More

    ಸಮಾಜವಾದಿ ಆರ್ಥಿಕ ನೀತಿ ಪ್ರತಿಪಾದಕ ಅಂಬೇಡ್ಕರ್; ಇಂದು ಪರಿನಿರ್ವಾಣ ದಿನ

    ಸಮಾಜವಾದಿ ಆರ್ಥಿಕ ನೀತಿ ಪ್ರತಿಪಾದಕ ಅಂಬೇಡ್ಕರ್; ಇಂದು ಪರಿನಿರ್ವಾಣ ದಿನಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಮಾಜಶಾಸ್ತ್ರದ ಪಂಡಿತರಾಗಿದ್ದಂತೆಯೇ ಆರ್ಥಿಕ ತಜ್ಞರೂ ಆಗಿದ್ದರು. ಅವರಿಗೆ ಆಧುನಿಕ ಭಾರತದ ಕನಸಿತ್ತು. ಅದಕ್ಕೆ ಪೂರಕವಾದ ಆರ್ಥಿಕ ನೀತಿಯನ್ನು ಪಾಲಿಸಬೇಕೆಂಬ ಆಸೆಯಿತ್ತು. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದ ಅಂಬೇಡ್ಕರ್ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯ ಆರಾಧಕರಾಗಿದ್ದರು. ಜೊತೆಗೆ ಸಮಾಜವಾದಿ ಅರ್ಥವ್ಯವಸ್ಥೆಯ ಪ್ರತಿಪಾದಕರಾಗಿದ್ದರು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತ ಜಮೀನ್ದಾರಿ ಊಳಿಗಮಾನ್ಯ ವ್ಯವಸ್ಥೆಯಾಗಿತ್ತು. ಇದನ್ನು ಸಮಾಜವಾದಿ ರಾಷ್ಟ್ರವಾಗಿ ಬದಲಿಸಲು ತಕ್ಕದಾದ ಅರ್ಥವ್ಯವಸ್ಥೆಯ ಮುನ್ನೋಟವಿರಬೇಕಾಗಿತ್ತು. ಈ ಸಂದರ್ಭದಲ್ಲಿ ಅಂಬೇಡ್ಕರ್ ನಮ್ಮ ಆರ್ಥಿಕ ನೀತಿ, ಉತ್ಪಾದನಾ ಸಂಬಂಧಗಳ ಜೊತೆ ನೆಲಜಲಗಳ ಲಭ್ಯತೆಯ ಜೊತೆ ಸಾಮಾಜಿಕ ಸಂಬಂಧಗಳು ಅವಲಂಬಿತವಾಗಬೇಕೆಂದು ಬಯಸಿದ್ದರು. ಕೇಂದ್ರ ಶಾಸನಸಭೆಯ ಅಲ್ಪಸಂಖ್ಯಾತರ ಸಮಿತಿಗೆ ಅವರು ಸಲ್ಲಿಸಿದ್ದ ಮನವಿಯ ಈ ಅಂಶಗಳನ್ನು ಗಮನಿಸಬಹುದು.

    1) ಪ್ರಸ್ತುತ ಸಾಮಾಜಿಕ, ರಾಜಕೀಯ ಅರ್ಥವ್ಯವಸ್ಥೆ ನ್ಯಾಯಸಮ್ಮತ ವಲ್ಲವೆಂದು ಘೋಷಿಸುವುದು. 2) ಒಬ್ಬ ವ್ಯಕ್ತಿ, ಒಂದು ಮೌಲ್ಯ, ಒಂದು ಮತದ ಆಧಾರದಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವುದು.

    3) ಈ ಉದ್ದೇಶಗಳನ್ನು ಈಡೇರಿಸಲು ‘ಸರ್ಕಾರಿ ಸಮಾಜವಾದ’ ಮತ್ತು ಸಂಸ ದೀಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವುದು. 4) ಅಸ್ತಿತ್ವದಲ್ಲಿರುವ ವ್ಯವಸ್ಥೆಯ ನ್ಯೂನತೆಗಳನ್ನು, ಸಾಮಾಜಿಕ ಸಂಸ್ಥೆಗಳಲ್ಲಿ ಬೇರುಬಿಟ್ಟಿರುವ ಅನೈತಿಕತೆಯ ಮುಖ ಹುಡುಕುವುದು. 5) ಸಂವಿಧಾನದ ಮೂಲಕ ಆದರ್ಶ ಸಮಾಜದ ಕಾರ್ಯಕ್ರಮ ರೂಪಿಸುವುದು. 6) ಕೃಷಿ ಕೈಗಾರಿಕೆಗಳ ಕುರಿತು ಸ್ಪಷ್ಟ ಸಮಾಜವಾದಿ ಧೋರಣೆಗಳನ್ನು ತಳೆಯುವುದು.

    ಭಾರತದ ಜಮೀನ್ದಾರಿ ಊಳಿಗಮಾನ್ಯ ವ್ಯವಸ್ಥೆಯು ಜಾತಿ ಆಧಾರದಲ್ಲಿ ಕೃಷಿ ಕಾರ್ವಿುಕರ ಮತ್ತು ಜಮೀನ್ದಾರರ ನಡುವಿನ ವರ್ಗವ್ಯತ್ಯಾಸಗಳನ್ನು ಹೇಳುವ ಸ್ಪಷ್ಟ ಮಾರ್ಗಗಳನ್ನು ಸೃಷ್ಟಿಸಿದೆ. ಆದ್ದರಿಂದ ಊಳಿಗಮಾನ್ಯ ವ್ಯವಸ್ಥೆಯನ್ನು ನಾಶಪಡಿಸಬೇಕು ಎಂದರೆ ಜಮೀನ್ದಾರಿ ಪದ್ಧತಿ ನಾಶವಾಗಬೇಕು. ಶ್ರಮಜೀವಿಗಳಾದ ಅಸ್ಪೃ್ಯ ಸಮುದಾಯಗಳ ‘ಬಿಟ್ಟಿ ಚಾಕರಿ’ ರದ್ದು ಮಾಡಬೇಕು. ಭೂಸುಧಾರಣೆಯನ್ನು ಜಾರಿಗೊಳಿಸಬೇಕು ಎಂಬುದು ಅಂಬೇಡ್ಕರರ ಮಹದಾಸೆಯಾಗಿತ್ತು. ‘ಉಳುವವನಿಗೆ ಭೂಮಿ’ ಎಂಬ ಘೋಷಣೆ ಗೇಣಿದಾರರಿಗೆ ನೆರವಾಯಿತು. ಆದರೆ ಕೃಷಿ ಕಾರ್ವಿುಕರಿಗೆ ಭೂ ಒಡೆತನವನ್ನು ತಂದುಕೊಡಲಿಲ್ಲ. ದಲಿತರು ಬಹುಸಂಖ್ಯಾತರು ಕೃಷಿ ಕೂಲಿಗಾರರಾಗಿದ್ದರಿಂದ ಭೂ ಸುಧಾರಣೆ ಅವರನ್ನು ತಲುಪಲಿಲ್ಲ. ಅಂಬೇಡ್ಕರ್​ಗೆ ಇದರ ಅರಿವಿತ್ತು. ಆದ್ದರಿಂದಲೇ ಭೂಮಿ ರಾಷ್ಟ್ರೀಕರಣವಾಗಬೇಕೆಂದು ಬಯಸಿದ್ದರು. ಸರ್ಕಾರ ನಿಗದಿಪಡಿಸಿದ ರೀತಿಯಲ್ಲಿ ಸಾಮೂಹಿಕ ಕೃಷಿ ಪದ್ಧತಿಯಲ್ಲಿ ಗೇಣಿದಾರರು ಭೂಮಿಯನ್ನು ತಮ್ಮೊಳಗೆ ಹಂಚಿಕೊಳ್ಳಬೇಕು. ಕೃಷಿಗೆ ಭೂಮಿ ನೀಡುವಾಗ ಜಾತಿ, ಧರ್ಮ ಅಥವಾ ಜನಾಂಗ ಆಧಾರವಾಗಬಾರದು, ಬದಲಾಗಿ ಸಾಮೂಹಿಕ ಕೃಷಿ ಪದ್ಧತಿಯಲ್ಲಿ ದುಡಿಯುವ ಎಲ್ಲ ರೈತರು ಸಮಾನರೆಂದು ಘೋಷಣೆ ಮಾಡಬೇಕು ಎಂದು ಪ್ರತಿಪಾದಿಸಿದರು. ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಸರ್ಕಾರವೇ ಒದಗಿಸಿ, ಸಹಕಾರಿ ಕೃಷಿ ಪದ್ಧತಿಯನ್ನು ರೂಪಿಸಲು ಬಯಸಿದ್ದರು. ರಷ್ಯಾ ದೇಶದ ಸಾಮೂಹಿಕ ಕೃಷಿ ಪದ್ಧತಿಯ ಪ್ರತಿಪಾದಕರಾಗಿದ್ದ ಅಂಬೇಡ್ಕರ್, ಭಾರತದ ಜಾತಿ ವ್ಯವಸ್ಥೆಯಲ್ಲಿ ಇದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದರು.

    ಅಂಬೇಡ್ಕರ್ ಅವರ ಕೈಗಾರಿಕಾ ನೀತಿ ಕೂಡ ಗಾಂಧೀಜಿಯವರ ಗುಡಿ ಕೈಗಾರಿಕೆ, ಗ್ರಾಮೀಣ ಕೈಗಾರಿಕಾ ಚಿಂತನೆಗಳಿಂದ ಭಿನ್ನವಾಗಿತ್ತು. ಅವರು ಬೃಹತ್ ಉದ್ದಿಮೆಗಳ ಪರವಾಗಿದ್ದರು. ಈ ಉದ್ದಿಮೆಗಳನ್ನು ಸರ್ಕಾರವೇ ಸ್ಥಾಪಿಸಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಕೈಗಾರಿಕೆ ಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲಿರಬೇಕು. ಪ್ರಪಂಚದ ಇತರ ದೇಶಗಳೊಡನೆ ಸ್ಪರ್ಧಿಸಲು ಆಧುನಿಕ ಉತ್ಪಾದನಾ ವ್ಯವಸ್ಥೆ ಮತ್ತು ಅದಕ್ಕೆ ಸೂಕ್ತ ಮಾರುಕಟ್ಟೆ ವಿಧಾನಗಳನ್ನು ರೂಪಿಸಬೇಕೆಂದರು. ಬಹುಶಃ ನೆಹರು ಕೂಡ ಇದೇ ಆರ್ಥಿಕ ನೀತಿಯ ದಾರಿಯಲ್ಲಿದ್ದರು. ಕೈಗಾರಿಕರಣದಿಂದ ಭಾರತದ ಗ್ರಾಮೀಣ ವ್ಯವಸ್ಥೆಯನ್ನು ಬದಲಿಸುವುದು ಸಾಧ್ಯವೆಂದು ಅಂಬೇಡ್ಕರರು ನಂಬಿದ್ದರು. ಕೃಷಿ ಆಧಾರಿತ ಕೈಗಾರಿಕೆಗಳು ಭಾರತದ ಅಗತ್ಯ. ಇವು ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮೂಲಭೂತ ಕೈಗಾರಿಕೆಗಳನ್ನು ಸರ್ಕಾರವೇ ನಡೆಸಬೇಕು, ಇತರ ಕೈಗಾರಿಕೆಗಳನ್ನು ಸರ್ಕಾರಿ ಸ್ವಾಮ್ಯದ ಅರೆಸರ್ಕಾರಿ ಕಾಪೋರೇಷನ್​ಗಳ ಮೂಲಕ ಲಾಭದಾಯಕವಾಗಿ ನಡೆಯುವಂತೆ ನೈಪುಣ್ಯತೆ ಸಾಧಿಸಬೇಕೆಂದು ಹೇಳಿದರು.

    ಅಂಬೇಡ್ಕರ್ ಪ್ರತಿಪಾದಿಸಿದ ‘ಪ್ರಭುತ್ವದ ಸಮಾಜವಾದ’ (State Socialism) ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ನಮ್ಮ ಸಮತೋಲಿತ ಮಿಶ್ರ ಆರ್ಥಿಕ ಪದ್ಧತಿ ಪೂರ್ಣ ಖಾಸಗೀಕರಣದ ಕಡೆಗೆ ಚಲಿಸಿದೆ. ಕಾರ್ವಿುಕ ಕಲ್ಯಾಣ ಅಂಬೇಡ್ಕರರ ಅತ್ಯಂತ ಪ್ರಿಯವಾದ ಕ್ಷೇತ್ರ. ಕಮ್ಯುನಿಸ್ಟ್ ಕಾರ್ವಿುಕ ಸಂಘಟನೆಗಳ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ ಕಾರ್ವಿುಕ ಕಲ್ಯಾಣದ ಅನೇಕ ಕಾನೂನುಗಳನ್ನು ಜಾರಿಗೆ ತಂದರು. ಮಾರ್ಕ್ಸ್ ವಾದದ ಆಳವಾದ ಅಭ್ಯಾಸ ಮಾಡಿದ್ದ ಅಂಬೇಡ್ಕರ್, ಅದರ ರೈತ-ಕಾರ್ವಿುಕ ಅಧಿಕಾರವನ್ನು ಒಪ್ಪದೆ ಪ್ರಜಾಪ್ರಭುತ್ವದ ದೊಡ್ಡ ಪ್ರತಿಪಾದಕರಾಗಿದ್ದರು. ಕಾರ್ವಿುಕ ಚಳವಳಿಯಲ್ಲಿದ್ದ ಜಾತಿ ತಾರತಮ್ಯವನ್ನು ಖಂಡಿಸುತ್ತಿದ್ದರು. ಈಗಲೂ ಜಾತಿ ತಾರತಮ್ಯದ ಸಮಸ್ಯೆಯನ್ನು ಕಾರ್ವಿುಕ ಚಳವಳಿಗಳು ಪರಿಗಣಿಸದಿರುವ ಕಾರಣದಿಂದ ದಲಿತ ಕಾರ್ವಿುಕರು ಪ್ರತ್ಯೇಕ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ. ಅಂಬೇಡ್ಕರ್ ಮಾರ್ಕ್ಸ್​ವಾದದಿಂದ ಪ್ರಭಾವಿತರಾಗಿ ಉತ್ಪಾದನಾ ಕ್ಷೇತ್ರ ಸರ್ಕಾರದ ಸ್ವಾಮ್ಯದಲ್ಲಿರಬೇಕು ಎಂಬುದನ್ನು ಒಪು್ಪತ್ತಾರೆ. ಸಂವಿಧಾನದಲ್ಲಿ ಆಸ್ತಿಯ ಹಕ್ಕು ಮೂಲಭೂತ ಹಕ್ಕಾಗಿ ಉಳಿದು ಕೊಂಡಿರುವಂತೆಯೇ ಅವರ ಆಸ್ತಿ ಸರ್ಕಾರದ ಸ್ವತ್ತಾಗಿರಬೇಕೆಂಬ ಕನಸು ನನಸಾಗಲಿಲ್ಲ. ಇಡೀ ಪ್ರಪಂಚದ ಆರ್ಥಿಕ ಬೆಳವಣಿಗೆ ಖಾಸಗೀಕರಣದ ಕಡೆಗೆ ಮತ್ತು ಖಾಸಗಿ ಬಂಡವಾಳ ಹೂಡಿಕೆಗೆ ಒಗ್ಗಿರುವುದರಿಂದ ‘ಪ್ರಭುತ್ವದ ಸಮಾಜವಾದ’ ಅರ್ಥ ಕಳೆದುಕೊಳ್ಳುತ್ತಿದೆ. ಖಾಸಗಿ ಬಂಡವಾಳ ಹೂಡಿಕೆಯಿಂದ ಲಾಭವೇ ಮುಖ್ಯವಾಗಿರುವುದರಿಂದ ಕಾರ್ವಿುಕ ಕಲ್ಯಾಣ ಕೂಡ ಮರೀಚಿಕೆಯಾಗಿದೆ. ಕಾರ್ವಿುಕ ಕಾನೂನುಗಳ ಇತ್ತೀಚಿನ ವಿವಾದಾತ್ಮಕ ತಿದ್ದುಪಡಿ ಕಾಯ್ದೆ ಕಾರ್ವಿುಕರ ಪಾಲಿನ ಮರಣಶಾಸನವಾಗಿದೆ. ಅಂಬೇಡ್ಕರ್ ಕೈಗಾರಿಕಾ ಕ್ರಾಂತಿಯ ಪರವಾಗಿದ್ದರು. ಇದರಿಂದ ದೇಶದ ಅಭ್ಯು ದಯವನ್ನು ನಿರೀಕ್ಷಿಸಿದ್ದರು. ಆದರೆ ಸರ್ಕಾರಿ ಸ್ವಾಮ್ಯ ಶಕ್ತಿ ಕಳೆದುಕೊಂಡು ಖಾಸಗಿ ಕ್ಷೇತ್ರಗಳು ವಿಜೃಂಭಿಸುವಂತಾಗಿದೆ. ಆದ್ದರಿಂದಲೇ ಸರ್ಕಾರ ಕೇವಲ ಮೇಲುಸ್ತುವಾರಿಯ ಕೆಲಸಕ್ಕೆ ಸೀಮಿತವಾಗಬೇಕಾದ ಸ್ಥಿತಿ ಒದಗಿದೆ. ದೇಶದ ಅಭಿವೃದ್ಧಿಗೆ ಕೃಷಿ, ಜಲಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂಬುದು ಅವರ ನೀತಿ. ಪ್ರಾಂತೀಯ ಅಡ್ಡಿ ಆತಂಕಗಳಿಂದ ನಮ್ಮ ದೇಶದ ಜಲಸಂಪನ್ಮೂಲ ಪೂರ್ಣ ಬಳಕೆಯಾಗುತ್ತಿಲ್ಲವೆಂದು ಅನೇಕ ದಾರಿಗಳನ್ನು ಸೂಚಿಸಿದರು. ದೇಶದಲ್ಲಿ ವಿವಿಧೋದ್ದೇಶ ನದಿ ಯೋಜನೆಗಳನ್ನು ಹಮ್ಮಿಕೊಳ್ಳಲು ಸೂಚಿಸಿದರು. ವಿದ್ಯುತ್ ಉತ್ಪಾದನೆ ಜತೆಗೆ, ನೀರಾವರಿ ಸೌಲಭ್ಯಗಳನ್ನು ವ್ಯಾಪಕವಾಗಿ ಬಳಸಲು ಇರುವ ಅವಕಾಶಗಳನ್ನು ತೋರಿಸಿದರು. ರಾಜ್ಯ-ರಾಜ್ಯಗಳ ನಡುವಿನ ಹೆಚ್ಚಿನ ಸಹಕಾರ ಇಂತಹ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿದೆ ಎಂದರು. ರಾಜ್ಯಗಳ ನಡುವಿನ ಅವೈಜ್ಞಾನಿಕ ಕಿತ್ತಾಟಕ್ಕೆ ಕೊನೆ ಹಾಡಿ ರಾಷ್ಟ್ರೀಯ ಜಲ ನೀತಿ ಜಾರಿಗೆ ಒತ್ತಾಯಿಸಿದರು. ಇದು ಅಂಬೇಡ್ಕರರ ದೂರದರ್ಶಿತ್ವ ಮತ್ತು ಸಮಗ್ರ ರಾಷ್ಟ್ರಕಲ್ಪನೆಯನ್ನು ತಿಳಿಸುತ್ತದೆ.

    ಅಂಬೇಡ್ಕರ್ ಆರ್ಥಿಕ ಚಿಂತನೆ ಸಮಾಜವಾದಿ ರಾಷ್ಟ್ರನಿರ್ವಣದ ಗುರಿ ಹೊಂದಿದೆ. ಆದ್ದರಿಂದಲೇ ಸಂವಿಧಾನದಲ್ಲಿ ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂಬ ಮಹತ್ತರ ಆಶಯಗಳನ್ನು ಒಳಗೊಂಡಿದೆ. ಮಹಿಳೆಯರನ್ನು ಉತ್ಪಾದನೆಯಲ್ಲಿ ತೊಡಗಿಸದಿದ್ದರೆ ದೇಶದ ಅಭಿವೃದ್ಧಿ ಅಸಾಧ್ಯವೆಂದರು. ಆದ್ದರಿಂದ, ಮಹಿಳಾ ಪರ ಕಾನೂನು ರಚಿಸಲು ತಾವು ಮಂತ್ರಿಯಾಗಿದ್ದ ಅವಧಿಯಲ್ಲಿ ‘ಹಿಂದು ಕೋಡ್ ಬಿಲ್’ ಮಂಡಿಸಿದರು. ಅದು ಪಾರ್ಲಿಮೆಂಟಿನ ಅನುಮೋದನೆ ಪಡೆಯಲಿಲ್ಲವೆಂದು ರಾಜೀನಾಮೆ ನೀಡಿದರು. ನಮ್ಮ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳಾ ಶಕ್ತಿಯನ್ನು ದೇಶದ ಉತ್ಪಾದನೆಯಲ್ಲಿ, ಕೃಷಿಯಲ್ಲಿ ತೊಡಗುವಂತೆ ಮಾಡಬೇಕು ಎಂದು ಪ್ರತಿಪಾದಿಸಿದರು. ಸ್ತ್ರೀ ಮತ್ತು ಪುರುಷರ ನಡುವಿನಲ್ಲಿರುವ ವೇತನ ತಾರತಮ್ಯ ವಿರೋಧಿಸಿದರು. ಲಿಂಗ ಅಸಮಾನತೆ ಹೋಗಬೇಕಾದರೆ ಮಹಿಳೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಪಡೆಯಬೇಕು, ಆಸ್ತಿಯ ಹಕ್ಕುದಾರಳಾಗಬೇಕೆಂದು ನಿರಂತರವಾಗಿ ಪ್ರತಿಪಾದಿಸಿದರು. ಆದರೂ ಅಂಬೇಡ್ಕರ್ ಅವರನ್ನು ಮೀಸಲಾತಿಯ ಜನಕನೆಂದೂ ದಲಿತ ನಾಯಕನೆಂದೂ ಮಾತ್ರ ಗುರುತಿಸುತ್ತಿರುವುದು ಅವರ ಪ್ರತಿಭೆಗೆ ಮಾಡುತ್ತಿರುವ ಅವಮಾನವೇ ಸರಿ. ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದು ಹೇಳುತ್ತಿದ್ದರೂ ಪೀಡಿತರ ಸಂಖ್ಯೆ ಗಣನೀಯವಾಗಿರುವಾಗ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳನ್ನು ಪುನರ್ ಪರಿಶೀಲನೆಗೊಡ್ಡಬೇಕು. ಆ ಚಿಂತನೆಯ ಬೆಳಕಿನಲ್ಲಿ ನಮ್ಮ ನೀತಿ, ನಿರೂಪಣೆ ರೂಪಿಸುವುದು ಒಳ್ಳೆಯದು. ಇದರಿಂದ ಖಾಸಗಿ ಬಂಡವಾಳದ ಭರಾಟೆಗೆ ತಡೆಯೊಡ್ಡಿ ಸಮತೋಲನದ ಆರ್ಥಿಕ ಬೆಳವಣಿಗೆ ನಮ್ಮನ್ನು ಸರಿದಾರಿಗೆ ಒಯ್ಯಬಹುದು.

    (ಲೇಖಕರು ರಾಜ್ಯಸಭಾ ಸದಸ್ಯರು, ಕವಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts