More

    ದುಷ್ಕರ್ಮಿಗಳಿಂದ ಕಿಂಡಿ ಹಲಗೆ ತೆರವು

    ಕುಂದಾಪುರ: ಬೈಂದೂರು ತಾಲೂಕು ಹಕ್ಲಾಡಿ ಗ್ರಾಮ ತೊಪ್ಲು ಕಿಂಡಿ ಅಣೆಕಟ್ಟು ಹಲಗೆ ತೆಗೆದು ಮೀನು ಹಿಡಿಯುವ ಮೂಲಕ ನೀರಿನ ವರ್ತುಲ ಬದಲಾಯಿಸಲಾಗಿದೆ. ಕರೊನಾ ಹಿನ್ನೆಲೆ ಲಾಕ್‌ಡೌನ್‌ನಿಂದ ಬೇರೆ ಬೇರೆ ಕಡೆಯಿಂದ ಊರಿಗೆ ಬಂದವರೂ, ಸ್ಥಳೀಯರು ಸೇರಿ ಹಲಗೆ ತೆಗೆದು ಮೀನು ಹಿಡಿಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.

    ಹಲಗೆ ತೆಗೆದಿದ್ದರಿಂದ ತೊಪ್ಲು ಪ್ರದೇಶದಿಂದ ವಂಡ್ಸೆವರೆಗಿನ ಚಕ್ರಾ ನದಿ ನೀರು ಉಪ್ಪಾಗಿದೆ. ನದಿ ಪಾತ್ರದಲ್ಲಿ ಬರುವ ಬಾವಿ, ನಿರಾಶ್ರಿತ ತಾಣದ ನೀರು ಕೂಡ ಉಪ್ಪಾಗಿದೆ. ಹಕ್ಲಾಡಿ, ಹೆಮ್ಮಾಡಿ, ದೇವಲ್ಕುಂದ, ವಂಡ್ಸೆ, ಕೆಂಚನೂರು ಗ್ರಾಮ ನೀರಿನ ಸಂಕಷ್ಟಕ್ಕೊಳಗಾಗಿದೆ.

    ಅಣೆಕಟ್ಟಿನ ಸಂದುಗಳ ಹಲಗೆ ತೆಗೆದು ಅದಕ್ಕೆ ಬಲೆ ಕಟ್ಟುವ ಮೂಲಕ ಮೀನು ಹಿಡಿಯುವ ಜತೆ ಸಿಗಡಿ ಕೂಡ ಹಿಡಿಯಲಾಗುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ತಂಡೋಪತಂಡವಾಗಿ ಬಂದು ಮೀನು ಹಿಡಿಯುತ್ತಾರೆ. ಮೀನು ಹಿಡಿಯುವವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮದ ಜತೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಮೀನು ಹಿಡಿಯುವುದು ಹೀಗೆ ಮುಂದುವರಿದರೆ ಮುಂದಿನ ಬಾರಿ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವುದಕ್ಕೆ ಬಿಡೋದಿಲ್ಲ ಎಂದು ರೈತ ಸಂಘ ಎಚ್ಚರಿಸಿದೆ.

    ತೊಪ್ಲು ಕಿಂಡಿ ಅಣೆಕಟ್ಟು ಹಲಗೆ ತೆಗೆದು ನೀರು ಬಿಟ್ಟು ಮೀನು ಹಿಡಿಯುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನೀರಾವರಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತದೆ. ಬಿಸಿಲಿನ ಝಳ ಹೆಚ್ಚುತ್ತಿದ್ದು, ನೀರಿನ ಸಮಸ್ಯೆ ತಲೆದೋರುವ ಇಂತಹ ಸಂದರ್ಭದಲ್ಲಿ ಕಿಂಡಿ ಅಣೆಕಟ್ಟು ಹಲಗೆ ತೆಗೆದು ಮೀನು ಹಿಡಿಯುವ ಮೂಲಕ ನೀರಿನ ಸಮಸ್ಯೆಗೆ ಮತ್ತಷ್ಟು ಒತ್ತು ಕೊಟ್ಟಂತಾಗಿದೆ. ಹಲಗೆ ತೆಗೆದು ಮತ್ತೆ ಮೀನು ಹಿಡಿಯಲು ಮುಂದಾದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಲಾಗುತ್ತದೆ.
    | ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ

    ತೊಪ್ಲು ಕಿಂಡಿ ಅಣೆಕಟ್ಟು ಇದ್ದರೂ ರೈತರ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗುತ್ತಿಲ್ಲ. ಹಲಗೆ ಹಾಕುವುದಕ್ಕೆ ವಿಳಂಬ, ಹಲಗೆ ಹಾಕಿದ ನಂತರ ಪರಿಸರದ ಜನ ಮೀನು ಹಿಡಿಯುವುದಕ್ಕೆ ಹಲಗೆ ತೆಗೆಯುವ ಮೂಲಕ ಸಿಹಿ ನೀರಿನ ಬದಲು ಉಪ್ಪುನೀರು ಶೇಖರಣೆಯಾಗುತ್ತಿದೆ. ತೊಪ್ಲು ಕಿಂಡಿ ಅಣೆಕಟ್ಟು ಹಲಗೆ ತೆಗೆದು ಐದು ಗ್ರಾಮಗಳ ನೀರಿನ ವರ್ತುಲ ಏರುಪೇರು ಮಾಡಿದೆ. ಜಿಲ್ಲಾಡಳಿತ ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
    | ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಅಧ್ಯಕ್ಷ ಎಪಿಎಂಸಿ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts