More

    ಬರ ಪೀಡಿತ ಹಳ್ಳಿಗಳಿಗೆ ನವಯುಗ ಆರಂಭ – ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಣ್ಣನೆ

    ವಿಜಯವಾಣಿ ಸುದ್ದಿಜಾಲ ಹೊಸಪೇಟೆ
    ಏತನೀರಾವರಿ ಯೋಜನೆಯಿಂದ ತಾಲೂಕಿನ ದಕ್ಷಿಣದ ಭಾಗದ ಗ್ರಾಮಗಳಿಗೆ ನೀರಿನ ಸೌಲಭ್ಯದಿಂದ ಹೊಸಯುಗ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.

    ತಾಲೂಕಿನ ತಳವಾರಘಟ್ಟ ಬಳಿ ಕರ್ನಾಟಕ ನೀರಾವರಿ ನಿಗಮದಿಂದ ತುಂಗಭದ್ರಾ ನದಿಯಿಂದ 22 ಕೆರೆಗಳಿಗೆ ನೀರು ತುಂಬಿಸುವ ಪಾಪಿನಾಯಕನಹಳ್ಳಿ ಏತನೀರಾವರಿ ಯೋಜನೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.ಗ್ರಾಮಗಳು ಬರಗಾಲ ಹಾಗೂ ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವಂತ ಸ್ಥಿತಿ ಇತ್ತು. ಪಾಪಿನಾಯಕನಹಳ್ಳಿ ಏತನೀರಾವರಿಯಿಂದ ತುಂಗಭದ್ರೆ ಹರಿಯಲಿದ್ದಾಳೆ. ಕುಡಿಯುವ ನೀರಿನ ಸಮಸ್ಯೆ ನೀಗುವುದರ ಜತೆಗೆ ಕೃಷಿ ಹಸಿರಿನಿಂದ ನಳನಳಿಸಲಿದೆ ಎಂದರು.

    ಬಹುದಿನ ಕನಸು ಈಡೇರಿದೆ. ಸದ್ಯ 22 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಈ ಕೆರೆಗಳ ಮೂಲಕವೇ ನೇರವಾಗಿ ಕೃಷಿ ಭೂಮಿಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು. ವಿಜಯನಗರ ಕ್ಷೇತ್ರದ ದಕ್ಷಿಣ ಭಾಗದ ರೈತರು ಏತನೀರಾವರಿ ಯೋಜನೆ ಹಲವು ವರ್ಷಗಳ ಬೇಡಿಕೆಯಾಗಿತ್ತು. ಏತನೀರಾವರಿ ಬಹು ಗ್ರಾಮಗಳಿಗೆ ತಲುಪಲು ಅತಿ ಉದ್ದದ ಪೈಪ್ ಸಂಪರ್ಕ ಕಲ್ಪಿಸಲು ಕಷ್ಟ ಎಂದು ಪರಿಗಣಿಸಲಾಗಿತ್ತು. ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಿ ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಒಪ್ಪಿಸಲಾಯಿತು. ಕೊರೊನಾ ಸಂದರ್ಭದಲ್ಲಿ ವಿಡಿಯೋ ಸಂವಾದದ ಮೂಲಕ ಏತನೀರಾವರಿ ಕಾಮಗಾರಿಗೆ ಚಾಲನೆ ನೀಡಿದ್ದರು ಎಂದು ಸ್ಮರಿಸಿದರು.

    ಬರ ಪೀಡಿತ ಹಳ್ಳಿಗಳಿಗೆ ನವಯುಗ ಆರಂಭ - ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಣ್ಣನೆ
    ಹೊಸಪೇಟೆ ತಾಲೂಕಿನ ತಳವಾರಘಟ್ಟ ಬಳಿ ಕರ್ನಾಟಕ ನೀರಾವರಿ ನಿಗಮದಿಂದ ನಿರ್ಮಿಸಿರುವ ಜಾಕ್‌ವೆಲ್‌ನಲ್ಲಿ ಪಾಪಿನಾಯಕನಹಳ್ಳಿ ಏತನೀರಾವರಿ ಯೋಜನೆಗೆ ಸಚಿವ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಲಿವರ್ ಎಳೆಯುವ ಮೂಲಕ ಚಾಲನೆ ನೀಡಿದರು. ವಿವಿಧ ಗ್ರಾಮಗಳ ರೈತರು ಇದ್ದರು.

    18 ಕೆರೆ, 4 ಜಲ ಸಂಗ್ರಹಗಾರಗಳು
    243 ಕೋಟಿ ರೂ. ವೆಚ್ಚದಲ್ಲಿ ಪಿ.ಕೆ.ಹಳ್ಳಿ ಏತನೀರಾವರಿ ಯೋಜನೆ ದಕ್ಷಿಣ ಭಾಗದ 18 ಗ್ರಾಮದ ಕೆರೆಗಳಿಗೆ ಅನುಷ್ಠಾನಗೊಳಿಸಲು ಆರಂಭಿಸಲಾಗಿದೆ. ಇಂಗಳಗಿ, ಬೈಲುವದ್ದಿಗೇರಿ(2 ಕೆರೆ), ಪಾಪಿನಾಯಕನಹಳ್ಳಿ, ಹರಿಜನಕೇರಿ, ಲಕ್ಕಲಕುಂಟೆ, ಕಾಕುಬಾಳ, ಚಿನ್ನಾಪುರ(3), ನಲ್ಲಾಪುರ(2 ಕೆರೆ), ಭುವನಹಳ್ಳಿ, ಗಾಳೆಮ್ಮನಗುಡಿ, ಶೆಟ್ರಹಳ್ಳಿ, ಜೋಗಯ್ಯನ ಕೆರೆ, ಕೆರೋಟಿ ಕೆರೆ, ಗಾದಿಗನೂರು ಕೆರೆ, ಕಮಲಾಪುರ (ಮೆಟ್ಟಿ ಆಂಜನೇಯ ದೇವಸ್ಥಾನ ಬಳಿ), ಕಾಕುಬಾಳು ಸಂಗ್ರಹಣ ಜಲಾಶಯ, ಗಾದಿಗನೂರು ಸಂಗ್ರಹಣ ಜಲಾಶಯ, ಕೊಟಗಿನಹಾಳ್/ಧರ್ಮಸಾಗರ ಸಂಗ್ರಹಣ ಜಲಾಶಯ ಸೇರಿ ಒಟ್ಟು 18 ಕೆರೆ ಮತ್ತು 4 ಜಲ ಸಂಗ್ರಹಗಾರಗಳನ್ನು ನಿರ್ಮಿಸಲಾಗಿದೆ. 40 ಸಾವಿರ ಎಕರೆ ಜಮೀನಿಗೆ ನೀರಿನ ಸೌಲಭ್ಯ ದೊರೆಯಲಿದೆ. ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರ ಸ್ಮರಣೀಯ ಎಂದು ಸಚಿವ ಆನಂದ ಸಿಂಗ್ ತಿಳಿಸಿದರು.

    ಯೋಜನೆ ಸಹಾಯಕ ಅಭಿಯಂತರ ಯಲ್ಲಪ್ಪ, 2018ರಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ಕೈಗೊಂಡ ನಂತರ ಸರ್ಕಾರಕ್ಕೆ ಯೋಜನೆ ಕುರಿತು ಪ್ರಸ್ತಾವನೆ ಸಲ್ಲಿಸಲಾಯಿತು. ಯೋಜನೆಗೆ ಸಲ್ಲಿಸಿದ್ದ ಪ್ರಸ್ತಾವನೆಯಂತೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ಯೋಜನೆಗೆ ಕಾರ್ಯಾದೇಶವನ್ನು ನೀಡಿದ ನಂತರ ನಿಗದಿತ ಅವಧಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದಿದೆ ಎಂದರು. ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್ ಅಮಾನುಲ್ಲಾ, ವಿವಿಧ ಗ್ರಾಪಂ ಸದಸ್ಯರು, ರೈತ ಮುಖಂಡರು ಪಾಲ್ಗೊಂಡಿದ್ದರು.

    ಚುನಾವಣಾ ಸಂದರ್ಭದಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ರಾಜಕೀಯವಾಗಿ ಕಟ್ಟಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಅದು ಎಂದಿಗೂ ಸಾಧ್ಯವಿಲ್ಲ. ಟೀಕಾಕಾರರಿಗೆ ಅಭಿವೃದ್ಧಿ ಕಾರ್ಯಗಳಿಂದ ಉತ್ತರ ನೀಡಲಾಗುವುದು. ವಿಜಯನಗ ಕ್ಷೇತ್ರವೇ ನನಗೆ ರಕ್ಷಾ ಕವಚ. ಅಭಿವೃದ್ಧಿ ಕೆಲಸಗಳೇ ಆಯುಧ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಮೂಂಚೂಣಿಯಲ್ಲಿರುತ್ತೇನೆ. ಪಂಪಾ ವೀರೂಪಾಕ್ಷನ ಆರ್ಶೀವಾದವಿದೆ. ಹೀಗಾಗಿ ಟೀಕಾಕಾರರಿಗೆ ಉತ್ತರಿಸದಿರಲು ಸಂಕಲ್ಪ ಮಾಡಿದ್ದೇನೆ.
    ಆನಂದ ಸಿಂಗ್
    ಪ್ರವಾಸೋದ್ಯಮ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts