More

    ಸ್ವಚ್ಛ ನಗರಿಯಲ್ಲೇ ಶೌಚಗೃಹಗಳ ಸಮಸ್ಯೆ

    ಅವಿನಾಶ್ ಜೈನಹಳ್ಳಿ ಮೈಸೂರು
    ಸಾಂಸ್ಕೃತಿಕ ನಗರಿ ಮೈಸೂರಿಗೆ ಸಾರ್ವಜನಿಕ ಶೌಚಗೃಹಗಳ ಸಮಸ್ಯೆ ಕಪ್ಪುಚುಕ್ಕೆಯಾಗಿ ಕಾಡುತ್ತಿದ್ದು, ಈ ಬಾರಿಯ ನಗರ ಪಾಲಿಕೆ ಬಜೆಟ್‌ನಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ.

    ನಗರದ ಪ್ರಮುಖ ರಸ್ತೆ ಮತ್ತು ಪ್ರವಾಸಿ ತಾಣಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸಾರ್ವಜನಿಕ ಶೌಚಗೃಹಗಳಿಲ್ಲ. ಇದ್ದರೂ ಉಪಯೋಗಿಸಲಾಗದ ಸ್ಥಿತಿಗೆ ತಲುಪಿವೆ. ಬಹುತೇಕ ಸಾರ್ವಜನಿಕ ಶೌಚಗೃಹಗಳು ಗಬ್ಬೆದ್ದು, ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣವಾಗಿ ಮಾರ್ಪಟ್ಟಿವೆ. ಈ ಸಂಬಂಧ ನಗರ ಪಾಲಿಕೆ ಬಜೆಟ್‌ನಲ್ಲಿ ಹಳೇ ಶೌಚಗೃಹಗಳನ್ನು ನಿರ್ವಹಣೆ ಮಾಡುವ ಜತೆಗೆ, ಇನ್ನೂ ಹೆಚ್ಚಿನ ಶೌಚಗೃಹ ನಿರ್ಮಾಣಕ್ಕೆ ಅನುದಾನ ನೀಡಬೇಕಾಗಿದೆ.

    ಬಹುತೇಕ ಇ-ಶೌಚಗೃಹಗಳು ಕೆಟ್ಟು ಬೀಗ ಹಾಕಲಾಗಿದೆ. ಸಾರ್ವಜನಿಕ ಶೌಚಗೃಹಗಳು ಗಬ್ಬೆದ್ದು, ಸಾಂಕ್ರಾಮಿಕ ರೋಗಗಳನ್ನು ಹರಡುವ ತಾಣವಾಗಿ ಮಾರ್ಪಟ್ಟಿವೆ. ಜನನಿಬಿಡ ಪ್ರದೇಶಗಳಲ್ಲಿ ಪ್ರಸ್ತುತ ಹತ್ತಾರು ಇ-ಶೌಚಗೃಹಗಳು ನಿರ್ಮಾಣಗೊಂಡಿದ್ದು, ಇ-ಶೌಚಗೃಹ ನಿರ್ಮಾಣಕ್ಕೆ ಲಕ್ಷಾಂತರ ರೂ. ವಿನಿಯೋಗಿಸಿದರೂ ಹಾಳಾಗಿವೆ.

    ವಿಶ್ವವಿಖ್ಯಾತ ಅರಮನೆ, ಮೃಗಾಲಯ ಮತ್ತಿತರ ಪ್ರವಾಸಿ ಸ್ಥಳಗಳಿಗೆ ವಾರ್ಷಿಕ 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ನಡುವೆ, ನಗರದ ಜನಸಂಖ್ಯೆ 10 ಲಕ್ಷ ದಾಟಿದೆ. ಆದರೆ ನಗರದಲ್ಲಿ ಒಟ್ಟಾರೆ 100 ಸಾರ್ವಜನಿಕ ಶೌಚಗೃಹಗಳಿದ್ದು, ಈ ಪೈಕಿ ಹತ್ತಾರು ಸಮುದಾಯ ಶೌಚಗೃಹಗಳು, ಇ-ಶೌಚಗೃಹಗಳು ಸೇರಿವೆ. ಇವುಗಳಲ್ಲಿ ಅರ್ಧದಷ್ಟು ಮಾತ್ರ ಬಳಕೆಗೆ ಯೋಗ್ಯವಾಗಿವೆ. ಇನ್ನುಳಿದವು ನಿರ್ವಹಣೆ ಕೊರತೆಯಿಂದ ದುಸ್ಥಿತಿ ತಲುಪಿವೆ. ಕೆಲವೆಡೆ ಶೌಚಗೃಹಗಳಿದ್ದರೂ ಸಾರ್ವಜನಿಕರು ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುವ ಮೂಲಕ ಅನೈರ್ಮಲ್ಯ ಸೃಷ್ಟಿಸುತ್ತಿದ್ದಾರೆ.

    ನಗರದ ಗಾಂಧಿಚೌಕ, ಹಾರ್ಡಿಂಜ್ ವೃತ್ತ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ದೇವರಾಜ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ನೂರಾರು ವ್ಯಾಪಾರಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಈ ಸ್ಥಳಗಳಲ್ಲಿ ಇರುತ್ತಾರೆ. ಆದರೆ ಜನದಟ್ಟಣೆಗೆ ತಕ್ಕಂತೆ ಸಾರ್ವಜನಿಕ ಶೌಚಗೃಹಗಳಿಲ್ಲ. ಈ ಸಮಸ್ಯೆ ಇದೇ ರೀತಿ ಮುಂದುವರಿದರೆ ಸಾಂಸ್ಕೃತಿಕ ನಗರಿ ಸ್ವಚ್ಛತೆಯಲ್ಲಿ ಇನ್ನಷ್ಟು ಹಿಂದಕ್ಕೆ ಹೋಗುವ ಸಾಧ್ಯತೆ ಇದೆ.

    ಹೆಚ್ಚಿನ ಶೌಚಗೃಹ ಬೇಕು

    ಗಾಂಧಿಚೌಕ ಸುತ್ತಮುತ್ತಲ ರಸ್ತೆಯಲ್ಲಿ ಜನರು ಸದಾ ಗಿಜಿಗಿಡುತ್ತಾರೆ. ಅಂಗಡಿಗಳಲ್ಲಿ ಮಾತ್ರವಲ್ಲದೆ, ಬೀದಿ ಬದಿಯಲ್ಲಿ ನೂರಾರು ವ್ಯಾಪಾರಸ್ಥರು ಬಟ್ಟೆ, ಹಣ್ಣು, ತರಕಾರಿ ಮಾರಾಟದಲ್ಲಿ ನಿರತರಾಗಿರುತ್ತಾರೆ. ಆಟೋ ಮತ್ತು ಟ್ಯಾಕ್ಸಿ ಚಾಲಕರೂ ಹೆಚ್ಚಾಗಿರುತ್ತಾರೆ. ಆದರೆ ಈ ರಸ್ತೆಯಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಗೃಹವಿಲ್ಲ. ಇಲ್ಲಿನ ವ್ಯಾಪಾರಸ್ಥರು ಮೂತ್ರ ವಿಸರ್ಜನೆಗೆ ಉಮಾ ಚಿತ್ರಮಂದಿರ ರಸ್ತೆಯ ಸಾರ್ವಜನಿಕ ಶೌಚಗೃಹಕ್ಕೆ ಹೋಗಬೇಕು. ಆದರೆ ಅಷ್ಟು ದೂರ ಹೋಗಬೇಕಲ್ಲ ಎಂಬ ಮನೋಭಾವದಿಂದ ಅನೇಕ ಜನರು ಸಮೀಪದಲ್ಲೇ ಇರುವ ಪುರಭವನದ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

    ಈ ರಸ್ತೆಯಲ್ಲಿನ ಅನೇಕ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವ, ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವ ಅಪಾರ ಸಂಖ್ಯೆಯ ಮಹಿಳೆಯರು ಮೂತ್ರ ವಿಸರ್ಜನೆಗಾಗಿ ಉಮಾ ಚಿತ್ರಮಂದಿರ ಗಲ್ಲಿಯ ಸಾರ್ವಜನಿಕ ಶೌಚಗೃಹದವರೆಗೆ ತೆರಳಬೇಕಿದೆ. ಲ್ಯಾನ್ಸ್‌ಡೌನ್ ಕಟ್ಟಡ ಬಳಿ ಶೌಚಗೃಹ ನಿರ್ಮಾಣವಾಗಿದ್ದರೂ ಸ್ವಚ್ಛತೆ ಇಲ್ಲದೆ ಸಾರ್ವಜನಿಕರು ಕಟ್ಟಡ ಹಿಂಭಾಗ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

    ಶಾಶ್ವತವಾಗಿ ಮುಚ್ಚಿದ ಇ-ಶೌಚಗೃಹಗಳು

    ನಗರದ ಜನನಿಬಿಡ ಪ್ರದೇಶಗಳಲ್ಲಿ ಪ್ರಸ್ತುತ ಹತ್ತಾರು ಇ-ಶೌಚಗೃಹಗಳು ನಿರ್ಮಾಣಗೊಂಡಿದ್ದರೂ ಬಹುತೇಕ ಬಂದ್ ಆಗಿವೆ. ಚಾಮುಂಡಿಪುರಂ ವೃತ್ತದ ಪಾರ್ಕ್ ಬಳಿಯ ಇ-ಶೌಚಗೃಹ ಒಮ್ಮೆಯೂ ಕಾರ್ಯನಿರ್ವಹಿಸಲೇ ಇಲ್ಲ. ಅದಕ್ಕೆ ಶಾಶ್ವತವಾಗಿಯೇ ಬೀಗ ಹಾಕಲಾಗಿದೆ. ದೇವರಾಜ ಅರಸು ರಸ್ತೆಯಲ್ಲಿ ಮೂರು, ಎಂಟಿಎಂಎಸ್ ಶಾಲೆ ಮುಂಭಾಗ, ಮಕ್ಕಾಜಿ ಚೌಕ ವಾಣಿಜ್ಯ ಸಂಕೀರ್ಣ ಬಳಿಯ ಇ ಶೌಚಗೃಹಗಳು ಹಾಳಾಗಿವೆ. ಶೌಚಗೃಹ ಸಮಸ್ಯೆ ತಲೆದೋರಿರುವುದು ಸಾಂಸ್ಕೃತಿಕ ನಗರಿಗೆ ಕಪ್ಪುಚುಕ್ಕೆಯಾಗಿದೆ.

    ನಗರದ ಕೆಲವೆಡೆ ಶೌಚಗೃಹಗಳ ಸಮಸ್ಯೆ ಇರುವ ಸಂಬಂಧ ದೂರುಗಳು ಕೇಳಿಬಂದಿವೆ. ಈ ಕುರಿತು ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಬಜೆಟ್‌ನಲ್ಲೂ ಶೌಚಗೃಹ ನಿರ್ಮಾಣ ಮತ್ತು ನಿರ್ವಹಣೆಗೆ ಅನುದಾನ ನೀಡಲು ಪ್ರಯತ್ನಿಸಲಾಗುತ್ತದೆ.
    ಶಿವಕುಮಾರ್, ಮೇಯರ್

    ವಿಶ್ವವಿಖ್ಯಾತ ಅರಮನೆ, ಮೃಗಾಲಯ ಮತ್ತಿತರ ಪ್ರವಾಸಿ ಸ್ಥಳಗಳಿಗೆ ವಾರ್ಷಿಕ 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶ್ವದಲ್ಲೇ ಮೈಸೂರಿಗೆ ವಿಶೇಷ ಸ್ಥಾನಮಾನ ಇದೆ. ಆದರೂ ಶೌಚಗೃಹಗಳ ಕೊರತೆ ಇರುವುದು ನಾಚಿಕೆಗೇಡು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೊದಲ ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕು.
    ಚಿನ್ಮಯ್, ಸಾರ್ವಜನಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts