More

    ಸ್ವಾಮೀಜಿಗಳಿಗೆಲ್ಲ ಲಿಂ. ತೋಂಟದ ಶ್ರೀಗಳು ಸ್ಪೂರ್ತಿ

    ಗದಗ: ಮಠಾಧೀಶರು ಯಾವ ರೀತಿ ಸಮಾಜಮುಖಿಯಾಗಿ ಜೀವನ ನಡೆಸಬೇಕು ಎಂಬುದಕ್ಕೆ ಮೇಲ್ಪಂಕ್ತಿ ಹಾಕಿದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ತಮ್ಮ ಸಂಪರ್ಕಕ್ಕೆ ಬಂದ ಸ್ವಾಮೀಜಿಗಳಿಗೆಲ್ಲ ಸ್ಪೂರ್ತಿಯಾಗಿ ಅವರಲ್ಲಿ ಚೈತನ್ಯ ತುಂಬುತ್ತಿದ್ದರು ಎಂದು ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ನಗರದ ತೋಂಟದಾರ್ಯ ಮಠದ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ಹಾಗೂ ಗ್ರಂಥಗಳ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ತೋಂಟದಾರ್ಯ ಮಠವಷ್ಟೇ ಅಲ್ಲದೆ, ನಾಡಿನ ವಿರಕ್ತ ಪರಂಪರೆಯು ಜಡವಾಗಿದ್ದ ಕಾಲಘಟ್ಟದಲ್ಲಿ ಪೀಠವನ್ನೇರಿದ ಶ್ರೀಗಳು ಬಸವತತ್ತ್ವದ ಬದ್ಧತೆ, ಇಚ್ಛಾಶಕ್ತಿಯಿಂದ ಶ್ರೀಮಠದ ಹಾಗೂ ಲಿಂಗಾಯತ ಧರ್ಮದ ಪುನರುತ್ಥಾನಕ್ಕಾಗಿ ಶ್ರಮಿಸಿದರು ಎಂದರು.

    ಸ್ವಾಮೀಜಿಗಳೆಂದರೆ ಮಠದಲ್ಲಿ ಪೂಜೆ-ಪ್ರಸಾದ ಮಾಡಿಕೊಂಡಿರುವವರು ಎಂಬ ಸಂಪ್ರದಾಯವನ್ನು ಅಲ್ಲಗಳೆದು ಸ್ವಾಮೀಜಿಯಾದವರು ಸಮಾಜದ, ನಾಡು-ನುಡಿಯ ಏಳಿಗೆಗಾಗಿ ಮೀಸಲಾಗಿರಬೇಕಂಬ ಸಂದೇಶವನ್ನು ತಮ್ಮ ಬದುಕಿನುದ್ದಕ್ಕೂ ನೀಡಿದರು. ಅವರು ಹಾಕಿಕೊಟ್ಟ ವೈಚಾರಿಕ, ವೈಜ್ಞಾನಿಕ ಮಾರ್ಗದಲ್ಲಿ ಸಾಗಿ ಬಸವತತ್ತ್ವವನ್ನು ಪ್ರಸಾರ ಮಾಡುವುದು ನಮ್ಮ ಕರ್ತವ್ಯವಾಗಬೇಕು ಎಂದರು.

    ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಸ್ವಾಮೀಜಿ ಮಾತನಾಡಿ, ಡಾ.ತೋಂಟದ ಶ್ರೀಗಳು ನನ್ನ ಮಾರ್ಗದರ್ಶಕರಾಗಿದ್ದರು. ನನ್ನಂಥ ಹಲವಾರು ಸ್ವಾಮೀಜಿಗಳಿಗೆ ಪ್ರೇರಕಶಕ್ತಿಯಾಗಿದ್ದರು ಎಂದರು.

    ಸಮ್ಮುಖ ವಹಿಸಿದ್ದ ಶಿರೋಳ ತೋಂಟದಾರ್ಯ ಶಾಖಾಮಠದ ಗುರುಬಸವ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಭೈರನಹಟ್ಟಿಯ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಸಂಡೂರಿನ ಶ್ರೀಗಳು ಮಾತನಾಡಿದರು.

    ಬಸವೇಶ್ವರ ಜನಕಲ್ಯಾಣ ಟ್ರಸ್ಟ್​ನ ಕಲ್ಯಾಣವಾಣಿ ದಿನಪತ್ರಿಕೆ ಬಿಡುಗಡೆಗೊಳಿಸಲಾಯಿತು. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಡಾ.ಎಸ್.ಎಸ್ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಸಿಕೇರಿ, ಗುಳೇದಗುಡ್ಡ, ಬಸವಬೆಳವಿ, ಯಶವಂತನಗರ, ರಟಗಲ್ಲ, ಬಸವಕಲ್ಯಾಣ ಶ್ರೀಗಳು ಹಾಗೂ ದೆಹಲಿ ಮಹಾಂತ ದೇವರು ಉಪಸ್ಥಿತರಿದ್ದರು. ರೇವಣಸಿದ್ದಯ್ಯ ಮರಿದೇವರ ಮಠ ಹಾಗೂ ಮೃತ್ಯುಂಜಯ ಹಿರೇಮಠ ಸಂಗೀತ ಸೇವೆ ನೀಡಿದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

    ಪುಸ್ತಕ ಬಿಡುಗಡೆ: ಡಾ. ಸೋಮನಾಥ ಯಾಳವಾರ ಬರೆದ ‘ಕಲ್ಯಾಣ ಬಂಧು ತೋಂಟದ ಸಿಂಧು’, ಡಾ.ಬಾಲಚಂದ್ರ ಜಯಶೆಟ್ಟಿ ವಿರಚಿತ ‘ಪವಾಡವಲ್ಲದ ಪವಾಡಪುರುಷ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು’, ಎಲ್.ಎಸ್. ಶಾಸ್ತ್ರೀ ಬರೆದ ‘ವಿಶ್ವವಂಧ್ಯ ಬಸವೇಶ್ವರರು’ ಹಾಗೂ ಶಿವನಗೌಡ ಗೌಡರ ಸಂಗ್ರಹಿಸಿದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಸಂದರ್ಶನಗಳನ್ನು ಒಳಗೊಂಡ ‘ತೋಂಟದ ಶ್ರೀಗಳ ದರ್ಶನ, ಸಂದರ್ಶನ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts