More

  ಟೊಮ್ಯಾಟೊ ದರ ಇಳಿಕೆಯತ್ತ..!

  ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

  ಟೊಮ್ಯಾಟೊ ಬೆಳೆಗೆ ಕೀಟಬಾಧೆ ಕಡಿಮೆಯಾಗಿರುವುದು, ಉತ್ತರ ಭಾರತದ ರಾಜ್ಯಗಳಿಂದಲೂ ಬೇಡಿಕೆ ಇಳಿಕೆಯಾದ ಪರಿಣಾಮ ರಾಣೆಬೆನ್ನೂರ ಸೇರಿ ಜಿಲ್ಲೆಯ ಸ್ಥಳೀಯ ಎಪಿಎಂಸಿ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಬರುತ್ತಿದ್ದು, ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ.

  ಪ್ರತಿ 15 ಕೆಜಿ ಬಾಕ್ಸ್‌ಗೆ 2700 ರೂ.ವರೆಗೂ ಹೋಗಿದ್ದ ದರ ಇದೀಗ 500-600 ರೂ.ಗೆ ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 120 ರೂ.ಗೆ ಒಂದು ಕೆಜಿಯಂತೆ ಮಾರಾಟವಾಗುತ್ತಿದ್ದ ಟೊಮ್ಯಾಟೊ ಈಗ 40ರಿಂದ 50 ರೂಪಾಯಿಗೆ ಲಭ್ಯವಾಗುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೂ ಟೊಮ್ಯಾಟೊ ಬೆಲೆ ಏರಿಕೆ ಭಾರಿ ಸದ್ದು ಮಾಡಿತ್ತು. ಪೆಟ್ರೋಲ್‌ಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಆಗಿದ್ದ ಟೊಮ್ಯಾಟೊ ಈಗ ಮತ್ತೆ ಕುಸಿಯಲು ಆರಂಭಿಸಿದೆ.

  ಟೊಮ್ಯಾಟೊ ಬೆಲೆಯಲ್ಲಿ ಭಾರಿ ಏರಿಕೆಯಾಗಿ ಅದರ ಬೆಳೆಗಾರರಿಗೆ ಖುಷಿ, ಲಾಭ ಕೊಟ್ಟಿತ್ತು. ಕೆಲವು ವಾರಗಳಿಂದ ನಿರಂತರವಾಗಿ ಮೇಲ್ಮುಖವಾಗಿದ್ದ ಬೆಲೆ ಈಗ ದಿಢೀರ್ ಕುಸಿತ ಕಾಣುತ್ತಿದೆ. ದಿಢೀರ್ ಬೆಲೆ ಕುಸಿತ ಬೆಳೆಗಾರರಿಗೆ ಬೇಸರ ತರಿಸಿದೆ.

  2500 ರೂ.ನಿಂದ 600 ರೂ.ಗೆ ಕುಸಿತ…: ಕೆಲವೇ ದಿನದ ಹಿಂದೆ ಟೊಮ್ಯಾಟೊ 15 ಕೆಜಿ ತೂಕದ ಬಾಕ್ಸ್‌ಗೆ 2500 ರೂ.ನಿಂದ 2700 ರೂ. ಬೆಲೆ ಇತ್ತು. ಈ ವಾರದ ವಹಿವಾಟಿನಲ್ಲಿ ಬಾಕ್ಸ್‌ಗೆ ಗರಿಷ್ಠ 600 ರೂಪಾಯಿ ಸಿಕ್ಕಿದೆ. ಸ್ಥಳೀಯ ಮಾರುಕಟ್ಟೆಗೆ ಚಿತ್ರದುರ್ಗ, ಚಳ್ಳಕೆರೆ ಹಾಗೂ ಸುತ್ತಲಿನ ಜಿಲ್ಲೆಯಿಂದಲೂ ಟೊಮ್ಯಾಟೊ ಬರುತ್ತಿದೆ. ಬೇರೆ ರಾಜ್ಯಗಳಿಗೆ ಟೊಮ್ಯಾಟೊ ಕಳುಹಿಸುವುದನ್ನು ನಿಲ್ಲಿಸಲಾಗಿದೆ. ಅಲ್ಲದೆ, ಸ್ಥಳೀಯವಾಗಿ ಬೆಳೆದಿದ್ದ ಟೊಮ್ಯಾಟೊ ಇದೀಗ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಬೆಲೆ ಕುಸಿಯುತ್ತಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

  ಹೊಸದಾಗಿ ನಾಟಿ ಮಾಡಿದವರಿಗೆ ಆತಂಕ: ಟೊಮ್ಯಾಟೊ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿರುವುದನ್ನು ನೋಡಿದ ಜಿಲ್ಲೆಯ ನೂರಾರು ರೈತರು 1500ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ತಿಂಗಳ ಹಿಂದೆ ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡಿ ಬೆಳೆದಿದ್ದಾರೆ. ಅವುಗಳು ಮುಂದಿನ ತಿಂಗಳಲ್ಲಿ ಫಲ ನೀಡಲಿವೆ. ಮಾರುಕಟ್ಟೆಯಲ್ಲಿ ಸದ್ಯ ಬೆಲೆ ಇಳಿಕೆಯತ್ತ ಸಾಗಿದೆ. ಮುಂದೆ ಇನ್ನೂ ಬೆಲೆ ಇಳಿಕೆಯಾಗುವ ಲಕ್ಷಣ ದಟ್ಟವಾಗಿದೆ. ಇದು ಟೊಮ್ಯಾಟೊ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

  ಮಾರುಕಟ್ಟೆಗೆ ಟೊಮ್ಯಾಟೊ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಬರಲಾರಂಭಿಸಿದೆ. ಆದ್ದರಿಂದ ಬಾಕ್ಸ್‌ಗಳ ಬೆಲೆ ಕಡಿಮೆಯಾಗಿದೆ. ನಾವು ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮ್ಯಾಟೊವನ್ನು ಕೆಜಿ 50 ರೂ.ಗೆ ಹಾಗೂ ಕೊಂಚ ಮಾಸಿದ ಟೊಮ್ಯಾಟೊ ಕೆಜಿ 40 ರೂ.ಗೆ ಮಾರಾಟ ಮಾಡುತ್ತಿದ್ದೇವೆ.
  I ಮಲ್ಲಪ್ಪ ಅಣ್ಣೇರ, ವ್ಯಾಪಾರಸ್ಥ

  ಟೊಮ್ಯಾಟೊ ಬೇರೆ ರಾಜ್ಯಗಳಿಗೆ ಹೋಗುವುದು ನಿಂತಿದೆ. ಸ್ಥಳೀಯವಾಗಿ ಬೆಳೆದ ಟೊಮ್ಯಾಟೊ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಬೆಲೆ ಇಳಿಮುಖವಾಗಿದೆ. ಬೆಲೆ ಹೆಚ್ಚಳ ನೋಡಿಕೊಂಡು ರಾಣೆಬೆನ್ನೂರ ತಾಲೂಕಿನಲ್ಲಿ 300 ಹೆಕ್ಟೇರ್‌ನಷ್ಟು ಟೊಮ್ಯಾಟೊ ನಾಟಿ ಮಾಡಿದ್ದರು. ಬೆಲೆ ಉತ್ತಮವಾಗಿದ್ದರೆ ಅವರಿಗೆ ಅನುಕೂಲವಾಗಲಿದೆ.
  I ನೂರಅಹ್ಮದ್ ಹಲಗೇರಿ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts