More

    ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ…

    ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ...ಮೆಚ್ಚುಗೆಯ ಮಾತು ಯಾರಿಗೆ ಪ್ರಿಯವಲ್ಲ. ನಮ್ಮ ಬಗ್ಗೆ ಯಾರಾದರೂ ಒಳ್ಳೆಯ ಮಾತನಾಡಿದರೆ ಸಹಜವಾಗಿ ಸಂತೋಷವಾಗುತ್ತದೆ; ಮಾತ್ರವಲ್ಲ, ಅಂತಹ ಮೆಚ್ಚುಗೆಯ ಮಾತುಗಳನ್ನು ಮನಸ್ಸು ಬಯಸುತ್ತದೆ. ನಾವು ಚಿಕ್ಕವರಿದ್ದಾಗ ನಮ್ಮದು ಕೂಡುಕುಟುಂಬ. ಈಗಿನ ಹಾಗೆ ಅವರ ಪಾಡಿಗೆ ಅವರು ಎಲ್ಲೆಂದರಲ್ಲಿ ಊಟ ಮಾಡುತ್ತಿರಲಿಲ್ಲ. ಎಲ್ಲರೂ ಒಟ್ಟಿಗೇ ನಡುಮನೆಯಲ್ಲಿ ಸಾಲಾಗಿ ಊಟಕ್ಕೆ ಕೂರುತ್ತಿದ್ದೆವು. ಅಡುಗೆಮನೆಯ ಉಸ್ತುವಾರಿ ನಮ್ಮ ಅಜ್ಜಿಯದು. ಅವರಿಗೆ ಸಹಾಯಕರಾಗಿ ನಮ್ಮ ಅಮ್ಮ, ದೊಡ್ಡಮ್ಮ ಇರುತ್ತಿದ್ದರು. ಪದಾರ್ಥಗಳನ್ನು ಬಡಿಸಿದ ನಂತರ ನಾವು ಊಟ ಮಾಡಲಾರಂಭಿಸಿದ ಮೇಲೆ ಕೆಲಕ್ಷಣ ಅಜ್ಜಿ ಅಡುಗೆ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದರು, ಅಡುಗೆ ಬಗ್ಗೆ ನಾವು ಯಾರಾದರೂ ಮೆಚ್ಚುಗೆಯ ನುಡಿ ಆಡುತ್ತೇವೆಂದು. ನಾವು ಯಾರೂ ಪ್ರತಿಕ್ರಿಯಿಸದಿದ್ದರೆ ಅವರೇ ‘ಅಡುಗೆ ಹೇಗಾಯಿತೋ ಏನೋ!?’ ಎಂದು ಸ್ವಗತದ ಧಾಟಿಯಲ್ಲಿ ರಾಗವೆಳೆಯುತ್ತಿದ್ದರು. ಆಗ ನಮ್ಮಜ್ಜ ‘ಅಡುಗೆ ತುಂಬ ರುಚಿಯಾಗಿದೆ’ ಎಂದು ಹೇಳಿ ಒಂದೊಂದೇ ಪದಾರ್ಥದ ರುಚಿಯನ್ನು ಬಣ್ಣಿಸುತ್ತಿದ್ದರು. ಆಗ ನಮ್ಮಜ್ಜಿಯ ಮುಖ ಮೊರದಗಲವಾಗುತ್ತಿತ್ತು. ಅವರ ಕಣ್ಣುಗಳಲ್ಲಿ ಒಂದು ಬಗೆಯ ಧನ್ಯತಾಭಾವ ಇರುತ್ತಿತ್ತು. ಮಾಡಿದ ಕೆಲಸಕ್ಕೆ ಮೆಚ್ಚುಗೆ ನಿರೀಕ್ಷಿಸುವುದು ಮನುಷ್ಯನ ಸಹಜ ಸ್ವಭಾವ. ಅಂತಹ ಮೆಚ್ಚುಗೆ ಸಿಗದಿದ್ದಾಗ ಮನಸ್ಸು ಮಂಕಾಗುವುದೂ ಸಹಜವೇ! ಕೆಲವೊಮ್ಮೆ ನಮ್ಮ ಕ್ರಿಯೆಗಳಿಗೆ ಹೀಗೆ ಮೆಚ್ಚುಗೆಯ ಪ್ರತಿಕ್ರಿಯೆ ಸಿಗದಿದ್ದಾಗ ಅವರೇ ಸ್ವಪ್ರಶಂಸೆಯ ದಾಳ ಉರುಳಿಸಿ ಪ್ರತಿಕ್ರಿಯಿಸಲು ಒತ್ತಾಯಿಸುವುದೂ ಉಂಟು.

    ನನ್ನ ಗೆಳೆಯನೊಬ್ಬ ಭಾಷಣ ಮಾಡಿ ಕೆಳಗಿಳಿದು ಬಂದಾಗ ಆತನೇ ‘ನಾನು ಮಾತನಾಡಿದ್ದು ಚೆನ್ನಾಗಿತ್ತಲ್ಲ!?’ಎಂದು ಕೇಳುವುದುಂಟು. ಆಗ ನಾವು ಸೌಜನ್ಯಕ್ಕಾದರೂ ತಲೆಯಾಡಿಸಲೇ ಬೇಕಾಗುತ್ತದೆ. ನನ್ನ ಪರಿಚಿತರೊಬ್ಬರು ಒಮ್ಮೆ ಸುಮಾರು ಅರ್ಧ ಗಂಟೆ ಹಿಂದಿನ ದಿನ ನಡೆದ ಸಮಾರಂಭವೊಂದರ ಭಾಷಣವನ್ನು ಮೆಚ್ಚಿ ಮಾತನಾಡಿದರು. ನಾನು ಯಾರಿರಬಹುದು ಎಂದು ಕುತೂಹಲದಿಂದಿದ್ದಾಗ ಅವರು ಕಡೆಯಲ್ಲಿ ತಮ್ಮ ಹೆಸರನ್ನೇ ಹೇಳಿ ಅರ್ಧ ತಮಾಷೆ ಅರ್ಧ ಗಂಭೀರವಾಗಿ ನಮ್ಮೆಲ್ಲರ ಮೆಚ್ಚುಗೆಯನ್ನೂ ನಿರೀಕ್ಷಿಸಿದರು. ಇಂಥ ಘಟನೆಗಳು ಸಾಮಾನ್ಯ.

    ಮಾಡಿದ ಕೆಲಸಕ್ಕೆ ಅದು ಯೋಗ್ಯವಾಗಿದ್ದರೆ ಮೆಚ್ಚುಗೆಯ ಮಾತು ನಿರೀಕ್ಷಿಸುವುದು ತಪ್ಪೇನಲ್ಲ. ಆದರೆ ಇದು ಒಂದು ಗೀಳಾಗಿ ಮನಸ್ಸು ಸದಾ ಹೊಗಳಿಕೆಗೆ ಹಂಬಲಿಸುವ ಮನಸ್ಥಿತಿ ತಲುಪುವುದು ವ್ಯಕ್ತಿತ್ವದ ಅವನತಿಯ ಆರಂಭಬಿಂದು. ಆಗ ಅದು ವಿಮರ್ಶೆಯನ್ನು ತಾಳಿಕೊಳ್ಳಲಾಗದ ನೆಲೆ ತಲುಪಿ ಬೆಳವಣಿಗೆ ಸ್ಥಗಿತಗೊಳ್ಳುತ್ತದೆ. ಮೆಚ್ಚುಗೆಗೂ ಹೊಗಳಿಕೆಗೂ ಸೂಕ್ಷ್ಮವಾದ ವ್ಯತ್ಯಾಸವಿದೆ. ಮೆಚ್ಚುಗೆ ಸಹಜ ಪ್ರತಿಕ್ರಿಯೆಯಾದರೆ, ಹೊಗಳಿಕೆಗೆ ತನ್ನದೇ ಆದ ಉದ್ದೇಶವಿರುತ್ತದೆ; ಕೆಲವೊಮ್ಮೆ ಅದು ಹುನ್ನಾರದ ಅಸ್ತ್ರವಾಗಿಯೂ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಹೊಗಳಿಕೆಯಲ್ಲಿ ಅಧಿಕಾರ ಹಾಗೂ ಅಧೀನ ಸಂಸ್ಕೃತಿಯ ಸಂಬಂಧವಿರುತ್ತದೆ. ಪ್ರಭುತ್ವ ಸದಾ ಹೊಗಳಿಕೆಯನ್ನು ಬಯಸುತ್ತಿರುತ್ತದೆ, ಅಧೀನ ಮನಸ್ಸು ಹೊಗಳುವುದರ ಮೂಲಕ ಪ್ರಭುತ್ವವನ್ನು ಓಲೈಸಲು ಹಂಬಲಿಸುತ್ತಿರುತ್ತದೆ. ಇದು ಎಲ್ಲ ಕಾಲದ ಸಾಮಾಜಿಕ ವಿನ್ಯಾಸ. ಹೊಗಳಿಕೆಯ ಮಾತು ಸದಾ ಪ್ರಭುತ್ವದ ಕಿವಿ ತುಂಬುತ್ತಿರಬೇಕು. ಹಾಗೆ ಹೊಗಳಿಕೆಯ ಮಾತುಗಳನ್ನು ಕೇಳಿಸಿಕೊಳ್ಳದಿದ್ದರೆ ಪ್ರಭುತ್ವ ದಿಕ್ಕೆಡುತ್ತದೆ. ಅದಕ್ಕಾಗಿಯೇ ‘ಹೊಗಳುಭಟ್ಟ’ರನ್ನು ಅದು ನೇಮಕ ಮಾಡಿಕೊಂಡಿರುತ್ತದೆ. ಅವರಿಗೆ ಅದೇ ಕೆಲಸ. ಆ ಹೊಗಳಿಕೆಯ ಮಾತುಗಳಿಗೆ ಅರ್ಥವಿರಲೇಬೇಕೆಂದಿಲ್ಲ. ಅದು ರೂಢಿಯ ಜಾಡಿನ ಜಾರ್ಗನ್ನಾಗಿರುತ್ತದೆ. ಆದರೆ ಕೇಳಲು ಹಿತವಾಗಿರುತ್ತದೆ. ಸುಳ್ಳು ಯಾವಾಗಲೂ ಸಂಭ್ರಮಿಸುತ್ತಿರುತ್ತದೆ. ಸತ್ಯಕ್ಕೆ ತಾನೇ ಸಂಕಟ! ಆಧುನಿಕ ಸಂದರ್ಭದಲ್ಲಿಯೂ ನಮ್ಮ ನಾಯಕರು ತಮಗೆ ಪರಾಕು ಹೇಳುವ ಹಿಂಬಾಲಕರ ಪಡೆಯೊಂದನ್ನು ಸಲಹುತ್ತಿರುತ್ತಾರೆ.

    ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆ. ತುಂಬಿದ ಸಭೆ. ಅತಿಥಿಗಳೆಲ್ಲ ವೇದಿಕೆಯಲ್ಲಿದ್ದರು. ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು. ಅಷ್ಟರಲ್ಲಿ ನಾಲ್ಕಾರು ಜನ ‘ಸಾಹೇಬರು ಬರ್ತಿದಾರೆ, ದಾರಿ ಬಿಡಿ’ ಎಂದು ಹೇಳುತ್ತ ಮುಂದಿನ ಸಾಲಿನಲ್ಲಿ ಕುಳಿತಿದ್ದ ಹಿರಿಯರೊಬ್ಬರನ್ನು ಎಬ್ಬಿಸಿ ಸಾಹೇಬರು ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿದರು. ಕುತೂಹಲದಿಂದ ಸಾಹೇಬರು ಯಾರೆಂದು ನೋಡಿದರೆ ಯಾರೋ ಮರಿಪುಢಾರಿ. ಹಿಂಬಾಲಕರು ಆತನನ್ನು ‘ಸಾಹೇಬ’ನನ್ನಾಗಿಸಿದ್ದರು.

    ವಿಶಾಲವಾದ ನೆಲೆಯಲ್ಲಿ ನೋಡಿದಾಗ ಜನಸಮುದಾಯ ಭಾಷೆಯನ್ನು ‘ಆಳುವ ನೆಲೆ’ ಹಾಗೂ ‘ಅಧೀನ ನೆಲೆ’- ಹೀಗೆ ಎರಡು ನೆಲೆಗಳಲ್ಲಿ ಮಾತ್ರ ಬಳಸುವಂತೆ ತೋರುತ್ತದೆ. ದಿನನಿತ್ಯದ ಬದುಕಿನಲ್ಲಿ ನಾವೆಲ್ಲರೂ ಅಧಿಕಾರದಲ್ಲಿ ಇರುವವರನ್ನು ಕುರಿತು ಮಾತನಾಡುವಾಗ ಭಾಷೆಯನ್ನು ಬಳಸುವ ಬಗೆಯನ್ನು ಗಮನಿಸಿದರೆ ನಿಸ್ಸಂದೇಹವಾಗಿ ಅದು ಹೊಗಳಿಕೆಯ ರೂಪ ಪಡೆದುಕೊಂಡು ಬಿಟ್ಟಿರುತ್ತದೆ. ಅಧಿಕಾರ ಕೇಂದ್ರದಲ್ಲಿರುವ ವ್ಯಕ್ತಿ ಯಾರೇ ಆಗಿರಲಿ, ಆತನಿಗೆ ಅರ್ಹತೆ ಇರಲಿ ಇಲ್ಲದಿರಲಿ, ಎಂತಹ ಅಯೋಗ್ಯನಾಗಿದ್ದರೂ ಅಡ್ಡಿಯಿಲ್ಲ, ನಮ್ಮ ಭಾಷೆ ಓಲೈಸುವ ರೂಪವನ್ನು ಸಹಜವಾಗಿ ಪಡೆದುಕೊಂಡು ಬಿಡುತ್ತದೆ. ಇದು ಅಧಿಕಾರಕ್ಕೆ ಸಂಬಂಧಿಸಿ ಮಾತ್ರವಲ್ಲ, ಓಲೈಸುವ ಯಾವ ಸಂದರ್ಭವೇ ಆದರೂ ನಮ್ಮ ಭಾಷೆಯ ಬಳಕೆ ಹೊಗಳಿಕೆಯ ಹಾದಿ ಹಿಡಿಯುತ್ತದೆ. ಆಡುತ್ತಿರುವ ಮಾತುಗಳು ಸುಳ್ಳು, ನಟನೆ ಎಂದು ಗೊತ್ತಿದ್ದರೂ ಅದೇ ಸಿದ್ಧಭಾಷೆಗೆ ಜೋತು ಬೀಳುತ್ತೇವೆ. ಅಧೀನ ಮನಸ್ಥಿತಿಯ ಸ್ವರೂಪವೇ ಹಾಗಿರುತ್ತದೆ.

    ಎ.ಎನ್.ಮೂರ್ತಿರಾಯರು ಪ್ರೊ.ರಾಲೋ ಅವರ ಬಗ್ಗೆ ಹೇಳುತ್ತಿದ್ದ ಪ್ರಸಂಗವೊಂದು ಇಲ್ಲಿ ನೆನಪಾಗುತ್ತಿದೆ: ಮೂರ್ತಿರಾಯರು ವಿದ್ಯಾರ್ಥಿಯಾಗಿದ್ದಾಗ ಅವರ ಪ್ರಾಧ್ಯಾಪಕರಾದ ರಾಲೋ ವಿಷಯವೊಂದನ್ನು ನೀಡಿ ಪ್ರಬಂಧ ಬರೆಯಲು ಸೂಚಿಸಿದರಂತೆ. ಎಲ್ಲರೂ ಪ್ರಬಂಧ ಬರೆದು ಮುಗಿಸಿದ ನಂತರ ಅವರು ‘ನಿಮ್ಮ ಪ್ರಬಂಧದಲ್ಲಿ ಬಳಸಿರುವ ಗುಣವಾಚಕಗಳನ್ನು ತೆಗೆದುಬಿಡಿ’ ಎಂದು ಹೇಳಿದಾಗ ಬಹಳಷ್ಟು ವಿದ್ಯಾರ್ಥಿಗಳ ಪ್ರಬಂಧದಲ್ಲಿ ಅರ್ಧದಷ್ಟು ಕಡಿಮೆಯಾಯಿತಂತೆ. ಇದರರ್ಥ: ನಾವು ಗುಣವಾಚಕಗಳನ್ನು ಧಾರಾಳವಾಗಿ, ಔಚಿತ್ಯವರಿಯದೆ ಬಳಸುತ್ತೇವೆ. ಸಮಾರಂಭಗಳಲ್ಲಿನ ಸ್ವಾಗತ ಭಾಷಣಗಳನ್ನು ಗಮನಿಸಿ; ಎಲ್ಲ ವಲಯಗಳಲ್ಲಿ ನೀಡುವ ಬಿರುದು ಬಾವಲಿಗಳನ್ನು ಒಮ್ಮೆ ನೋಡಿ; ಜಾಹೀರಾತುಗಳ ಸ್ವರೂಪವನ್ನು ಅವಲೋಕಿಸಿ.

    ಈ ಉಪಾಧಿಯಿಂದ ಪಾರಾಗುವುದು ಹೇಗೆ? ಆರಾಧನೆ, ನಿಂದನೆ ಇವೆರಡು ರೀತಿಯ ಭಾಷೆಯ ಬಳಕೆ ಬಿಟ್ಟು ಬೇರೆ ರೀತಿ ಮಾತನಾಡುವುದು ಹೇಗೆ? ಪ್ರಸಿದ್ಧ ಲೇಖಕ ಅಲ್ಬರ್ಟ್ ಕಾಮು ತನ್ನ ಸ್ನೇಹಿತನಿಗೆ ಹೀಗೆ ಹೇಳುತ್ತಾನೆ: ‘ನೀನು ನನ್ನ ಹಿಂದೆ ಬರಬೇಡ, ನಿನಗೆ ಮಾರ್ಗದರ್ಶನ ಮಾಡುವ ಶಕ್ತಿ ನನಗಿಲ್ಲ; ನೀನು ನನ್ನ ಮುಂದೆಯೂ ಹೋಗಬೇಡ, ಏಕೆಂದರೆ ನಾನು ನಿನ್ನನ್ನು ಅನುಸರಿಸಲಾರೆ, ನನಗೆ ನನ್ನದೇ ಆದ ವ್ಯಕ್ತಿತ್ವವಿದೆ; ಇಬ್ಬರೂ ಜೊತೆಯಾಗಿ ಹೋಗೋಣ ಬಾ’. ಇದು ನಾವು ಹಿಡಿಯಬೇಕಾದ ಹಾದಿಯನ್ನು ಸೂಚಿಸುವಂತಿದೆ. ಸಮಾನ ನೆಲೆಯಲ್ಲಿ ಮಾತ್ರ ಸಂವಾದ ಸಾಧ್ಯ.

    ಗೋಪಾಲಕೃಷ್ಣ ಅಡಿಗರ ‘ಪ್ರಾರ್ಥನೆ’ ನಾನು ಇಷ್ಟಪಡುವ ಮುಖ್ಯ ಕವಿತೆಗಳಲ್ಲೊಂದು. ಹೊಗಳಿಕೆಯ, ಓಲೈಸುವ ಧಾಟಿಯ ನಿರಾಕರಣೆಯಿಂದಲೇ ಕವಿತೆ ಆರಂಭವಾಗುತ್ತದೆ.

    ‘ಪ್ರಭೂ, /ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವ/ಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ;/ ಬಾಲವಾಡಿಸಿ ಹೊಸೆದು ಹೊಟ್ಟೆ ಡೊಗ್ಗುಸಲಾಮು/ಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ/ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿ/ಜುಮ್ಮನರಸುವ ಷಂಡ ಜಿಗಣೆಯಲ್ಲ/ಕಾಲಪುಷ್ಟರ ಪೃಷ್ಟಕೊಡ್ಡಿ ಬೆನ್ನ, ಕಠಾರಿ/ಒರೆಗೆ ತುರುಕಿರುವ ಹೆಂಬೇಡಿಯಲ್ಲ.

    ತನ್ನತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ; ಮನಸ್ಸಿನ ಒಂದು ಭಾಗ ಯಾವುದೇ ಕ್ರಿಯೆಯಲ್ಲಿ ತನ್ಮಯವಾಗಿರುವಾಗ ಅದರ ಇನ್ನೊಂದು ಭಾಗ ದೂರ ನಿಂತು ಎಲ್ಲವನ್ನೂ ಅವಲೋಕಿಸಲು ಸಮರ್ಥವಾಗಿರುತ್ತದೆ. ಮನುಷ್ಯನ ಈ ‘ಸಾಕ್ಷಿಪ್ರಜ್ಞೆ’ಯೇ ಸಮಾಜದ ವಿಕಾಸಕ್ಕೆ ಕಾರಣವಾಗುವಂಥದು. ವಿಚಾರ, ವಿಮರ್ಶೆ ಇಲ್ಲದೆ ಭಾವಾವೇಶಕ್ಕೆ ಹೆಚ್ಚು ಮನ್ನಣೆ ಸಿಗುತ್ತಿರುವ ವಾತಾವರಣದಲ್ಲಿ ನಮ್ಮ ‘ಸ್ವಾಯತ್ತಪ್ರಜ್ಞೆ’ಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಅಡಿಗರು ಇಲ್ಲಿ ಪ್ರತಿಪಾದಿಸುತ್ತಿದ್ದಾರೆ. ಅಧಿಕಾರದ ಅಹಂಕಾರ ಹಾಗೂ ಹೊಗಳುಭಟ್ಟರ ಪರಾಕು ಸಾರಾಸಾರ ವಿವೇಚನೆಯ ವಿಮರ್ಶಾಪ್ರಜ್ಞೆಯನ್ನು ನಾಶಮಾಡಿಬಿಡುತ್ತದೆ; ಅಧೀನ ಸ್ಥಿತಿಗೆ ಒಳಗಾದ ಮನಸ್ಸು ‘ಸ್ವಾಯತ್ತಪ್ರಜ್ಞೆ’ಯಿಂದ ವಂಚಿತವಾಗಿ ತನ್ನತನ ಕಳೆದುಕೊಂಡು ಚಿಂತಿಸುವ ಶಕ್ತಿಗೆ ಎರವಾಗುತ್ತದೆ. ಹೀಗಾಗಿ ಜೀವನದ ಎಲ್ಲ ವಲಯಗಳಲ್ಲೂ ಸರಿತಪು್ಪಗಳನ್ನು ಗುರ್ತಿಸುವ ವಿಮರ್ಶಾಬುದ್ಧಿ ಜಾಗೃತವಾಗುವುದು ಅತ್ಯಗತ್ಯ.

    ‘ಒಂದು ತುತ್ತನ್ನು ಮೂವತ್ತೆರಡು ಸಲ ಜಗಿದು, ನುರಿಸಿ/ಜೊಲ್ಲಿಗೆ ಮಿಲಾಯಿಸುವಷ್ಟು ಆರೋಗ್ಯ/ಶಾಸ್ತ್ರದ ಮೊದಲ ಪಾಠವ ಕಲಿಸು. ಕಲಿಸದಿದ್ದರೂ ಕೂಡ/ಕಲಿತಿಲ್ಲ ಎಂಬ ನೆನಪುಳಿಸು. ಉಳ್ಳಾಗಡ್ಡೆ/ತಿಂದು ಕೊರಳೆಲ್ಲ ಕಸ್ತೂರಿಯಾಗುವುದೆಂಬ/ಭ್ರಮೆಯ ಕಳೆ. ದೊಡ್ಡ ದೊಡ್ಡ ಮಾತಿನ ಬೆಲೂನು/ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ.

    ಜಿ.ಎಚ್. ನಾಯಕರ ‘ಸಾಹಿತ್ಯದಲ್ಲಿ ವಿನಯ’ ಎಂಬ ಲೇಖನ ನೆನಪಾಗುತ್ತಿದೆ. ಅಲ್ಲಿ ಅವರು ವಿನಯವನ್ನು ನಿರ್ವಚಿಸಿ ಹೇಳುವ ಎರಡು ಸಂಗತಿಗಳು ನನಗೆ ಮುಖ್ಯವೆನ್ನಿಸಿವೆ. ಮೊದಲನೆಯದು ನಮ್ಮ ಪ್ರಜ್ಞೆ ಹೊರಗಿನ ಎಲ್ಲ ಉಪಾಧಿಗಳ ಹಂಗಿನಿಂದ ಮುಕ್ತವಾಗಿ ತನ್ನ ಸೃಜನಶೀಲ ಚೈತನ್ಯಕ್ಕೆ ಸಂಪೂರ್ಣ ಅರ್ಪಿಸಿಕೊಂಡು ಪಡೆದ ಅನುಭವಸತ್ಯವನ್ನು ಗೌರವಿಸುವುದು ಸಾಧ್ಯವಾಗಬೇಕು. ಮತ್ತೊಂದು ಅನಂತಕಾಲದ, ಅಸಂಖ್ಯಾತ ಮಾನವ ಕೋಟಿಯ ವೈವಿಧ್ಯಪೂರ್ಣವಾದ ಅನುಭವಕ್ಕೆ ವಸ್ತುವಾಗಿ ತೆರೆದುಕೊಂಡಿರುವ ಈ ಆದಿ ಅಂತ್ಯವಿಲ್ಲದ ಜೀವನಪ್ರವಾಹ ತನ್ನೊಬ್ಬನ ಮನಸ್ಸಿನಲ್ಲಿ ಅಂಕಿಸಿದ ಅನುಭವಸತ್ಯವೇ ಪರಿಪೂರ್ಣವಾಗಿದ್ದಿರಲಾರದು, ಅದು ಸಾಪೇಕ್ಷಸತ್ಯವಾಗಿದ್ದೀತು ಎಂಬ ಎಚ್ಚರದ ಅರಿವನ್ನು ಹೊಂದಿರಬೇಕು. ಇದು ವಿನಯದ ವಿನ್ಯಾಸ. ಇಂತಹ ವಿನಯ ಯಾವ ಸಮಾಜದಲ್ಲಿ ಪ್ರಕಟವಾಗುವುದಿಲ್ಲವೋ ಆ ಸಮಾಜ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮಹತ್ವದ್ದನ್ನು ಸಾಧಿಸುವ ಚೈತನ್ಯವನ್ನೇ ಕಳೆದುಕೊಂಡುಬಿಡುತ್ತದೆ.

    ಹೊಗಳಿಕೆಯ ಅಪಾಯವೆಂದರೆ ಕಳಪೆ ವ್ಯಕ್ತಿಗಳೂ ಶ್ರೇಷ್ಠರೆಂದು ಮನ್ನಣೆ ಪಡೆಯುವ ಸಾಧ್ಯತೆಯನ್ನು ಅದು ಕಲ್ಪಿಸಿಬಿಡುತ್ತದೆ. ಹೀಗಾಗಿ ಬದುಕಿನ ಎಲ್ಲ ರಂಗಗಳಲ್ಲೂ ‘ವಿಮರ್ಶಾಪ್ರಜ್ಞೆ’ ಜಾಗೃತವಾಗುವುದು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಕಠೋಪನಿಷತ್ತಿನಲ್ಲಿ ಒಂದು ಮಾತು ಬರುತ್ತದೆ: ‘ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂ/ಸ್ತಸ್ಮಾತ್ ಪರಾಙ್ ಪಶ್ಯತಿ ನಾಂತರಾತ್ಮನ್/ಕಶ್ಚಿದ್ದೀರಃ ಪ್ರತ್ಯಗಾತ್ಮಾನಮೈಕ್ಷತ್/ ಅವೃತ್ತಚಕ್ಷುರಮೃತತ್ವಮಿಚ್ಛನ್’. ಸೃಷ್ಟಿಕರ್ತ ನಮ್ಮ ಇಂದ್ರಿಯಗಳನ್ನು ಹೊರಮುಖವಾಗಿರುವಂತೆ ಮಾಡಿದ. ಹೀಗಾಗಿ ಮನುಷ್ಯ ಹೊರಜಗತ್ತನ್ನು ಕಾಣುತ್ತಾನೆಯೇ ಹೊರತು ಅಂತರಾತ್ಮವನ್ನು ಕಾಣಲಾರ. ಧೀರ ಚೇತನ ತನ್ನ ಕಣ್ಣುಗಳನ್ನು ಒಳಮುಖ ಮಾಡಿ ತನ್ನೊಳಗನ್ನು ಕಾಣಲು ಪ್ರಯತ್ನಿಸುತ್ತದೆ ಎಂಬುದು ಇದರ ಸಾರ. ‘ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ/ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ/ಅಯ್ಯೋ, ನೊಂದೆನು ಸೈರಿಸಲಾರೆನು/ಅಯ್ಯಾ ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ/ಅಯ್ಯೋ ನೊಂದೆನು ಸೈರಿಸಲಾರೆನು/ ಕೂಡಲಸಂಗಮದೇವಾ/ನೀನೆನಗೆ ಒಳ್ಳಿದನಾದಡೆ/ಎನ್ನ ಹೊಗಳತೆಗಡ್ಡ ಬಾರಾ ಧರ್ವಿು’ -ಬಸವಣ್ಣ

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts