ದಿಸ್ಪುರ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಈಶಾನ್ಯ ಭಾಗವಾದ ಅಸ್ಸಾಂನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರ ನಡುವೆ ಆತಂಕಕಾರಿ ಮಾಹಿತಿಯೊಂದು ಬಂದಿದ್ದು, ಪ್ರತಿಭಟನೆಯಿಂದಾಗಿ ಅಸ್ಸಾಂ ಪ್ರವಾಸೋದ್ಯಮ ಇಲಾಖೆ ಅಂದಾಜು 1000 ಕೋಟಿ ರೂ. ನಷ್ಟವಾಗಿದೆ ಎಂದು ಹಿರಿಯ ಅಧಿಕಾರಿಗಳೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಡಿಸೆಂಬರ್ನಿಂದ ಜನವರಿ ಆರಂಭದವರೆಗೂ ಅಸ್ಸಾಂ ಭಾಗಕ್ಕೆ ಪ್ರತಿಭಟನೆಯಿಂದಾಗಿ ತೀವ್ರ ಹೊಡೆತ ಬಿದ್ದಿದೆ ಎಂದು ಅಸ್ಸಾಂ ಪ್ರವಾಸೋದ್ಯಮ ಇಲಾಖೆಯ ಕಾರ್ಪೋರೇಶನ್ ಮುಖ್ಯಸ್ಥ ಜಯಂತ್ ಮಲ್ಲಾ ಬುರುಹಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿನ ಪರಿಸ್ಥಿತಿಯನ್ನು ಕಂಡು ಹಲವಾರು ದೇಶಗಳು ತಮ್ಮ ಪ್ರವಾಸಿಗರಿಗೆ ಪ್ರವಾಸ ಸಲಹೆಯನ್ನು ನೀಡಿದ್ದವು. ಅದರಲ್ಲೂ ಈಶಾನ್ಯ ಭಾಗದಲ್ಲಿ ಸಂಚಾರಿಸುವಾಗ ತುಂಬಾ ಎಚ್ಚವಹಿಸುವುದು ಒಳಿತು ಎಂದಿದ್ದವು. ವಿದೇಶಿ ಪ್ರವಾಸಿಗರೊಂದಿಗೆ ದೇಶೀಯ ಪ್ರವಾಸಿಗರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಹರಿದುಬರದೇ ಇರುವುದರಿಂದ ಅದರ ಪರಿಣಾಮ ಪ್ರವಾಸೋದ್ಯಮ ಇಲಾಖೆ ಮೇಲೆ ತಟ್ಟಿದೆ ಎಂದು ಬುರುಹಾ ಹೇಳಿದ್ದಾರೆ.
ಡಿಸೆಂಬರ್ನಿಂದ ಮಾರ್ಚ್ವರೆಗಿನ ಅವಧಿ ಅಸ್ಸಾಂ ಪ್ರವಾಸೋದ್ಯಮ ಇಲಾಖೆಯ ಉತ್ತುಂಗದ ಅವಧಿಯಾಗಿದೆ. ಆದರೆ, ಪ್ರತಿಭಟನೆಯಿಂದಾಗಿ ಈಗಾಗಲೇ ಡಿಸೆಂಬರ್ನಲ್ಲಿ ಸಾಕಷ್ಟು ನಷ್ಟವುಂಟಾಗಿದ್ದು, ಮುಂದಿನ ದಿನಗಳಲ್ಲೂ ಇದು ಮುಂದುವರಿದರೆ ಇನ್ನಷ್ಟು ನಷ್ಟವಾಗುವ ಸಾಧ್ಯತೆ ಇದೆ. ಫೆಬ್ರವರಿಯಿಂದಾಚೆಗೆ ಚೇತರಿಕೆ ಕಾಣುವ ವಿಶ್ವಾಸವನ್ನು ಬುರುಹಾ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)