್ಕದಲ್ಲಿ ಆನ್‌ಲೈನ್ ಮತ್ತು ಅಫ್‌ಲೈನ್ ಬುಕ್ಕಿಂಗ್ ಮೂಲಕ ಬಾಡಿಗೆ ನೀಡಲಾಗುತ್ತದೆ. ಪ್ರವಾಸಿಗರ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ, ಕ್ಯಾಂಟಿನ್, ನಂದಿನಿ ಪಾರ್ಲರ್, ಹೋಟೆಲ್, ತಿಂಡಿ ತಿನಿಸು ಅಂಗಡಿಗಳ ಬಾಡಿಗೆ ಸೇರಿ ವಿವಿಧ ಮೂಲಗಳಿಂದ ತಿಂಗಳಿಗೆ 30 ರಿಂದ 35 ಲಕ್ಷ ರೂ. ಆದಾಯ ಬರಲಿದೆ. ಆದರೆ ಆ.25 ರಿಂದ ನ.30 ರವರೆಗೆ ಗಿರಿಧಾಮ ಸಂಪೂರ್ಣ ಬಂದ್ ಆಗಿದ್ದು 1 ಕೋಟಿ ರೂ.ಗಿಂತಲೂ ಹೆಚ್ಚು ನಷ್ಟ ಉಂಟಾಗಿದೆ ಎನ್ನಲಾಗಿದೆ, ಕಳೆದ ವರ್ಷ ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬರೋಬ್ಬರಿ 5 ತಿಂಗಳು ಆದಾಯವೇ ಬಂದಿಲ್ಲ. ಇದರಿಂದವೂ ಕೋಟ್ಯಂತರ ರೂ. ಕಳೆದುಕೊಂಡಿದೆ.

    ವಹಿವಾಟು ಚೇತರಿಕೆ ನಿರೀಕ್ಷೆ: ಪ್ರವಾಸಿಗರ ಬರದಿಂದ ಬೆಟ್ಟ ಮತ್ತು ಬೆಟ್ಟದ ತಪ್ಪಲಿನ ಹೋಟೆಲ್, ತಿಂಡಿ ತಿನಿಸಗಳ ವ್ಯಾಪಾರ ಆದಾಯವಿಲ್ಲದೇ ಸೊರಗಿ ಹೋಗಿದ್ದು ಇದೀಗ ಮರು ಪ್ರಾರಂಭದೊಂದಿಗೆ ಮಾಲೀಕರು ವಹಿವಾಟು ಚೇತರಿಕೆ ಕಾಣುವ ನಿರೀಕ್ಷೆಯಲ್ಲಿದ್ದಾರೆ. ಕರೊನಾ ಸೋಂಕಿನ ನಿರ್ಬಂಧ, ಗಿರಿಧಾಮದ ಪ್ರವೇಶ ನಿಷೇಧದಿಂದ ವ್ಯಾಪಾರ ಸ್ಥಗಿತಗೊಂಡಿದ್ದು ಆದಾಯ ಇಲ್ಲದರ ನಡುವೆ ಕಾರ್ಮಿಕರಿಗೆ ಕೂಲಿ, ನಿರ್ವಹಣೆ ಸೇರಿ ಆರ್ಥಿಕ ವೆಚ್ಚಗಳ ಹೊರೆ ಕಾಡಿದ್ದು ಕೆಲಸವಿಲ್ಲದೇ ಸಿಬ್ಬಂದಿ ಊರಿಗೆ ಮರಳಿದ್ದರು. ಪ್ರವಾಸಿಗರು ಇತ್ತ ಮುಖ ಮಾಡುತ್ತಿರುವುದರಿಂದ ಎಂದಿನಂತೆ ಮತ್ತೆ ವಹಿವಾಟು ನಡೆಯುವ ನಿರೀಕ್ಷೆ ಹೊಂದಲಾಗಿದೆ.

    ಇಲಾಖೆಯ ಸರಾಸರಿ ಆದಾಯ ಲೆಕ್ಕ
    *ಪ್ರವೇಶ ಶುಲ್ಕ ತಿಂಗಳಿಗೆ 23 ಲಕ್ಷ ರೂ.
    *ಕೊಠಡಿಗಳ ಆನ್‌ಲೈನ್ ಬುಕ್ಕಿಂಗ್ 2 ಲಕ್ಷ ರೂ.
    *ಕ್ಯಾಂಟಿನ್ ನಿಂದ 2.10 ಲಕ್ಷ ರೂ.
    *ನಂದಿನಿ ಪಾರ್ಲರ್‌ಗಳಿಂದ 25 ಸಾವಿರ ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts